ಸುಪ್ರೀಂಕೋರ್ಟಿನ ಚೀತ್ಕಾರ

Update: 2018-07-17 18:31 GMT

‘ಗೋರಕ್ಷಣೆ ಹೆಸರಲ್ಲಿ ಹಲ್ಲೆ ಘೋರ ಕೃತ್ಯ’ ಸುಪ್ರೀಂಕೋರ್ಟ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸದ್ಯದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಎಚ್ಚರಿಕೆ, ಪ್ರಜಾಸತ್ತೆಯ ಹತಾಶೆಯಿಂದೊಡಗೂಡಿದ ಕಟ್ಟಕಡೆಯ ಚೀತ್ಕಾರದಂತಿದೆ. ಕಳೆದವಾರವಷ್ಟೇ ಈ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚನೆಗಳನ್ನು ನೀಡಿತ್ತು. ಹಾಗೆ ಸೂಚನೆ ನೀಡಿದ ಬೆನ್ನಿಗೇ ದೇಶದ ಹಲವೆಡೆ ಗುಂಪು ಹತ್ಯೆಗಳು ನಡೆದಿವೆ. ವಿಪರ್ಯಾಸವೆಂದರೆ, ಇದೀಗ ಗುಂಪು ಹತ್ಯೆಯೆನ್ನುವುದು ಮಾರಕ ವೈರಸ್‌ನಂತೆ ಬೇರೆ ಬೇರೆ ಕ್ಷೇತ್ರಗಳಿಗೂ ಹರಡುತ್ತಿದೆ. ಈಶಾನ್ಯ ಭಾರತದಲ್ಲಿ, ಮಾಟಗಾತಿಯರು ಎಂಬ ಹೆಸರಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಇದು ಯಾರಿಗೂ ಕಳವಳಕಾರಿ ಸುದ್ದಿ ಎನ್ನಿಸಿರಲಿಲ್ಲ.

ಒಂದು ಗ್ರಾಮದ ಮೇಲ್ ಸಮದಾಯಕ್ಕೆ ಯಾರ ಮೇಲಾದರೂ ಆಕ್ರೋಶ, ಅಸಮಾಧಾನವಿದ್ದರೆ ಮೊದಲು ಆ ಮಹಿಳೆಯನ್ನು ಮಾಟಗಾತಿ ಎಂದು ವದಂತಿ ಹಬ್ಬಿಸಿ ಬಳಿಕ ಸಾರ್ವಜನಿಕರ ಮೂಲಕವೇ ಕೊಲೆ ಮಾಡಿಸುತ್ತಿದ್ದರು. ಆದರೆ ಗೋರಕ್ಷಕರೆಂದು ಕರೆಸಿಕೊಳ್ಳುವವರು ಯಾವುದೇ ವದಂತಿಯ ಆಧಾರದ ಮೇಲೆ ಹಲ್ಲೆ, ಕೊಲೆ ಮಾಡುವವರಲ್ಲ. ಗೋರಕ್ಷಕರು ರೈತರೂ ಅಲ್ಲ, ಗೋವನ್ನು ಪ್ರೀತಿಸುವವರೂ ಅಲ್ಲ. ಅವರು ರಾಜಕೀಯ ದುರುದ್ದೇಶದಿಂದ ಸಂಘಟಿತವಾದ ಗೂಂಡಾಗಳು, ರೌಡಿಗಳು. ಗೋರಕ್ಷಣೆಯ ಹೆಸರಿನಲ್ಲಿ ಯಾವುದೇ ರೈತರು ಒಂದಾಗಿ, ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸಿದ ಉದಾಹರಣೆಯಿಲ್ಲ. ಗೋರಕ್ಷಕರೆಂದು ಕರೆಸಿಕೊಂಡ ಕಾರ್ಯಕರ್ತರು ಒಂದು ನಿರ್ದಿಷ್ಟ ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡುತ್ತಿರುವವರು. ಅವರ ಗುರಿ ಗೋರಕ್ಷಣೆಯಾಗಿರದೇ, ಒಂದು ನಿರ್ದಿಷ್ಟ ಧರ್ಮದ ಜನರೇ ಆಗಿದ್ದಾರೆ. ಆ ಮೂಲಕ ಸಮಾಜದಲ್ಲಿ ಉದ್ವಿಗ್ನ ಸೃಷ್ಟಿ ಮಾಡುವುದು, ದ್ವೇಷ ಬಿತ್ತುವುದು ಅವರ ಉದ್ದೇಶವಾಗಿದೆ. ಈ ಎಲ್ಲಾ ಕಾರಣಗಳಿಂದ ‘ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ತಡೆಯಿರಿ’ ಎಂದು ಸುಪ್ರೀಂಕೋರ್ಟ್ ಎಷ್ಟೇ ಜೋರಾಗಿ ಹೇಳಿದರೂ, ಅದರಿಂದ ಯಾವ ಪ್ರಯೋಜನವೂ ಇಲ್ಲ. ಅದಕ್ಕೆ ಮೊದಲ ಕಾರಣ, ಗೋರಕ್ಷಣೆಯ ತಂಡಕ್ಕಿರುವ ರಾಜಕೀಯ ಬೆಂಬಲ. ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ರಾಜಕೀಯ ಶಕ್ತಿಯೇ ಇಂದು ದೇಶವನ್ನು ಆಳುತ್ತಿದೆ. ಇದು ಸುಪ್ರೀಂಕೋರ್ಟ್‌ಗೆ ತಿಳಿಯದ ವಿಷಯವೇನೂ ಅಲ್ಲ.

