ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತ: ನ್ಯಾ.ಸಂತೋಷ್ ಹೆಗ್ಡೆ ವಿಷಾದ

Update: 2018-07-15 17:14 GMT

ಮಂಡ್ಯ, ಜು.15: ನಮ್ಮ ಪೂರ್ವಿಕರು ಜೈಲಿಗೆ ಹೋಗಿ ಬಂದವರಿಗೆ ಸಮಾಜದಿಂದ ಬಹಿಷ್ಕರಿಸುತ್ತಿದ್ದರು. ಆದರೆ, ಇಂದು ಜೈಲಿಗೆ ಹೋಗಿ ಬರುವವರಿಗೆ ಹಾರ ಹಾಕಿ ಮೂಲಕ ಸ್ವಾಗತ ಕೋರಲಾಗುತ್ತಿದೆ. ಇಂತಹ ಸಮಾಜದಲ್ಲಿ ನಾವಿದ್ದೇವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ.ಎನ್.ಸಂತೋಷ್ ಹೆಗ್ಡೆ ವಿಷಾದಿಸಿದ್ದಾರೆ.

ಶ್ರೀಮತಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ಗಾಂಧಿಭವನದಲ್ಲಿ ರವಿವಾರ ನಡೆದ ಶತಾಯುಷಿ ಸಾಹಿತಿ ದಿ.ಸೀತಾಸುತರವರ 120ನೇ ವರ್ಷದ ಸಂಸ್ಮರಣೆ ಹಾಗೂ ಡಾ.ವಿ.ಟಿ.ಸುಶೀಲ ಜಯರಾಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಬದಲಾವಣೆ ಆಗದಿದ್ದರೆ ಬಹಳಷ್ಟು ಕಷ್ಟ ಎದುರಗಾಗಲಿವೆ ಎಂದು ಎಚ್ಚರಿಸಿದರು. ನನ್ನ ವಯಸ್ಸಿನವರಿಗೆ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಯುವಕ- ಯುವತಿಯರಿಂದ ಸಮಾಜದ ಬದಲಾವಣೆ ಸಾದ್ಯ. ಈ ಹಿನ್ನೆಲೆಯಲ್ಲಿ ನಾನು ಈಗಾಗಲೇ 1018 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಚರ್ಚಿಸಿ, ಅವರ ಅಭಿಪ್ರಾಯ ತಿಳಿದುಕೊಳ್ಳಲು ಮುಂದಾಗಿದ್ದೇನೆ ಎಂದು ಅವರು ಹೇಳಿದರು.

ನಮ್ಮ ಹಿರಿಯರು ಕಟ್ಟಿದ ಮೌಲ್ಯಗಳು ಕಾಣೆಯಾಗಿವೆ. ದುರಾಸೆಬಿಟ್ಟು ತೃಪ್ತಿ ಮನೋಭಾವ ಹಾಗೂ ಹಿರಿಯರ ಪರಂಪರೆಯಾದ ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಕನಿಷ್ಠ ಇವೆರಡು ಮೌಲ್ಯಗಳನ್ನಾದರೂ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಪ್ರತಿವರ್ಷ ಹಗರಣಗಳು ಬಯಲಾಗುತ್ತಿವೆ. ವಾಸ್ತವವಾಗಿ ಬಯಲಾದ ಹಗರಣಗಳಿಗಿಂತ ಬಯಲಾಗದೆ ಉಳಿದಿರುವ ಹಗರಣಗಳು ಹೆಚ್ಚು ಇರುತ್ತವೆ ಎಂದು ಅವರು ಭ್ರಷ್ಟಾಚಾರದ ಸ್ವರೂಪವನ್ನು ವಿವರಿಸಿದರು.

ಪುಟ್ಟಚ್ಚಿ ಕುಟುಂಬದ ಶ್ಲಾಘನೆ: ಪುಟ್ಟಚ್ಚಿ ಸಿದ್ದೇಗೌಡರ ಕುಟುಂಬ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಮಾದರಿಯಂತೆ ಅವರ ಮಕ್ಕಳು ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂತೋಷ್ ಹೆಗ್ಡೆ, ಸಿದ್ದೇಗೌಡರ ಕುಟುಂಬದವರು ಆಸ್ಪತ್ರೆಗೆ ನಿರ್ಮಿಸಿಕೊಟ್ಟಿರುವ ಡಯಾಲಸಿಸ್ ಕೇಂದ್ರ ಹಾಗೂ ಗರ್ಭಿಣಿಯರ ವಾರ್ಡ್ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶೌರ್ಯಪತ್ರ ವಿಜೇತ(ಮರಣೋತ್ತರ) ಲೆಪ್ಟಿನೆಂಟ್ ಕರ್ನಲ್ ಈ.ಕೆ.ನಿರಂಜನ್ ಅವರ ಪತ್ನಿ ಡಾ.ರಾಧಿಕಾ ದೇಶ ಸೇವಾ ಪ್ರಶಸ್ತಿ, ಧಾರವಾಡದ ಸಾಹಿತಿ ಡಾ.ಹೇಮ ಪುಟ್ಟಣಶೆಟ್ಟಿ ಅವರಿಗೆ ಸಾಹಿಸುತ ಹೆಸರಿನ ಸಾಹಿತ್ಯ ಸೇವಾ ಪ್ರಶಸ್ತಿ ಹಾಗೂ ಡಾ.ವಿ.ಟಿ.ಸುಶೀಲ ಜಯರಾಂ ವೈದ್ಯಕೀಯ ಪ್ರಶಸ್ತಿಯನ್ನು ಡಾ.ಬಿ.ರಮಣರಾವ್ ಅವರಿಗೆ ನೀಡಿ ಗೌರವಿಸಲಾಯಿತು.

ಬಿಇ ವಿದ್ಯಾರ್ಥಿನಿ ಮಲ್ಲನಾಯಕನಹಳ್ಳಿಯ ಎಂ.ಎಸ್.ಭವ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.

ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಸೀತಾಸುತರನ್ನು ಕುರಿತು ಮಾತನಾಡಿದರು. ಟ್ರಸ್ಟ್ ಪದಾಧಿಕಾರಿಗಳಾದ ಡಾ.ಕೆ.ಎಸ್.ಜಯರಾಂ, ಡಾ.ಕೆ.ಎಸ್.ಕೃಷ್ಣ, ಕೆ.ಎಸ್.ಶ್ರೀಕಂಠಸ್ವಾಮಿ, ಡಾ.ಕೆ.ಜೆ.ದಿನೇಶ್, ಡಾ.ಡಿ.ಉಷಾರಾಣಿ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News