ಶಿವಮೊಗ್ಗ: 'ರಸ್ತೆ ಸುರಕ್ಷತಾ ಮಾಸಾಚರಣೆ' ಪ್ರಯುಕ್ತ ಪೊಲೀಸರಿಂದ ಜನಜಾಗೃತಿ ಬೈಕ್ ಜಾಥಾ

Update: 2018-07-15 14:39 GMT

ಶಿವಮೊಗ್ಗ, ಜು.15: ಪ್ರಸ್ತುತ ತಿಂಗಳು ಪೊಲೀಸ್ ಇಲಾಖೆಯು 'ರಸ್ತೆ ಸುರಕ್ಷತಾ ಮಾಸಾಚರಣೆ' ನಡೆಸುತ್ತಿದ್ದು, ಇದರ ಅಂಗವಾಗಿ ಭಾನುವಾರ ಶಿವಮೊಗ್ಗ ನಗರದ ಸಂಚಾರಿ ಠಾಣೆಗಳ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್‍ಗಳಲ್ಲಿ ಸಂಚರಿಸುವ ಮೂಲಕ, ದ್ವಿಚಕ್ರ ವಾಹನ ಚಾಲನೆ ಮಾಡುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜನಜಾಗೃತಿ ಮೂಡಿಸುವ ಕಾರ್ಯ ನಡೆಸಿದರು. 

ಪೂರ್ವ ಸಂಚಾರಿ ಪೊಲೀಸ್ ಠಾಣೆ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳ ಸುಮಾರು 50 ಕ್ಕೂ ಅಧಿಕ ಪೊಲೀಸರು ಒಟ್ಟಾಗಿ ಈ ಬೈಕ್ ಜಾಥಾ ನಡೆಸಿದರು. ಟ್ರಾಫಿಕ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಗಳಾದ ಡಿ.ಕೆ.ಸಂತೋಷ್‍ಕುಮಾರ್ ಹಾಗೂ ರಾಂಕುಮಾರ್ ರವರ ನೇತೃತ್ವದಲ್ಲಿ ನಡೆಯಿತು. 

ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದ ಅಶೋಕ ವೃತ್ತದಿಂದ ಆರಂಭವಾದ ಬೈಕ್ ಜಾಥಾವು ಬಿ.ಹೆಚ್.ರಸ್ತೆ, ಎ.ಎ.ವೃತ್ತ, ಗೋಪಿ ವೃತ್ತ, ಜೈಲ್ ಸರ್ಕಲ್, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಿತು. ಅತ್ಯಂತ ಶಿಸ್ತುಬದ್ದವಾಗಿ ಸಾಗಿದ ಪೊಲೀಸರ ಬೈಕ್ ಜಾಥಾವು ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.  

'ಜುಲೈ ತಿಂಗಳಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ನಡೆಸಲಾಗುತ್ತಿದೆ. ಸಂಚಾರಿ ಪೊಲೀಸ್ ಠಾಣೆಗಳ ಮೂಲಕ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಹೆಲ್ಮೆಟ್ ಕಡ್ಡಾಯ ಹಾಗೂ ಮಹತ್ವದ ಬಗ್ಗೆ ಭಾನುವಾರ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಬೈಕ್‍ಗಳ ಚಾಲನೆಯ ವೇಳೆ ಮುಂಬದಿ ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ ಅದೆಷ್ಟೋ ಚಾಲಕರು ಬೈಕ್ ಚಾಲನೆಯ ವೇಳೆ ಹೆಲ್ಮೆಟ್ ಧರಿಸದಿರುವುದು ಕಂಡುಬರುತ್ತದೆ. ಅಪಘಾತಕ್ಕೀಡಾದ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ಅದೆಷ್ಟೊ ಬೈಕ್ ಮುಂಬದಿ-ಹಿಂಬದಿ ಸವಾರರು ಅಸುನೀಗುತ್ತಿದ್ದಾರೆ. ಈ ಕಾರಣದಿಂದ ಸಂಚಾರಿ ಠಾಣೆಗಳ ಸಿಬ್ಬಂದಿಗಳೆಲ್ಲರೂ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಸಾರ್ವಜನಿಕರ ಗಮನ ಸೆಳೆಯುವಲ್ಲಿ ಈ ಜಾಥಾ ಯಶಸ್ವಿಯಾಗಿದೆ' ಎಂದು ಜಾಥಾದಲ್ಲಿ ಭಾಗವಹಿಸಿದ್ದ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News