ಗೋರಕ್ಷಣೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಕೊಂದರೂ ಅವರನ್ನು ಕ್ರಿಮಿನಲ್‌ಗಳು ಎಂದು ಬಿಂಬಿಸದೇ, ಸಂಸ್ಕೃತಿ ರಕ್ಷಕರು ಎಂದು ಕರೆಯುವ ರಾಜಕೀಯ ನಾಯಕರು ನಮ್ಮ ನಡುವೆ ಇರುವಾಗ, ನ್ಯಾಯಾಲಯದ ಮಾತುಗಳಿಗೆ ಬೆಲೆ ಎಲ್ಲಿದೆ? ಗೋರಕ್ಷಣೆಯ ಹೆಸರಲ್ಲಿ ಹಲ್ಲೆ ನಡೆಸುವುದು ತಪ್ಪು ಎಂದ ಮೇಲೆ, ನ್ಯಾಯಾಲಯ ‘‘ಗೋರಕ್ಷಣಾ ಪಡೆ’ಯನ್ನು ನಿಷೇಧಿಸಲು ಯಾಕೆ ಸೂಚನೆಯನ್ನು ನೀಡುತ್ತಿಲ್ಲ? ಇಂದು ದೇಶದ ಹಲವೆಡೆ ಗೂಂಡಾಗಳು ಗೋರಕ್ಷಣೆ ಪಡೆಯನ್ನು ಕಟ್ಟಿಕೊಂಡಿದ್ದಾರೆ. ಅದಕ್ಕೆ ಸಂಚಾಲಕರೂ, ಪದಾಧಿಕಾರಿಗಳೂ ಇದ್ದಾರೆ. ಇಂತಹ ಸಂಘಟನೆಗಳನ್ನು ಗುರುತಿಸಿ ತಕ್ಷಣ ಅವರ ಮೇಲೆ ಮೊಕದ್ದಮೆ ದಾಖಲಿಸುವಂತೆ ಸರಕಾರವಾಗಲಿ, ನ್ಯಾಯಾಲಯವಾಗಲಿ ಯಾಕೆ ನಿರ್ದೇಶನ ನೀಡುತ್ತಿಲ್ಲ? ದನದ ವ್ಯಾಪಾರಿಗಳಿಗೆ ಹಲ್ಲೆ ನಡೆಸಿ ನಕಲಿ ಗೋರಕ್ಷಕರು ಪರಾರಿಯಾಗುವುದಿಲ್ಲ. ಬದಲಿಗೆ ಅವರೇ ಸಂತ್ರಸ್ತರನ್ನು ಪೊಲೀಸ್ ಠಾಣೆಗೆ ಒಪ್ಪಿಸುತ್ತಾರೆ. ಇಂತಹ ಸಂದರ್ಭದಲ್ಲಿ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಪೊಲೀಸರು ಮೊಕದ್ದಮೆಗಳನ್ನು ದಾಖಲಿಸುವುದಿಲ್ಲ. ಬದಲಿಗೆ ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಿಸುತ್ತಾರೆ. ಅಂದರೆ, ಪೊಲೀಸರೇ ಈ ನಕಲಿ ಗೋರಕ್ಷಕರನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರ ಕುಮ್ಮಕ್ಕಿನಿಂದಲೇ ಹಲ್ಲೆಗಳು ನಡೆಯುತ್ತಿವೆ.

