ಕೇವಲ 2 ತಿಂಗಳಲ್ಲಿ ಸ್ವರ್ಗವನ್ನು ಧರೆಗಿಳಿಸಲು ಸಾಧ್ಯವಿಲ್ಲ: ಮುಖ್ಯಮಂತ್ರಿಯನ್ನು ಸಮರ್ಥಿಸಿದ ಕೊಡಗು ಜೆಡಿಎಸ್

Update: 2018-07-17 12:25 GMT

ಮಡಿಕೇರಿ, ಜು.17: ಅಧಿಕಾರಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಸ್ವರ್ಗವನ್ನು ಧರೆಗಿಳಿಸಲು ಸಾಧ್ಯವಿಲ್ಲ. ಸಮ್ಮಿಶ್ರ ಸರಕಾರದಲ್ಲಿರುವ ಮುಖ್ಯಮಂತ್ರಿಗಳಿಗೆ ಅಭಿವೃದ್ಧಿ ಪರ ದೃಢ ನಿರ್ಧಾರ ಕೈಗೊಳ್ಳಲು ಒಂದಷ್ಟು ಕಾಲಾವಕಾಶ ನೀಡಬೇಕಾಗುತ್ತದೆ. ಸಮಸ್ಯೆಗಳನ್ನು ಆಲಿಸಲು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಸರ್ವರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಗೌರವಿಸಿ ಸಂಕಷ್ಟಗಳ ಬಗ್ಗೆ ಗಮನ ಸೆಳೆಯುವ ಅಗತ್ಯವಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ವಕ್ತಾರ ಪಿ.ಎಸ್.ಭರತ್ ಕುಮಾರ್ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಕೇವಲ ಎರಡೇ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ಜನಪರ ಮತ್ತು ರೈತರ ಪರವಾಗಿರುವ ಕುಮಾರಸ್ವಾಮಿ ಅವರು ಕೊಡಗಿನ ಮೇಲಿನ ಪ್ರೀತಿಯಿಂದ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಬಂದು ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸುವ ಅಗತ್ಯವಿಲ್ಲ. ಇವರ ಅವಧಿಯಲ್ಲಿ ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆ ಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜುಲೈ 19 ಮತ್ತು 20 ರಂದು ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಕೊಡಗಿನ ಜನ ಪಕ್ಷಾತೀತ ಮತ್ತು ಜಾತ್ಯತೀತವಾಗಿ ತಮ್ಮ ಅಹವಾಲುಗಳನ್ನು ಹಂಚಿಕೊಳ್ಳಬೇಕಾಗಿದೆ. ಕರ್ನಾಟಕ ರಾಜ್ಯ ಇಲ್ಲಿಯವರೆಗೆ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಕೊಡಗಿನ ಬಗ್ಗೆ ಯಾರೂ ಕೂಡ ನೈಜ ಕಾಳಜಿಯನ್ನು ತೋರಿಲ್ಲ. ಆದರೆ ಅಧಿಕಾರಕ್ಕೆ ಬಂದ ಎರಡೇ ತಿಂಗಳಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿನ ಮೇಲಿನ ಅಭಿಮಾನ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುವ ಜವಬ್ದಾರಿಯಿಂದ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ತಾಯಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದು ಮುಖ್ಯಮಂತ್ರಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದ್ದು, ಕೊಡಗಿನ ಸಮಸ್ಯೆಗಳು ಈಗಲಾದರು ಬಗೆಹರಿಯುತ್ತದೆ ಎನ್ನುವ ವಿಶ್ವಾಸವಿದೆ ಎಂದು ಭರತ್ ಕುಮಾರ್ ತಿಳಿಸಿದರು. 

ಜಿಲ್ಲೆಯಲ್ಲಿ ಕಳೆದ 70 ವರ್ಷಗಳಿಂದ ಇರುವ ಸಮಸ್ಯೆಗಳು ಎರಡು ತಿಂಗಳ ಮುಖ್ಯಮಂತ್ರಿ ಬಗೆಹರಿಸಬೇಕೆನ್ನುವ ಕೆಲವರ ಭ್ರಮೆ ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿ ಅವರು ಕೇವಲ ಕೊಡಗು ಜಿಲ್ಲೆಯ ಮುಖ್ಯಮಂತ್ರಿಗಳಲ್ಲ, ಇಡೀ ರಾಜ್ಯದ ಸಮಸ್ಯೆಗಳನ್ನು ಅವರು ಆಲಿಸಬೇಕಾಗಿದೆ. ಒತ್ತಡದ ಕಾರ್ಯಗಳ ನಡುವೆಯೂ ಆದ್ಯತೆಯ ಮೇರೆಗೆ ಕೊಡಗು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಭೇಟಿ ನೀಡುತ್ತಿರುವುದು ನಮಗೆ ತೃಪ್ತಿ ತಂದಿದೆ ಎಂದರು.

