ಮಂಡ್ಯ ಕುಗ್ರಾಮದ ಬದುಕಿಗೆ ಬೆಳಕಾದ ಆಲಿಯಾ ಭಟ್

Update: 2018-07-16 04:29 GMT

ಮಂಡ್ಯ, ಜು.16: "ಆಲಿಯಾ ಭಟ್ ಹಿಂದಿ ಚಿತ್ರಗಳ ಹೀರೊಯಿನ್ ಎಂದು ನಾನು  ಕೇಳಿದ್ದೆ. ಆದರೆ ಎಂದೂ ನೋಡಿರಲಿಲ್ಲ. ಆದರೆ ಅವರು ನಮ್ಮ ಬದುಕು ಬೆಳಗಿದ್ದಾರೆ"- ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದ ಅಕ್ಮಲ್ ಹೇಳುವಾಗ ಕಣ್ಣುಗಳು ಹೊಳೆಯುತ್ತಿದ್ದವು.

ಇಪ್ಪತ್ತೈದು ವರ್ಷಗಳ ಕಗ್ಗತ್ತಲಿನಿಂದ ಇದೀಗ ಈ ಗ್ರಾಮಕ್ಕೆ ಮುಕ್ತಿ ಸಿಕ್ಕಿದೆ. ಅಕ್ಮಲ್ ಗುಡಿಸಲು ಸೇರಿದಂತೆ ಗ್ರಾಮದ 40 ಮನೆಗಳಿಗೆ ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಸೌರದೀಪಗಳನ್ನು ಒದಗಿಸಿದ್ದಾರೆ. "ಮೈ ವಾರ್ಡ್‌ರೋಬ್ ಈಸ್ ಸೂ ವಾರ್ಡ್‌ರೋಬ್" ಯೋಜನೆಯಡಿ ಈ ಸೌಲಭ್ಯ ಕಲ್ಪಿಸಿದ್ದಾರೆ. ಮೈಸೂರು ರಸ್ತೆಯ ಎಪಿಎಂಸಿ ಯಾರ್ಡ್ ಬಳಿ ಗುಡಿಸಲು ಕಟ್ಟಿಕೊಂಡಿರುವ ಈ ನಿವಾಸಿಗಳು ಕಳೆದ 25 ವರ್ಷಗಳಿಂದ ಕತ್ತಲಲ್ಲೇ ಬೆಳಕಿನ ಕನಸು ಕಾಣುತ್ತಿದ್ದರು.

"ಆಲಿಯಾ ಅವರಿಗೆ ಕೃತಜ್ಞತೆ ಹೇಳಬೇಕು. ವಿದ್ಯುತ್ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿಗೊಡಲಿಲ್ಲ. ಎರಡು ದಶಕ ಕಳೆದರೂ ಆಶ್ವಾಸನೆಗಳು ಈಡೇರಲೇ ಇಲ್ಲ. ಶನಿವಾರ ಈ ಸೌರದೀಪಗಳನ್ನು ಬೆಳಗಿದಾಗ ನಮಗೆ ರೋಮಾಂಚನವಾಯಿತು" ಎಂದು ಅಕ್ಮಲ್ ವಿವರಿಸಿದರು.

40 ಗುಡಿಸಲುಗಳಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ ತಮ್ಮ ಮನೆ ಬೆಳಗಿದ್ದನ್ನು ಕಂಡು ಖುಷಿಪಟ್ಟರು. "ಮೈ ವಾರ್ಡ್‌ರೋಬ್ ಈಸ್ ಸೂ ವಾರ್ಡ್‌ರೋಬ್" ಅಭಿಯಾನದಲ್ಲಿ ಆಲಿಯಾ ಅಭಿಮಾನಿಗಳು ಆಲಿಯಾ ವಾರ್ಡ್‌ರೋಬ್‌ನಿಂದ ತಮಗೆ ಇಷ್ಟವಾದ್ದನ್ನು ಆರಿಸಿಕೊಳ್ಳಬಹುದು. ಇದರಿಂದ ಸಂಗ್ರಹವಾದ ಹಣದಲ್ಲಿ ಕಿಕ್ಕೇರಿ ಗುಡಿಸಲುಗಳಿಗೆ ಸೌರದೀಪಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News