ಮಲೆನಾಡಲ್ಲಿ ತಗ್ಗಿದ ಮುಂಗಾರು ಮಳೆಯ ಅಬ್ಬರ: ಜಲಾಶಯಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹ

Update: 2018-07-15 18:03 GMT

ಶಿವಮೊಗ್ಗ, ಜು. 15: ಕಳೆದೊಂದು ವಾರದಿಂದ ಭಾರೀ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡಿನಲ್ಲಿ, ಭಾನುವಾರ ವರ್ಷಧಾರೆಯ ಅಬ್ಬರ ಕಡಿಮೆಯಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಗಳ ನೀರಿನ ಹರಿವಿನಲ್ಲಿ ಕ್ರಮೇಣ ಇಳಿಕೆ ಕಂಡುಬರುತ್ತಿದೆ. ಇದರಿಂದ ಜಿಲ್ಲೆಯ ಹಲವೆಡೆ ತಲೆದೋರಿದ್ದ ಪ್ರವಾಹ ಸ್ಥಿತಿ ತಹಬದಿಗೆ ಬರುತ್ತಿದೆ. ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ. 

ಇತ್ತೀಚೆಗೆ ಜಿಲ್ಲೆಯಾದ್ಯಂತ ಬಿದ್ದ ಧಾರಾಕಾರ ವರ್ಷಧಾರೆಯಿಂದ, ಕೆರೆಕಟ್ಟೆ ಹಾಗೂ ಜಲಾಶಯಗಳಲ್ಲಿ ನೀರಿನ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಜು. 1 ರಿಂದ 15 ರವರೆಗೆ ಲಿಂಗನಮಕ್ಕಿಯಲ್ಲಿ ಸುಮಾರು 20 ಅಡಿ ಹಾಗೂ ಭದ್ರಾ ಜಲಾಶಯದಲ್ಲಿ 23 ಅಡಿಯಷ್ಟು ನೀರು ಸಂಗ್ರಹವಾಗಿದೆ. ಉಳಿದಂತೆ ನೆರೆ ಪರಿಸ್ಥಿತಿ ಕಂಡುಬಂದಿದ್ದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲೂಕಿನ ಹಲವೆಡೆ ಭಾನುವಾರ ವರ್ಷಧಾರೆಯ ಪ್ರಮಾಣ ಕಡಿಮೆಯಾಗಿತ್ತು. ಪ್ರವಾಹ ಸೃಷ್ಟಿಸಿದ್ದ ನದಿಗಳು ಶಾಂತವಾಗಿದ್ದವು. ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದ್ದ ಕಾರಣದಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 

ಮಳೆ ವಿವರ: ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಯಡೂರಿನಲ್ಲಿ 142 ಮಿ.ಮೀ. (ಮಿಲಿ ಮೀಟರ್), ಮಾಸ್ತಿಕಟ್ಟೆಯಲ್ಲಿ 112 ಮಿ.ಮೀ., ಹುಲಿಕಲ್ 97 ಮಿ.ಮೀ., ಮಾಣಿ 92 ಮಿ.ಮೀ. ಮಳೆಯಾಗಿದೆ. ಉಳಿದಂತೆ ತಾಲೂಕು ಕೇಂದ್ರಗಳಾದ ಹೊಸನಗರದಲ್ಲಿ 133.4 ಮಿ.ಮೀ., ತೀರ್ಥಹಳ್ಳಿಯಲ್ಲಿ 42.8 ಮಿ.ಮೀ., ಶಿವಮೊಗ್ಗದಲ್ಲಿ 9.2 ಮಿ.ಮೀ., ಭದ್ರಾವತಿಯಲ್ಲಿ 20.6 ಮಿ.ಮೀ., ಸೊರಬದಲ್ಲಿ 18 ಮಿ.ಮೀ., ಸಾಗರದಲ್ಲಿ 21.4 ಮಿ.ಮೀ. ಹಾಗೂ ಶಿಕಾರಿಪುರದಲ್ಲಿ 14.2 ಮಿ.ಮೀ. ವರ್ಷಧಾರೆಯಾಗಿದೆ. ಕಳೆದ ಕೆಲ ದಿನಗಳಿಂದ ಉತ್ತಮ ವರ್ಷಧಾರೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರದಲ್ಲಿ ಭಾನುವಾರ ಮಳೆ ಕಡಿಮೆಯಾಗಿತ್ತು.

ಡ್ಯಾಂ ವಿವರ: ಶನಿವಾರ ಇಡೀ ದಿನ ಬಿದ್ದ ಮಳೆಯಿಂದ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಭಾನುವಾರದ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 74,919 ಕ್ಯೂಸೆಕ್ ಇದೆ. ಹೊರ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂನ ನೀರಿನ ಮಟ್ಟ 1792.45 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1774.40 ಅಡಿಯಿತ್ತು. 

ಭದ್ರಾ ಡ್ಯಾಂನ ಒಳಹರಿವಿನಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, 31,304 ಕ್ಯೂಸೆಕ್ ಇದೆ. 1246 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 169. (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 126.10 ಅಡಿಯಿತ್ತು. ಮಾಣಿ ಡ್ಯಾಂನ ನೀರಿನ ಮಟ್ಟ 1914.86 (ಗರಿಷ್ಠ ಮಟ್ಟ : 1952) ಮೀಟರ್ ಇದೆ. 6288 ಕ್ಯೂಸೆಕ್ ಒಳಹರಿವಿದೆ. ಉಳಿದಂತೆ ತುಂಗಾ ಡ್ಯಾಂ ಕಳೆದ ತಿಂಗಳೇ ಗರಿಷ್ಠ ಮಟ್ಟ ತಲುಪಿದ್ದು, ಪ್ರಸ್ತುತ 64,209 ಕ್ಯೂಸೆಕ್ ಒಳಹರಿವಿದ್ದು, 63,306 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಾಭದ್ರಾ ಡ್ಯಾಂಗೆ ಬಿಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News