ಲೋಕಸಭೆ ಚುನಾವಣೆಗೆ ಸಜ್ಜಾಗಲು ದಿನೇಶ್ ಗುಂಡೂರಾವ್ ಸೂಚನೆ

Update: 2018-07-15 17:19 GMT

ಮಂಡ್ಯ, ಜು.15: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಸಮನ್ವಯತೆಯೊಂದಿಗೆ ಪಕ್ಷಕ್ಕೆ ಹೊಸ ಶಕ್ತಿ ತುಂಬುವ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಹೊಸ ನಾಯಕತ್ವ ಬೆಳೆಸುವ ತುರ್ತು ಅಗತ್ಯವಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಹಳೇಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ಪಕ್ಷಕ್ಕೆ ನೇರ ಎದುರಾಳಿಯಾಗಿತ್ತು. ಆದರೆ, ನಂತರ ಜೆಡಿಎಸ್ ಜತೆ ಸರಕಾರ ರಚನೆ ಮಾಡಿರುವುದರಿಂದ ಪಕ್ಷದೊಳಗೆ ಒಗ್ಗಟ್ಟು ಕಾಯ್ದುಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಮೈತ್ರಿ ಸರಕಾರವಿರುವಾಗ ಅಸಹನೆ ಸಹಿಸಿಕೊಳ್ಳಬೇಕು. ವಿರೋಧ ಎದುರಿಸುವಾಗ ವೈಮನಸ್ಸು ಬಿಟ್ಟು ಒಟ್ಟಾಗಬೇಕು. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ, ಇತರ ಮುಖಂಡರು ಕುಳಿತು ಚರ್ಚಿಸಿ ಸಮನ್ವಯತೆ ಕಾಪಾಡಬೇಕು ಎಂದು ಅವರು ಹೇಳಿದರು.

ಸರಕಾರದಲ್ಲಿ ಉಪಮುಖ್ಯಮಂತ್ರಿ ಕಾಂಗ್ರೆಸ್‍ನವರಿದ್ದು, ಸ್ಥಳೀಯ ಮಟ್ಟದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ನ್ಯಾಯ ದೊರಕಿಸಿಕೊಡಲು ಸಂಪೂರ್ಣ ಸಹಕಾರ ನೀಡುತ್ತೇವೆ. ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯನವರ ನಾಯಕತ್ವದಲ್ಲಿ  ಪಕ್ಷ ಸಂಘಟನೆಯನ್ನು ಸದೃಢವಾಗಿ ಬೆಳಸೋಣ ಎಂದರು.

ನಾನು ಯಾರ ಪರವೂ ಅಲ್ಲ, ಯಾರ ವಿರೋಧಿಯೂ ಅಲ್ಲ. ಯಾರೂ ಸಹ ನನ್ನ ಬಳಿಗೆ ದೂರನ್ನು ಹೊತ್ತು ತರಬೇಡಿ. ದೂರು ಹೇಳುವುದು ಸುಲಭ. ಆದರೆ, ಎಲ್ಲರನ್ನೂ ಒಗ್ಗಟ್ಟಿನಿಂದ ಮುನ್ನಡೆಸುವುದು ಬಹಳ ಕಷ್ಟ. ಸಮನ್ವಯತೆಯಿಂದ ಮುನ್ನಡೆಯುವುದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ದಿನೇಶ್ ಖಡಕ್ ನುಡಿದರು. ಆ.3 ರಿಂದ 5ರವರೆಗೆ ಸಂಸದೀಯ ಮುಖಂಡರೊಂದಿಗೆ ಚರ್ಚೆ ನಡೆಯಲಿದ್ದು, ಜಿಲ್ಲಾಮಟ್ಟದ ಸಮಾವೇಶಗಳನ್ನು ನಡೆಸುವ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಮೊದಲ ಹಂತದ ಮುಖಂಡರು ಒಗ್ಗಟ್ಟಾದರೆ, ನಂತರದಲ್ಲಿ ಎರಡನೇ ಹಂತದ ಮುಖಂಡರಲ್ಲಿ ಸಮನ್ವಯ ಮೂಡಿಸಲು ಸಾಧ್ಯವಾಗುತ್ತದೆ. ಇದನ್ನು  ಅರಿತು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಸಂಪಂಗಿ, ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ನಗರಸಭೆ ಅಧ್ಯಕ್ಷೆ ಷಹಜಾನ್, ಎಪಿಎಂಸಿ ಅಧ್ಯಕ್ಷೆ ಪಲ್ಲವಿ,  ಅಮರಾವತಿ ಚಂದ್ರಶೇಖರ್, ರವಿಕುಮಾರ್ ಗಣಿಗ, ಸಿ.ಎಂ.ದ್ಯಾವಪ್ಪ, ಇತರ ಮುಖಂಡರು ಹಾಜರಿದ್ದರು.

ಕಾರ್ಯಕರ್ತರ ನಡುವೆ ವಾಗ್ವಾದ
ಗಣಿಗ ರವಿಕುಮಾರ್ ಬೆಂಬಲಿಗರು ಮತ್ತು ಕೆಲವು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ವಾಗ್ವಾದ, ಮಾತಿನ ಚಕಮಕಿಯಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮುಜುಗರಕ್ಕೊಳಗಾದರು.

ಕಳೆದ ಚುನಾವಣೆಯಲ್ಲಿ ಪರಾಜಿತರಾದ ಗಣಿಗ ರವಿಕುಮಾರ್ ನಂತರ, ಕೃತಜ್ಞತೆ ಹೇಳಲಿಲ್ಲ. ಇವರನ್ನು ನಂಬಿ ಊರಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಕಾರ್ಯಕರ್ತರೊಬ್ಬರು ಆಕ್ಷೇಪಿಸಿದರು. ಈ ಸಂದರ್ಭ ಗಣಿಗ ರವಿಕುಮಾರ್ ಮತ್ತು ಮತ್ತೊಂದು ಗುಂಪಿನ ನಡುವೆ ವಾಗ್ವಾದ ಉಂಟಾಯಿತು. ಈ ಬೆಳವಣಿಗೆಯಿಂದ ಬೇಸರಗೊಂಡ ದಿನೇಶ್ ಗುಂಡುರಾವ್, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News