ಕೊಡಗಿನಲ್ಲಿ ಅಪಾರ ಮಳೆ ಹಾನಿ: ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ

Update: 2018-07-16 12:00 GMT

ಮಡಿಕೇರಿ, ಜು.16: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.19 ಮತ್ತು 20 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜು.19 ರಂದು ಮಧ್ಯಾಹ್ನ ನಗರದಲ್ಲಿ ಮಳೆ ಹಾನಿ ಸಂಬಂಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಈ ಸಂಬಂಧ ನಿಖರ ಮಾಹಿತಿಯನ್ನು ಇಂದೇ ಒದಗಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ.        

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಮಳೆಹಾನಿಯ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸುವಂತೆ ತಿಳಿಸಿದರು. ಈಗಾಗಲೇ ಕಳೆದ ಜೂನ್ ಮೊದಲ ಮತ್ತು ಎರಡನೇ ವಾರ ಹಾಗೂ ಕಳೆದ ಹದಿನೈದು ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣದದಲ್ಲಿ ನಷ್ಟ ಉಂಟಾಗಿದ್ದು, ಈ ಬಗ್ಗೆ ತಳಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.      

ಮಳೆಯಿಂದ ವಾಸದ ಮನೆ ಹಾನಿ, ಜಾನುವಾರು ಪ್ರಾಣ ಹಾನಿ ಸಂಬಂಧ ತುರ್ತು ಪರಿಹಾರ ವಿತರಣೆಯನ್ನು ತಹಶೀಲ್ದಾರರು ಮಾಡಬೇಕು. ಪರಿಹಾರ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ರಸ್ತೆ ಹಾನಿ ಸಂಬಂಧ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.  

ಮುಖ್ಯಮಂತ್ರಿ ಅವರು ಜು.20 ರಂದು ಭಾಗಮಂಡಲ-ತಲಕಾವೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದ್ದು, ಜೊತೆಗೆ ಹಾರಂಗಿಗೆ ತೆರಳಿ ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಆದ್ದರಿಂದ ಮಡಿಕೇರಿ-ಭಾಗಮಂಡಲ-ತಲಕಾವೇರಿ ರಸ್ತೆ, ಹಾಗೆಯೇ ಗುಡ್ಡೆಹೊಸೂರು-ಹಾರಂಗಿ ರಸ್ತೆ ಬದಿ ಗಿಡ ಕಡಿಯುವುದು, ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭಾಗಮಂಡಲ ಬಳಿಯ ಸೇತುವೆ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ನಿರ್ದೇಶನ ನೀಡಿದರು. ಭಾಗಮಂಡಲದಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಳವಾಗುವುದರಿಂದ ಮಂಗಳೂರಿನಿಂದ ಹೆಚ್ಚುವರಿ ಬೋಟ್ ತರಿಸಿಕೊಳ್ಳುವಂತೆ ಗೃಹ ರಕ್ಷಕ ದಳದ ಅಧಿಕಾರಿಗಳಿಗೆ ಸಲಹೆ ನೀಡಿದರು.    

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಮಾಹಿತಿ ಒದಗಿಸಬೇಕು. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಕಂಬಗಳನ್ನು ಸರಿಪಡಿಸುವುದು ಹಾಗೂ ಟ್ರಾನ್ಸ್ ಫಾರ್ಮ್‍ಗಳನ್ನು ಬದಲಿಸುವಂತೆ ತಿಳಿಸಿದರು. ಬೆಳೆ ಹಾನಿ ಸಂಬಂಧ, ಕೃಷಿ, ತೋಟಗಾರಿಕೆ, ಕಾಫಿ ಮಂಡಳಿಯ ಇಲಾಖಾ ಅಧಿಕಾರಿಗಳು, ಹಾಗೆಯೇ ಬೃಹತ್ ನೀರಾವರಿ, ಸಣ್ಣ ನೀರಾವರಿ, ನಗರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ನಷ್ಟ ಸಂಬಂಧಿಸಿದಂತೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು. 

ಮಡಿಕೇರಿ ನಗರಸಭೆ ವ್ಯಾಪ್ತಿಗೆ ಸೇರಿದಂತೆ ಅಗತ್ಯವಿರುವೆಡೆ ಗಂಜಿ ಕೇಂದ್ರ ತೆರೆಯಬೇಕು. ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.    

ಮಳೆ ಹಾನಿ ಪರಿಹಾರ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ತಹಶೀಲ್ದಾರರ ಕಚೇರಿಯಲ್ಲಿ ಸಂಬಂಧಪಟ್ಟ ಕಡತ ನಿರ್ವಹಣೆ ಮಾಡುವವರು ಹತ್ತು ದಿನಕ್ಕೂ ಹೆಚ್ಚು ಇಟ್ಟುಕೊಂಡಿದ್ದಲ್ಲಿ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಮಾಕುಟ್ಟ, ಮಾದಾಪುರ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಬಿರುಗಾಳಿಯಿಂದಾಗಿ ರಸ್ತೆಗೆ ಮರಗಳು ಉರುಳುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಮರಗಳನ್ನು ತೆರವುಗೊಳಿಸಬೇಕು. ರಸ್ತೆ ಬದಿಗೆ ಬೀಳುವ ಮರಗಳನ್ನು ಕಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ನಾಪೋಕ್ಲು, ಗೋಣಿಕೊಪ್ಪ, ಕುಶಾಲನಗರ ಮತ್ತಿತರ ಕಡೆಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ದೂರುಗಳು ಕೇಳಿ ಬರತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. 

