ಬಜೆಟ್‍ನಲ್ಲಿ ಚಿಕ್ಕಮಗಳೂರನ್ನು ಸಿಎಂ ನಿರ್ಲಕ್ಷಿಸಿದ್ದಾರೆ: ಶಾಸಕ ಸಿ.ಟಿ.ರವಿ ಆರೋಪ

Update: 2018-07-14 17:57 GMT

ಚಿಕ್ಕಮಗಳೂರು, ಜು.14: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಬಜೆಟ್‍ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿಯೂ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರಸ್ತಾಪಿಸದೇ ಜಾಣ ಕುರುಡು ಪ್ರದರ್ಶಿಸಿದ್ದಾರೆಂದು ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‍ನಲ್ಲಿ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಪ್ರತ್ಯೇಕ ಹಾಲು ಒಕ್ಕೂಟ ಮತ್ತು ನೀರಾವರಿ ಯೋಜನೆಗೆ 828 ಕೋಟಿ ರೂ. ಅನುದಾನ ನೀಡುವ ಭರವಸೆಯಿತ್ತು. ಆದರೆ ಬಜೆಟ್‍ನಲ್ಲಿ ಯಾವುದೇ ಅನುದಾನ ನೀಡದೆ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಲಾಗಿದೆ. ಇದನ್ನು ಜಿಲ್ಲೆಯ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದರು. 

ಮಳೆಯಿಂದ ಮಲೆನಾಡು ಭಾಗದಲ್ಲಿ ರಸ್ತೆ ಮತ್ತು ಬೆಳೆಹಾನಿಯಾಗಿದೆ. ಹಾನಿ ಪರಿಹಾರಕ್ಕೆ ವಿಶೇಷ್ ಪ್ಯಾಕೇಜ್ ನೀಡುವಂತೆ ಕೇಳಿದ್ದೆವು. ಸದನದಲ್ಲಿ ವಿಶೇಷ ಪ್ಯಾಕೇಜ್ ಬಗ್ಗೆ ಪ್ರಸ್ತಾಪ ಮಾಡಲಿಲ್ಲ, ಯಾವ್ಯಾವ ಬೇಡಿಕೆ ಇಟ್ಟಿದ್ದೆವೋ ಅದ್ಯಾವುದನ್ನು ನೀಡಲಿಲ್ಲ. ಕೊನೆಯ ಪಕ್ಷ ಕೇಂದ್ರ ಸರಕಾರಕ್ಕೆ ಕಾಫಿ ಟೆಕ್ನಾಲಜಿ ಪಾರ್ಕ್, ಕಾಳುಮೆಣಸು ಪಾರ್ಕ್ ನಿರ್ಮಾಣದ ಪ್ರಸ್ತಾವನೆ ಕಳಿಸಬೇಕು ಎಂದು ಬೇಡಿಕೆ ಇಟ್ಟಿದ್ದೆವು ಅದನ್ನು ಮಾಡಿಲ್ಲ ಎಂದು ಅವರು ರವಿ ಆರೋಪಿಸಿದರು.

ಜಿಲ್ಲೆಯಲ್ಲಿ ತೋಟ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಇಎಸ್‍ಐ ಆಸ್ಪತ್ರೆ ಮಾಡುವ ಬೇಡಿಕೆ ಇಟ್ಟಿದ್ದೇವೆ. ಇಎಸ್‍ಐ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳಿಸಿಕೊಡಲು ಸದನದಲ್ಲಿ ಒಪ್ಪಿಕೊಂಡಿರುವುದನ್ನು ಹೊರತು ಪಡಿಸಿ ಕಾಫಿ, ಮೆಣಸು ಬೆಳೆಯ ಪ್ಯಾಕೇಜ್ ಯಾವುದಕ್ಕೂ ಸ್ಪಂದಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News