ಗಾಳಿಯ ಅಬ್ಬರಕ್ಕೆ ಕೊಡಗು ತತ್ತರ: ಧರೆಗುರುಳಿದ ನೂರಾರು ಮರಗಳು

Update: 2018-07-15 16:48 GMT

ಮಡಿಕೇರಿ, ಜು.15: ಕಳೆದ ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯ ಅಬ್ಬರಕ್ಕೆ ಕೊಡಗು ತತ್ತರಿಸಿ ಹೋಗಿದೆ. ಎರಡು ವಾರಗಳ ಧಾರಾಕಾರ ಮಳೆಯಿಂದ ಸುಧಾರಿಸಿಕೊಳ್ಳಲಾಗದ ಕೊಡಗಿನ ಜನ ಈಗ ಗಾಳಿಯ ರಭಸಕ್ಕೆ ಬೆಚ್ಚಿ ಬಿದ್ದಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. ಮರಗಳು ಬಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು ಹಾಗೂ ಹಲವು ಮನೆಗಳು ಹಾನಿಗೊಳಗಾಗಿವೆ. ಗ್ರಾಮಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ಮುಳುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೀಸುವ ಗಾಳಿಯ ಜೊತೆಗೆ ಮಳೆ ಸುರಿಯುತ್ತಿರುವುದರಿಂದ ನದಿ, ತೊರೆಗಳ ನೀರಿನ ಮಟ್ಟ ಪ್ರವಾಹದ ರೂಪದಲ್ಲಿಯೇ ಇದೆ. ಮಡಿಕೇರಿ ತಾಲೂಕಿನಲ್ಲಿ ಶೀತಗಾಳಿ ಬೀಸುತ್ತಿದೆ. ಕೆಲವು ಕಡೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ಮರಗಳು ಬೀಳುವ ಸಾಧ್ಯತೆಗಳು ಇತ್ತಾದರೂ ಸ್ವಲ್ಪದರಲ್ಲೇ ಪಾರಾದ ಘಟನೆಯೂ ನಡೆದಿದೆ.

ಅನಾಹುತ, ಅಪಾರ ನಷ್ಟ
ಸುಂಟಿಕೊಪ್ಪ ಸುತ್ತ ಮುತ್ತಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಭಾರೀ ಗಾಳಿ ಮಳೆಯಾಗಿದ್ದು, ಮರ, ವಿದ್ಯುತ್ ಕಂಬಗಳು, ಮನೆಗಳು ಬಿದ್ದು ಹಾನಿಯುಂಟಾಗಿದೆ. ಹಲವು ಗ್ರಾಮಗಳಿಗೆ ಮತ್ತು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹಲವು ಗ್ರಾಮಗಳು ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿವೆ. ಮರಗಳು ಬೀಳಬಹುದೆನ್ನುವ ಆತಂಕದಲ್ಲಿ ಬಡಕೂಲಿ ಕಾರ್ಮಿಕರು ತೋಟಗಳಲ್ಲಿ ಕೆಲಸ ನಿರ್ವಹಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. 

ನಾಕೂರು ಶಿರಂಗಾಲ ಗ್ರಾ.ಪಂ. ವ್ಯಾಪ್ತಿಯ ಮಳ್ಳೂರು ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಎಂ.ಜಿ.ಗಣಪತಿ ಅವರ ಮನೆಗೆ ಮರ ಬಿದ್ದ ಪರಿಣಾಮ ಮೇಲ್ಚಾವಣಿ ಹಾನಿಯಾಗಿದೆ. ಮನೆಯಲ್ಲಿದ್ದ ಪತ್ನಿ ರುಕ್ಮಿಣಿ ಅವರ ತಲೆಗೆ ಗಂಭೀರ ಗಾಯವುಂಟಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ. ಮನೆಯ ಪಕ್ಕದ ಶೆಡ್ ಮೇಲೂ ಮರ ಬಿದ್ದ ಪರಿಣಾಮ ಶೆಡ್ ನಲ್ಲಿದ್ದ ಮಾರುತಿ ಓಮ್ನಿ ಮತ್ತು ಬೈಕಿಗೆ ಹಾನಿಯಾಗಿದೆ. ರೂ.2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸ್ಕೂಲ್‍ಬಾಣೆಯ ರಮೇಶ್ ಪೂಜಾರಿ ಮತ್ತು ಶಿವರಾಮ ಎಂಬವರ ಮನೆಯ ಹಿಂಭಾಗಕ್ಕೆ ಪಕ್ಕದ ತೋಟದ ಭಾರೀ ಗಾತ್ರದ ಮರ ಬಿದ್ದಿದ್ದು ಗೋಡೆ ಹಾಗೂ ಮೇಲ್ಚಾವಣಿಗಳು ಹಾನಿಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕೊಡಗರಹಳ್ಳಿ ವಾಟರ್ ಮ್ಯಾನ್ ಮಂಜು ಅವರ ಮನೆಗೆ ಮರ ಬಿದ್ದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮೇಲ್ಚಾವಣಿ ಸಂಪೂರ್ಣ ಹಾನಿಗಿಡಾಗಿದ್ದು ಇದರಿಂದ 50 ಸಾವಿರ ರೂ.ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.   

ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯ ಪಕ್ಕದಲ್ಲಿರುವ ಮುತ್ತಪ್ಪ ಎಂಬುವವರ ಮನೆಯ ಮೇಲೆ ಶನಿವಾರ ರಾತ್ರಿ ಭಾರಿ ಗಾತ್ರದ ಬೀಟೆ ಮರವು ಬಿದ್ದ ಪರಿಣಾಮ ಮೇಲ್ಚಾವಣಿ, ಮನೆಯ ಗೋಡೆಗಳು ಬಿರುಕುಗೊಂಡು ಹಾನಿಯಾಗಿದೆ. ಘಟನೆ ಸಂದರ್ಭ ನಿವಾಸಿಗಳು ಮನೆಯಲ್ಲಿದ್ದು, ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಕಂಬಿಬಾಣೆಯಲ್ಲೂ ಮರಗಳು ಬಿದ್ದಿದ್ದು, ಹಾನಿಗೊಂಡ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುಂಟಿಕೊಪ್ಪ ಪಟ್ಟಣ, ಮಾದಾಪುರ ರಸ್ತೆ, ಚೆಟ್ಟಳ್ಳಿ ರಸ್ತೆ, ನಾಕೂರು, ಕೊಡಗರಹಳ್ಳಿ, ಕಂಬಿಬಾಣೆ, ಕಲ್ಲೂರು, ಹೆರೂರು, ಹೋರೂರು, ಹಾಲೇರಿ,  ಕಾಂಡನಕೊಲ್ಲಿ ರಸ್ತೆಗಳಲ್ಲಿ ಬಾರಿ ಗಾತ್ರದ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು, ತಂತಿಗಳು ಮುರಿದು ಬಿದ್ದಿವೆ. ಲಕ್ಷಾಂತರ ರೂ. ನಷ್ಟವಾಗಿದ್ದು, ವಾಹನಗಳ ಸಂಚಾರಕ್ಕೂ ತೊಡಕು ಉಂಟಾಗಿದೆ. ಚೆಟ್ಟಳ್ಳಿ, ಸಿದ್ದಾಪುರ ಹಾಗೂ ಕಡಗದಾಳು ಭಾಗದಲ್ಲಿ ಮರಗಳು ಧರೆಗುರುಳಿವೆ. ಚೆಟ್ಟಳ್ಳಿಯಲ್ಲಿ ಬಲವಾಗಿ ಬೀಸಿದ ಗಾಳಿಗೆ ಮನೆಯೊಂದರ ಮೇಲ್ಚಾವಣಿ ಹಾರಿ ಹೋಗಿ ರಸ್ತೆಯ ಮೇಲೆ ಬಿದ್ದ ಘಟನೆಯೂ ನಡೆದಿದೆ.

ಗುಹ್ಯ ಶಾಲೆಯ ಬಳಿ ಮಣಿ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಾದಾಪುರ ಸಮೀಪದ ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸದ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ ಸೋಮವಾರಪೇಟೆ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್ಸೊಂದು ಕೂದಲೆಳೆಯ ಅಂತರದಲ್ಲಿ  ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದೆ. ಭಾರೀ ಗಾತ್ರದ ಮರ ರಸ್ತೆಗೆ ಬಿದ್ದಿದ್ದು, ಬಸ್‍ನಲ್ಲಿದ್ದ 30ಕ್ಕೂ ಹೆಚ್ಚಿನ ಪ್ರಯಾಣಿಕಕರು ಕೂದೆಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಪಕ್ಕದಲ್ಲಿದ್ದ ಮೋರಿಗೆ ಢಿಕ್ಕಿ ಹೊಡೆದು ಸ್ಥಳದಲ್ಲಿ ಸಿಲುಕಿಕೊಂಡಿದೆ.

