ಸಾಮೂಹಿಕ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ: ದೇವೇಗೌಡ

Update: 2018-07-15 14:08 GMT

ಹುಬ್ಬಳ್ಳಿ, ಜು. 15: ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ, ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಡಾ.ಪರಮೇಶ್ವರ್ ಪದಗ್ರಹಣದ ವೇಳೆ ತೃತೀಯ ರಂಗದ ಎಲ್ಲ ನಾಯಕರು ಆಗಮಿಸಿದ್ದರು. ಆದರೆ, ತೃತೀಯ ರಂಗ ಇನ್ನೂ ಸ್ಪಷ್ಟವಾಗಿ ಹೊರಹೊಮ್ಮಿಲ್ಲ ಎಂದರು. ಒಂದೊಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಬಲ ಒಂದೊಂದು ರೀತಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾಬಲ್ಯ ಹೊಂದಿವೆ ಎಂದ ಅವರು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೆಲವು ರಾಜ್ಯಗಳಲ್ಲಿ ಹೊಂದಾಣಿಕೆ ಆಗಬಹುದು. ಚುನಾವಣೆ ನಂತರವೂ ಹೊಂದಾಣಿಕೆ ನಡೆಯಬಹುದು. ಸಾಂದರ್ಭಿಕ ನಿಲುವು ಬದಲಾವಣೆಯಾಗುತ್ತದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಐದಾರು ಗುಂಪುಗಳಿವೆ. ಯಾರ ಶಕ್ತಿ ಎಷ್ಟಿದೆ ಎಂಬುದನ್ನು ಅಳತೆ ಮಾಡುವುದು ಕಷ್ಟ. ಬಿಜೆಪಿ ವಿರುದ್ಧವಾಗಿ ಕಾಂಗ್ರೆಸ್ ಜತೆ ಹೊಂದಿಕೊಂಡು ಹೋಗುವ ಪಕ್ಷಗಳ ಚಿತ್ರಣ ಸ್ಪಷ್ಟವಿಲ್ಲ ಎಂದ ಅವರು, ಬೆಂಗಳೂರಿಗೆ ಆಗಮಿಸಿದ್ದ ವಿವಿಧ ಪಕ್ಷಗಳ 29 ನಾಯಕರು ಒಂದಾಗುತ್ತಾರೆಂದು ನಾನು ಹೇಳುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗುವಾಗ ಒಂದೆಡೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ. ಜೆಡಿಎಸ್ ಪಕ್ಷವನ್ನು ಉಳಿಸಿಕೊಂಡು ಹೋಗುವುದು ನನ್ನ ಹೋರಾಟ ಎಂದ ಅವರು, ಬಿಜೆಪಿ ವಿರುದ್ಧದ ನಾಯಕತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ನನಗೆ ಹಿರಿತನವಿದೆ. ಆದರೆ, ನಮ್ಮ ಪಕ್ಷದ ಶಕ್ತಿಯ ಅರಿವೂ ನಮಗಿದೆ ಎಂದರು.

ರಾಹುಲ್ ನಾಯಕತ್ವಕ್ಕೆ ಅಭ್ಯಂತರವಿಲ್ಲ;
‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ, ಪ್ರಧಾನಿ ಆಕಾಂಕ್ಷೆಗೆ ನಮ್ಮ ಕಡೆಯಿಂದ ಅಭ್ಯಂತರವಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಮಾಡುವುದರ ಬಗ್ಗೆ ಕಾಂಗ್ರೆಸ್ ನಿರ್ಧರಿಸುತ್ತದೆ. ನಮಗೆ ಲೋಕಸಭೆಯಲ್ಲಿ ಎಷ್ಟು ಸೀಟು ಬರುತ್ತದೆ ಎಂಬುದನ್ನು ನೋಡಬೇಕು. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಕುರಿತು ಚರ್ಚೆಯಾಗಬೇಕು’
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News