ಮುಖ್ಯಮಂತ್ರಿ ಕುಮಾರಸ್ವಾಮಿ ನಿದ್ರೆ ಮಾಡುತ್ತಿಲ್ಲ: ಮಾಜಿ ಪ್ರಧಾನಿ ದೇವೇಗೌಡ

Update: 2018-07-15 13:31 GMT

ಹುಬ್ಬಳ್ಳಿ, ಜು. 15: ಮುಖ್ಯಮಂತ್ರಿ ಕುಮಾರಸ್ವಾಮಿ ನಿದ್ರೆ ಮಾಡುತ್ತಿಲ್ಲ. ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಸಮ್ಮಿಶ್ರ ಸರಕಾರದಲ್ಲಿ ಅವರ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ರವಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಸಿಎಂ ಕುಮಾರಸ್ವಾಮಿ ಬಿಡುವುದಿಲ್ಲ. ಇಪ್ಪತ್ತೈದು ವರ್ಷಗಳ ಕಾಲ ಲಿಂಗಾಯತರು ಈ ರಾಜ್ಯವನ್ನು ಆಳಿದ್ದಾರೆ. ಅವರು ಈ ಭಾಗಕ್ಕೆ ಏನು ಮಾಡಿದ್ದಾರೆ ಎಂಬೆಲ್ಲ ವಿಷಯಗಳ ಬಗ್ಗೆ ಚಚೆಯಾರ್ಗಲಿ ಎಂದು ಪ್ರತಿಕ್ರಿಯೆ ನೀಡಿದರು.

1956ರಿಂದ ಇಂದಿನ ವರೆಗೆ ಯಾವ ಭಾಗಕ್ಕೆ ಎಷ್ಟು ಕೊಟ್ಟಿದ್ದಾರೆಂದು ಶ್ವೇತಪತ್ರ ಹೊರಡಿಸಿ, ಎರಡು ದಿನ ಚರ್ಚೆ ನಡೆಸುವಂತೆ ಕುಮಾರಸ್ವಾಮಿಯವರಿಗೆ ಸಲಹೆ ನೀಡುತ್ತೇನೆ. ಡಾ.ನಂಜುಂಡಪ್ಪ ವರದಿ ಮುಂದಿಟ್ಟುಕೊಂಡು ಚರ್ಚೆ ಮಾಡಲಿ. ಉತ್ತರ ಕರ್ನಾಟಕಕ್ಕೆ ಕೊಟ್ಟ ದುಡ್ಡೆಲ್ಲ ರಾಜಕಾರಣಿಗಳ ಮನೆಗೆ ಹೋಗಿದೆಯೇ? ಎಂದು ದೇವೇಗೌಡ ಪ್ರಶ್ನಿಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದರು. ಎಚ್.ಕೆ.ಪಾಟೀಲರು ಈಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಅವರು ಈ ಹಿಂದೆ ಸಚಿವರಾಗಿದ್ದಾಗ ತಮ್ಮ ಗದಗ ಜಿಲ್ಲೆಗೆ ಎಷ್ಟು ಹಣ ನೀಡಿದ್ದಾರೆಂದು ಹೇಳಲಿ ಎಂದು ಗುಡುಗಿದರು.

ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯ ಆಗಿಲ್ಲ. ಭಾಷಾವಾರು ಪ್ರಾಂತ್ಯದ ವಿಂಗಡಣೆ ನಂತರ ಉತ್ತರ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಲೆಕ್ಕ ತರಿಸುತ್ತೇನೆ ಎಂದ ದೇವೇಗೌಡ, ಲೋಕಸಭೆ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷ ಚುರುಕುಗೊಳಿಸಲು ಹುಬ್ಬಳ್ಳಿಗೆ ಬಂದಿದ್ದೇನೆ. ನನಗೆ ಪಕ್ಷವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಕಳೆದ ಚುನಾವಣೆಯಲ್ಲಿ 17 ಜಿಲ್ಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಸ್ಥಳೀಯ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ದೇವೇಗೌಡ ಅಪೇಕ್ಷೆಪಟ್ಟರು. ಈ ವೇಳೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

‘ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರಕಾರ ಎಂದು ಪಾಟೀಲ ಪುಟ್ಟಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಮೈಸೂರು ಪ್ರದೇಶದ ಭಾಗಗಳು ಎಷ್ಟು ಅಭಿವೃದ್ದಿಯಾಗಿವೆ ಎನ್ನುವುದರ ಬಗ್ಗೆ ಹಾಗೂ ಡಾ.ನಂಜುಡಪ್ಪ ವರದಿ ಸೇರಿ ಸುದೀರ್ಘ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಲಹೆ ನೀಡುವೆ’
-ದೇವೇಗೌಡ ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News