ಮಾದಾಪುರ ಸಮೀಪದ ಕಾಜೂರು ಬಳಿ ಮರ ಬಿದ್ದು, ಮರದ ಕೊಂಬೆಗಳು ಈ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಓಮ್ನಿ ವಾಹನದ ಮೇಲೆ ಬಿದ್ದಿದೆ. ಓಮ್ಮಿ ವಾಹನಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, ವಾಹನದಲ್ಲಿದ್ದ 3 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೋಟದ  ಮರವೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹೊದಿಸಿದ್ದ ಸಿಮೆಂಟ್‍ಶೀಟ್‍ಗಳು ಒಡೆದು ಹೋಗಿದ್ದು, ದಿನ ಬಳಕೆ  ವಸ್ತುಗಳಿಗೆ ಹಾನಿಯಾದ ಘಟನೆ ಐಗೂರು ಬಳಿ ನಡೆದಿದೆ. ಮಾದಾಪುರ ಬಳಿ ಮರ ಉರುಳಿ ಬಿದ್ದು, ಕರೆಂಟ್ ಕಂಬಗಳು ಮತ್ತು ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗೆ ಹಾನಿಯಾಗಿದ್ದು, ಮರ ತೆರವು ಮತ್ತು ವಿದ್ಯುತ್ ಲೈನ್ ದುರಸ್ಥಿ ಕಾರ್ಯ ನಡೆಯುತ್ತಿದೆ. ಭಾರಿ ಗಾಳಿ ಮತ್ತು ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ಅಡ್ಡಿ ಉಂಟಾದ ಬಗ್ಗೆ ವರದಿಯಾಗಿದೆ.

ಶಾಸಕರ ಭೇಟಿ
ಸೋಮವಾರಪೇಟೆ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲಿಸಿದರು. ಮನೆ ಕಳೆದುಕೊಂಡವರಿಗೆ ಧೈರ್ಯ ತುಂಬಿದ ಅವರು ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್ಚಿನ ಸಿಬ್ಬಂದಿಗಳನ್ನು ಬಳಸಿಕೊಂಡು ಹಾನಿಗೊಳಗಾಗದ ಟ್ರಾನ್ಸ್ ಫಾರ್ಮರ್ ಗಳು ಹಾಗೂ ಕಂಬಗಳನ್ನು ದುರಸ್ತಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಧಾರಾಕಾರ ಮಳೆಯಿಂದ ಹಾನಿಗೊಳಗಾಗಿರುವ ಮಂಗಳೂರು ರಸ್ತೆಯ ಎರಡು ಪ್ರದೇಶಗಳಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಕೋಟ್ಯಾಂತರ ರೂ.ನಷ್ಟ
ಕಳೆದ ಎರಡು ವಾರಗಳ ಮಹಾಮಳೆ ಮತ್ತು ಇತ್ತೀಚೆಗೆ ಬೀಸುತ್ತಿರುವ ಗಾಳಿಯ ರಭಸಕ್ಕೆ ಸಿಲುಕಿದ ಕೊಡಗು ಕೋಟ್ಯಾಂತರ ರೂ.ಗಳ ನಷ್ಟವನ್ನು ಅನುಭವಿಸುತ್ತಿದೆ. ವಿದ್ಯುತ್ ಇಲಾಖೆಗೆ ಅಪಾರ ನಷ್ಟ ಉಂಟಾಗಿದ್ದು, ರಸ್ತೆ ಹಾಗೂ ಸೇತುವೆಗಳು ಕೂಡ ಬಹುತೇಕ ಹಾನಿಗೊಳಗಾಗಿವೆ. ಗದ್ದೆಗಳು ಜಲಾವೃತಗೊಂಡು ರೈತರು ಕೃಷಿ ಕಾರ್ಯ ಮಾಡದ ಪರಿಸ್ಥಿತಿ ಇದೆ. ಕಾಫಿ ತೋಟಗಳು ಕೊಳೆ ರೋಗದ ಭೀತಿಯೊಂದಿಗೆ ಮರಗಳು ಬಿದ್ದು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲೀಗ ವ್ಯಾಪಾರ, ವಹಿವಾಟಿಗೂ ಅಡ್ಡಿಯಾಗಿದ್ದು, ನಷ್ಟದ ಪ್ರಮಾಣ ಬೆಳೆಯುತ್ತಲೇ ಇದೆ. ತಕ್ಷಣ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೊಡಗು ಜಿಲ್ಲೆಗೆ ಆದ್ಯತೆಯ ಮೇರೆಗೆ ಹೆಚ್ಚಿನ ಮೊತ್ತದ ಪರಿಹಾರವನ್ನು ಘೋಷಣೆ ಮಾಡಬೇಕೆಂದು ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News