ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯದ ಹೋರಾಟಕ್ಕೆ ನಾನು ಬದ್ಧ: ಶಾಸಕ ಜ್ಯೋತಿಗಣೇಶ್

Update: 2018-07-15 11:31 GMT

ತುಮಕೂರು,ಜು.15: ಕೊಳಗೇರಿ ನಿವಾಸಿಗಳ ಸಂಘದ ಕಾರ್ಯಚಟುವಟಿಕೆಗಳನ್ನು ಕಳೆದ 15 ವರ್ಷಗಳಿಂದ ಬಲ್ಲವನಾಗಿದ್ದು, ಸಮಾಜದಲ್ಲಿರುವ ಅಶಕ್ತರ ಪರವಾಗಿ ಹೋರಾಡುತ್ತಿರುವ ಕೊಳಗೇರಿ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಸಾಹಿತ್ಯ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯದ ಹೋರಾಟಕ್ಕೆ ನನ್ನ ಬೆಂಬಲವೂ ಇದೆ ಎಂದರು.

ಕಳೆದ 25 ವರ್ಷಗಳಲ್ಲಿ ಬಡವರಿಗೆ ಸೈಟ್‍ಗಳ ಹಂಚಿಕೆಯಾಗಿಲ್ಲ. ವ್ಯವಸ್ಥೆಯಲ್ಲಿ ಬಡವರಿಗೆ ನ್ಯಾಯ ದೊರಕಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ನನ್ನ ಅವಧಿಯಲ್ಲಿ ನಿವೇಶನ ಇಲ್ಲದ ಜನರಿಗೆ ಸೈಟ್ ವಿತರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳ ಲಾಗುವುದು. ನಗರದಲ್ಲಿ 20 ಸಾವಿರಕ್ಕೂ ಮೇಲ್ಪಟ್ಟು ಮನೆ ಇಲ್ಲದವರಿಗೆ 2022ರ ವೇಳೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ದೊರಕಿಸಿಕೊಡಲು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕೊಳಚೆ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಮನೆ ಇಲ್ಲದವರು ಜುಲೈ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಎನ್.ಆರ್.ಕಾಲೋನಿ, ಕುರಿಪಾಳ್ಯ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ದಿಬ್ಬೂರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವೆ. ಕೊಳಗೇರಿ ನಿವಾಸಿಗಳ ಕುಂದುಕೊರತೆ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಎರಡರಿಂದ ಮೂರು ವರ್ಷಗಳಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು ಎಂದು ಅವರು ನುಡಿದರು.

ಅವಕಾಶವಂಚಿತ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿರುವುದು ಅಭಿನಂದನೀಯ. ಮಕ್ಕಳು ಶಿಕ್ಷಿತರಾದರೆ ಸಮುದಾಯದ ವಿಮೋಚನೆ ಸಾಧ್ಯ. ವಿಧಾನಸಭೆಯಲ್ಲಿ ಬಡಜನರ ಮತ್ತು ಕೊಳಗೇರಿ ಸಮಸ್ಯೆಗಳ ಬಗ್ಗೆ ಯಾವ ವಿಷಯ ಪ್ರಸ್ತಾಪಿಸಬೇಕೆನ್ನುವ ಬಗ್ಗೆ ಮುಂದಿನ ದಿನದಲ್ಲಿ ಸ್ಲಂ ಸಮಿತಿಯ ಜೊತೆ ಸಮಾಲೋಚಿಸಲಾಗುವುದು ಎಂದರು.

ಆಶಯ ನುಡಿಗಳನ್ನಾಡಿದ ಪ್ರೊ.ಕೆ.ದೊರೈರಾಜ್ ಶಿಕ್ಷಣದಿಂದ ಸಾಮಾಜಿಕ ಸ್ಥಾನಮಾನ ಸಿಗುವುದರ ಜೊತೆಗೆ ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ಆದ್ದರಿಂದ ಕೊಳಗೇರಿಗಳಲ್ಲಿ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸಲು ಇಂತಹ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ನಾವು ಹೆಚ್ಚು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಫಲಿತಾಂಶ ದೊರಕುತ್ತದೆ ಎಂಬುದಕ್ಕೆ ನಿಮ್ಮ ಹೋರಾಟವೇ ಸಾಕ್ಷಿ. ನಮ್ಮ ಕೂಗು ಸಾಮಾಜಿಕ ಅಸಮಾನತೆಯ ಭಾಗವಾಗಿರುವದರಿಂದ ಆಳುವ ಪ್ರಭುತ್ವ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದರು. 

ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಇಕ್ಬಾಲ್ ಅಹಮದ್, ಸಹಬಾಳ್ವೆ ಸಂಸ್ಥೆಯ ದೀಪಿಕಾ, ಯುವ ಮುಖಂಡರಾದ ವಿನಯ್, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಎ.ನರಸಿಂಹಮೂರ್ತಿ ವಹಿಸಿದ್ದರು. ಶೆಟ್ಟಾಳಯ್ಯ,ಅರುಣ್,ಶೃತಿ,ರಘು,ಗಾಯತ್ರಿ,ಲತಾ ಮತ್ತು ಕೆಂಪರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News