ಸರಳ ಸಜ್ಜನಿಕೆಯ, ಜನಪರ ಕಾಳಜಿಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸಮಯಾವಕಾಶವನ್ನು ನೀಡಬೇಕಾಗಿದೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಿಂದ ಎಲ್ಲವನ್ನು ಶೀಘ್ರವಾಗಿ ನಿರೀಕ್ಷಿಸುವುದು ಸರಿಯಲ್ಲ. ಕಾವೇರಿ ನದಿ ನೀರನ್ನು ನೀಡುತ್ತಿರುವ ಕೊಡಗು ಜಿಲ್ಲೆಯ ಋಣ ತೀರಿಸುವ ಕಾರ್ಯವನ್ನು ಕುಮಾರಸ್ವಾಮಿ ಅವರು ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಕಾಳಜಿಗೆ ಜಿಲ್ಲೆಯ ಶಾಸಕರುಗಳು ಕೂಡ ಕೈಜೋಡಿಸಬೇಕಾಗಿದೆ ಎಂದು ಭರತ್ ಕುಮಾರ್ ತಿಳಿಸಿದರು.

ರೈತರ ಹಿತಾಸಕ್ತಿ ಕಾಪಾಡುವುದಕ್ಕಾಗಿ 2 ಲಕ್ಷ ರೂ.ವರೆಗಿನ ಸಾಲ ಮತ್ತು ಚಾಲ್ತಿ ಸಾಲವನ್ನು ಈಗಾಗಲೇ ಮುಖ್ಯಮಂತ್ರಿಗಳು ಮನ್ನಾ ಮಾಡಿದ್ದಾರೆ. ರೈತರಿಗಾಗಿ ಪೆಟ್ರೋಲ್, ಡೀಸೆಲ್ ಹಾಗೂ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದೆ ಹೊರತು ಕುಮಾರಸ್ವಾಮಿ ಅವರು ತಮ್ಮ ಲಾಭಕ್ಕಾಗಿ ಮಾಡಿಕೊಂಡಿಲ್ಲ. ಸಂಕಷ್ಟದಲ್ಲಿರುವ ರೈತರಿಗಾಗಿ ಸಹಾಯಹಸ್ತ ಚಾಚಲು ರಾಜ್ಯದ ಜನತೆ ತಯಾರಿದ್ದಾರೆ. ಆದರೆ ವಿರೋಧ ಪಕ್ಷ ಜನರ ಹಾದಿ ತಪ್ಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದದರು. 

ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆಗೆ ಶರಣಾದಾಗ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ನೆರವಿಗೆ ಬರಲಿಲ್ಲ, ಅಲ್ಲದೆ ಸಾಲ ಮನ್ನಾದ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ ಎಂದರು.

ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಭರತ್ ಕುಮಾರ್ ಕುಶಾಲನಗರದವರೆಗೆ ರೈಲು ಮಾರ್ಗವನ್ನು ತರಲಾಗದ ಸಂಸದರು ಕುಣಿಯಲು ಬಾರದವರಿಗೆ ನೆಲ ಡೊಂಕು ಎನ್ನುವ ರೀತಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು. 

ಕೊಡಗು ಜಿಲ್ಲೆಯಲ್ಲಿ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಎಂದರೆ ಅದಕ್ಕೆ ಇಲ್ಲಿಯವರೆಗೆ ಆಡಳಿತ ನಡೆಸಿದ ಜನಪ್ರತಿನಿಧಿಗಳು ಕಾರಣವೇ ಹೊರತು ಇಂದು ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರಣಕರ್ತರಲ್ಲ. ಕೊಡಗಿನ ಮೇಲಿನ ಅಭಿಮಾನ ಮತ್ತು ಕಾಳಜಿಯಿಂದ ಜಿಲ್ಲೆಗೆ ಎರಡು ದಿನಗಳ ಭೇಟಿಗಾಗಿ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರು ಒಗ್ಗಟ್ಟಾಗಿ ಕೈಜೋಡಿಸಬೇಕಾಗಿದೆ ಎಂದು ಭರತ್ ಕುಮಾರ್ ಹೇಳಿದರು.

ಜೆಡಿಎಸ್ ಪುನರ್ ರಚನೆ
ಕೊಡಗು ಜಿಲ್ಲಾ ಜೆಡಿಎಸ್ ಘಟಕದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಪುನರ್ ರಚಿಸಲಾಗುವುದೆಂದು ತಿಳಿಸಿದ ಅವರು ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷರೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧ್ಯಕ್ಷರ ಬದಲಾವಣೆಗೆ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಕುಮಾರ್, ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಸಂದೇಶ್ ಹಾಗೂ ನಗರಾಧ್ಯಕ್ಷ ಎಂ.ಹೆಚ್.ಮೊಹಮ್ಮದ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News