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶದಲ್ಲಿ ಸೇತುವೆ ಇಲ್ಲದೆ ಬಂಬುಗಳ ಮೂಲಕ ನದಿ ದಾಟುವ ಪರಿಸ್ಥಿತಿ ಇದೆ. ಕರಿಕೆ, ಬಜೆಗುಂಡಿ, ಸೇರಿದಂತೆ ಹಲವು ಕಡೆಗಳಲ್ಲಿ ಸೇತುವೆ ಇಲ್ಲದೆ ಅಲ್ಲಿನ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದ್ದು, ಈ ಸಂಬಂಧ ಗಮನಹರಿಸಬೇಕು. ಪಂಚಾಯತ್ ರಾಜ್ ಎಂಜಿನಿಯರ್ ಅವರು ಅಗತ್ಯ ವರದಿ ನೀಡಬೇಕೆಂದರು. ಶಾಲಾ-ಕಾಲೇಜು, ಅಂಗನವಾಡಿ, ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳು, ಆರೋಗ್ಯ ಇಲಾಖೆ ಹೀಗೆ ಹಲವು ಇಲಾಖೆಗಳ ಕಟ್ಟಡಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಒದಗಿಸಬೇಕು. ತಹಶೀಲ್ದಾರರು, ತಾ.ಪಂ.ಇಒಗಳು, ಎಂಜಿನಿಯರ್ ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮಳೆ ಹಾನಿ ಪರಿಹಾರ ಸೇರಿದಂತೆ ಹಲವು ಕಡತಗಳನ್ನು ತ್ವರಿತ ವಿಲೇವಾರಿಗೆ ಸೂಚನೆ ನೀಡಿದರು.       

ಸೆಸ್ಕ್ ಇಲಾಖೆಯ ಇಇ ಸೋಮಶೇಖರ್ ಮಾತನಾಡಿ, ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿರುವುದರಿಂದ ಮರಗಳು ವಿದ್ಯುತ್ ಕಂಬಗಳಿಗೆ ಬೀಳುತ್ತಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಒಂದು ಕಡೆ ಸರಿಪಡಿಸಿಕೊಂಡು ಹೋಗುತ್ತಿದ್ದರೆ, ಮತ್ತೊಂದು ಕಡೆ ಮರಗಳು ಉರುಳುತ್ತಿವೆ. ಆದರೂ ತ್ವರಿತವಾಗಿ ಸರಿಪಡಿಸುವ ಕಾರ್ಯ ಮಾಡಲಾಗುವುದು. ವಿದ್ಯುತ್ ವ್ಯತ್ಯಯ ಬಗ್ಗೆ 1912 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು  ತಿಳಿಸಿದರು.  

ಡಿವೈಎಸ್‍ಪಿ ಸುಂದರರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್, ಜಯ ತಹಶೀಲ್ದಾರರಾದ ಕುಸುಮ, ಗೋವಿಂದರಾಜು, ಮಹೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್, ಉಪ ನಿರ್ದೇಶಕರಾದ ರಾಜು, ಲೋಕೋಪಯೋಗಿ ಇಇ ವಿನಯ ಕುಮಾರ್, ಗ್ರಾಮೀಣ ಅಭಿವೃದ್ಧಿ ಇಇ ರೇವಣ್ಣವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಪೌರಾಯುಕ್ತರಾದ ಬಿ.ಶುಭ, ಡಿಡಿಪಿಐ ಮಂಜುಳ, ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ, ಐಟಿಡಿಪಿ ಅಧಿಕಾರಿ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಹೀಗೆ ನಾನಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು. 

ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಭೂ ದಾಖಲೆಗಳ ಉಪ ನಿರ್ದೇಶಕರಾದ ವಿದ್ಯಾಯಿನಿ, ಸಹಾಯಕ ನಿರ್ದೇಶಕರಾದ ಸಂಶುದ್ದೀನ್, ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಕಾರ್ಯಪ್ಪ, ತಾ.ಪಂ.ಇಒಗಳಾದ ಲಕ್ಷ್ಮಿ, ಜಯಣ್ಣ, ಸುನೀಲ್ ಕುಮಾರ್, ಜಿಲ್ಲಾ ಖಜಾನಾಧಿಕಾರಿ ಸತೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಜಗನ್ನಾಥ್, ನಗರಾಭಿವೃದ್ಧಿ ಶಾಖೆಯ ಎಇಇ ಸ್ವಾಮಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇತರರು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News