ಕೊಪ್ಪ: ಅರಣ್ಯಾಧಿಕಾರಿಗಳ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

Update: 2018-07-15 18:40 GMT

ಕೊಪ್ಪ, ಜು.15: ಚಿಕ್ಕ ಆಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಹರಾವರಿ ಗ್ರಾಮದ ಸ.ನಂ. 158ರ ಜಮೀನಿನಲ್ಲಿ ಎಚ್.ಕೆ. ದಿನೇಶ್ ಎಂಬವರು 5 ಎಕರೆ ಜಾಗದಲ್ಲಿ ಗಿಡ ನೆಟ್ಟು ತೋಟ ಮಾಡಿರುವುದನ್ನು ಕೊಪ್ಪ ಡಿಎಫ್‍ಒ ರಣಾವತ್, ಎಸಿಎಫ್ ಬೋರಯ್ಯ ಮಾರ್ಗದರ್ಶನದಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಲೋಕೇಶ್ ನೇತೃತ್ವದಲ್ಲಿ ತೆರವು ಮಾಡಿದ್ದಾರೆಂದು ಆರೋಪಿಸಿ ಮಾಜಿ ಶಾಸಕ  ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೊಪ್ಪ ಡಿಎಫ್‍ಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಡಿಎಫ್‍ಒ ರಣಾವತ್, ಎಸಿಎಫ್ ಬೋರಯ್ಯನವರನ್ನು ತರಾಟೆಗೆ ತೆಗೆದುಕೊಂಡ ಜೀವರಾಜ್,  ನಾನು ಕ್ಷೇತ್ರದಲ್ಲಿ 14 ವರ್ಷ ಶಾಸಕನಾಗಿದ್ದಾಗ ಯಾವುದೇ ಒತ್ತುವರಿ ಮಾಡಲು ಬಿಟ್ಟಿಲ್ಲ. ಹಳೆ ಒತ್ತುವರಿಯನ್ನು ಮುಟ್ಟಬೇಡಿ, ಹೊಸ ಒತ್ತುವರಿಗೆ ಬಿಡಬೇಡಿ ಎಂದಿದ್ದೆ. ಬುಧವಾರ ಗಿಡ ಕಡಿದು ಹಾಕಿರುವ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂಬುದಕ್ಕೆ ನಿಮ್ಮಲ್ಲಿ ಏನು ದಾಖಲೆ ಇದೆ ತೋರಿಸಿ. ನಾನು ಶಾಸಕನಾಗಿದ್ದಾಗ ನಿಮ್ಮ ವರ್ತನೆ ಸರಿ ಇತ್ತು. ಶಾಸಕರು ಬದಲಾದ ಕೂಡಲೇ ನಿಮ್ಮ ವರ್ತನೆಯಲ್ಲಿ ಬದಲಾವಣೆ ಆಗಿದೆ. ಗಿಡ ಕಡಿದು ಹಾಕಲು ನಿಮಗೆ ಯಾರ ಒತ್ತಡ ಇತ್ತು. ಬಡವರು ಒಂದು ಎಕರೆ ಎರಡು ಎಕರೆ ಜೀವನೋಪಾಯಕ್ಕಾಗಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡಿದ್ದರೆ ಅದನ್ನು ಖುಲ್ಲಾ ಮಾಡುತ್ತೀರಿ. ಬೇರೆ ಪಕ್ಷದವರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲ. ಕೇವಲ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಗುರಿಮಾಡಿಕೊಂಡು ಒತ್ತುವರಿ ತೆರವು ಮಾಡುತ್ತಿರುವುದು ಎಷ್ಟು ಸರಿ. ಒಂದು ಪಕ್ಷದವರ ಪರವಾಗಿ ಕೆಲಸ ಮಾಡಬೇಡಿ. ಪರಿಸ್ಥಿತಿ ಯಾವಾಗ ಯಾವ ರೀತಿ ಬದಲಾಗುತ್ತದೆ ಗೊತ್ತಿಲ್ಲ. ನಾನು ಶಾಸಕನಾಗಿದ್ದಾಗ ನಿಮ್ಮ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ನೀವು ಎಲ್ಲಿಗೆ ಹೋದರೂ ನಿಮ್ಮ ಹುದ್ದೆ ಬದಲಾಗಲ್ಲ. ನಿಮ್ಮ ಕೆಲಸ ಕಾರ್ಯಗಳು ಪಾರದರ್ಶಕವಾಗಿರಲಿ. ಕರ್ತವ್ಯ ನಿರ್ವಹಿಸುವಾಗ ಕೇವಲ ಕಾನೂನನ್ನು ನೋಡಬೇಡಿ. ಬಡವನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ. ಕೇವಲ ತಲೆ ಇದ್ದರೆ ಸಾಲದು. ಹೃದಯವೂ ಇರಲಿ ಎಂದರು.

ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಲು ಬಂದ ಡಿಎಫ್‍ಒ ಮತ್ತು ಎಸಿಎಫ್ ಸ.ನಂ. 158ರ ಮೀಸಲು ಅರಣ್ಯದ 10 ಎಕರೆ ಜಾಗವನ್ನು ಎಚ್.ಕೆ. ದಿನೇಶ್ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದರು. ಈ ಕುರಿತು ಡಿಸೆಂಬರ್ 2017ರಲ್ಲಿ ಪ್ರಕರಣ ದಾಖಲಿಸಿ ಬೇಲಿ ತೆರವು ಮಾಡುವಂತೆ ಎಚ್.ಕೆ. ದಿನೇಶ್‍ರವರಿಗೆ ಅರಣ್ಯ ಇಲಾಖೆಯಿಂದ ನೋಟಿಸು ನೀಡಲಾಗಿತ್ತು. ಆದರೆ ನೋಟೀಸು ಸ್ವೀಕರಿಸದ ಅವರು ಕಳೆದ ಹದಿನೈದು ದಿನಗಳ ಹಿಂದೆ ಒತ್ತುವರಿ ಮಾಡಿದ್ದ 10 ಎಕರೆ ಪೈಕಿ 5 ಎಕರೆ ಜಾಗದಲ್ಲಿ ಕಾಫಿ, ಅಡಿಕೆ ಮತ್ತು ಸಿಲ್ವರ್ ಗಿಡಗಳನ್ನು ನೆಟ್ಟಿದ್ದರು. ಜಾಗವನ್ನು ಜಂಟಿ ಸರ್ವೆಗೆ ಹಾಕಿದ್ದು ಈ ಮಧ್ಯೆ ಗಿಡಗಳನ್ನು ನೆಟ್ಟು ದಿನೇಶ್ ತಪ್ಪು ಮಾಡಿದ್ದಾರೆ. ಅವರು ಗಿಡ ಹಾಕಬಾರದಿತ್ತು ಎಂದರು. 

ಇದರಿಂದ ಆಕ್ರೋಶಗೊಂಡ ಜೀವರಾಜ್, ನೀವು ಗಿಡ ಕಡಿದು ಹಾಕಿದ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂಬುದಕ್ಕೆ ದಾಖಲೆ ನೀಡಬೇಕು. ದಾಖಲೆ ತೋರಿಸಿದರೆ ನಾವೇ ಟ್ರಂಚ್ ಹಾಕಿ ಕೊಡುತ್ತೇವೆ. ಜಾಗದ ನಕಾಶೆ ತೋರಿಸಿ ಎಂದು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಎಸ್.ಎನ್. ರಾಮಸ್ವಾಮಿ, ಜಿ.ಎಸ್. ಮಹಾಬಲ, ಬಿ.ಎಸ್. ಸತೀಶ್, ಪುಣ್ಯಪಾಲ್, ನಯನ ಶೃಂಗೇರಿ ಮುಂತಾದವರು ಅಧಿಕಾರಿಗಳ ವಿರುದ್ಧ ಮುಗಿಬಿದ್ದರು. ಸ್ಥಳದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಇಲಾಖೆಯ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳು ಕೂಗಿದರು. ಕೊನೆಗೆ ಜಾಗದ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ನೀಡುವುದಾಗಿ ತಿಳಿಸಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸದಸ್ಯೆ ದಿವ್ಯಾ ದಿನೇಶ್, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಜೆ.ಎಸ್. ಲಲಿತಾ, ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕೆ. ಕಿರಣ್ ಸದಸ್ಯರಾದ ಮಂಜುಳಾ ಮಂಜುನಾಥ್, ಮಧುರಾ ಶಾಂತಪ್ಪ, ಸುಧಾಕರ್, ಇಂದಿರಾ, ಉದಯ್ ಎನ್.ಕೆ. ಭವಾನಿ ಹೆಬ್ಬಾರ್, ಪಟ್ಟಣ ಪಂಚಾಯತ್ ಸದಸ್ಯರಾದ ವಾಣಿ ಸತೀಶ್, ಅನುಸೂಯ ಕೆ. ಮೂರ್ತಿ, ಎ. ದಿವಾಕರ್, ವಸಂತಿ ಪಾಂಡುರಂಗ, ಪಕ್ಷದ ಪ್ರಮುಖರಾದ ಬಿ.ಆರ್. ನಾರಾಯಣ, ಪೂರ್ಣಚಂದ್ರ, ಜಗದೀಶ್, ಸತೀಶ್ ಕೆ.ಎಸ್, ಸುಜನ್, ಸತೀಶ್ ಸೇರಿದಂತೆ ನೂರಕ್ಕೂ ಹೆಚ್ಚು ಪಕ್ಷದ ಜನಪ್ರತಿನಿಧಿಗಳು ಕಾರ್ಯಕರ್ತರು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News