ಹೀಗಿರುವಾಗ, ಹಲ್ಲೆಗಳನ್ನು ತಡೆಯಬೇಕೆಂದು ನ್ಯಾಯಾಲಯ ಯಾರಲ್ಲಿ ಮನವಿ ಮಾಡಿಕೊಳ್ಳುತ್ತಿದೆ? ಗೋರಕ್ಷಕರಿಂದ ರಾಜಕೀಯ ಲಾಭವನ್ನು ಪಡೆದಿರುವ ಕೇಂದ್ರ ಸರಕಾರ, ಸುಪ್ರೀಂಕೋರ್ಟ್ ನ ಸೂಚನೆಗಳಿಗೆ ತಲೆಬಾಗುತ್ತದೆಯೇ? ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಶಿಕ್ಷಿಸಲು ಹೊಸ ಕಾನೂನೊಂದನ್ನು ರೂಪಿಸುವಂತೆ ಸುಪ್ರೀಂಕೋರ್ಟ್ ಸಂಸತ್ತಿಗೆ ಸೂಚಿರುವುದೇನೋ ಒಳ್ಳೆಯ ಅಂಶ. ಆದರೆ ತನ್ನದೇ ಕಾರ್ಯಕರ್ತರನ್ನು ಜೈಲಿಗೆ ತಳ್ಳುವಂತಹ ಕಾನೂನನ್ನು ಬಿಜೆಪಿ ನೇತೃತ್ವದ ಸರಕಾರ ರೂಪಿಸಸಲು ಸಾಧ್ಯವೇ? ಆರೆಸ್ಸೆಸ್‌ನಂತಹ ಸಂಸ್ಥೆಗಳು ಅದಕ್ಕೆ ಅವಕಾಶ ನೀಡುತ್ತವೆ ಎಂದು ಅನ್ನಿಸುತ್ತದೆಯೇ? ಈ ಕಾರಣಕ್ಕೆ, ಸುಪ್ರೀಂಕೋರ್ಟ್ ನ ಆದೇಶವನ್ನು, ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಟ್ಟಕಡೆಯ ಚೀತ್ಕಾರವೆಂದೇ ಕರೆಯಬೇಕು. ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಹತ್ಯೆ ಇದೀಗ ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಣೆಯಾಗುತ್ತಿದೆ. ಗುಂಪುಹತ್ಯೆಯ ಕುರಿತಂತೆ ಕಾನೂನಿನ ನಿಲುವುಗಳು, ನಾಗರಿಕರೆಂದು ಕರೆಸಿಕೊಂಡವರ ಒಳಗೆ ನಿದ್ರಿಸುತ್ತಿರುವ ಕ್ರೌರ್ಯಗಳನ್ನು ಕೂಡ ತಟ್ಟಿ ಎಬ್ಬಿಸುತ್ತಿದೆ.

ದೇಶಾದ್ಯಂತ ಮಕ್ಕಳ ಅಪಹರಣದ ವದಂತಿಯನ್ನು ನಂಬಿ ಗುಂಪಾಗಿ ಕೊಲೆ ಮಾಡುವವರಿಗೆ ಪ್ರೇರಣೆ ಗೋರಕ್ಷಕರೇ ಆಗಿದ್ದಾರೆ. ಪ್ರತಿಯೊಬ್ಬ ನಾಗರಿಕನಲ್ಲೂ ತಿಳಿದೋ ತಿಳಿಯದೆಯೋ ಒಬ್ಬ ಕ್ರಿಮಿನಲ್ ಬಚ್ಚಿಟ್ಟುಕೊಂಡಿರುತ್ತಾನೆ. ಕಾನೂನು, ಸಮಾಜ, ಕುಟುಂಬ ಮೊದಲಾದ ಕಟ್ಟುಪಾಡುಗಳ ಕಾರಣಗಳಿಂದ ಆ ಕ್ರಿಮಿನಲ್ ಒಳಗೆ ಅಮಾಯಕನಂತೆ ಬದುಕುತ್ತಿರುತ್ತಾನೆ. ಆದರೆ ಕೊಲೆ ಮಾಡಲು ನೆಪಗಳು ಸಿಕ್ಕಿದರೆ ಮತ್ತು ಅದಕ್ಕೆ ಸಮಾಜದ ಪ್ರೋತ್ಸಾಹವೂ ಸಿಕ್ಕಿದರೆ ಆತ ತಕ್ಷಣ ತನ್ನ ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತಾನೆ. ರಾಜ್ಯದಲ್ಲಿ ಅದೀಗ ಬೇರೆ ಬೇರೆ ರೂಪದಲ್ಲಿ ವ್ಯಕ್ತವಾಗತೊಡಗಿದೆ. ಇತ್ತೀಚೆಗೆ ಬೀದರ್‌ನಲ್ಲಿ ಅಮಾಯಕನೊಬ್ಬನನ್ನು ಬರ್ಬರವಾಗಿ ಥಳಿಸಿ ಕೊಂದಿರುವುದಕ್ಕೆ ವದಂತಿ ಕಾರಣವಲ್ಲ.

ಕಾನೂನಿನ ದೌರ್ಬಲ್ಯ ಕಾರಣ. ಗುಂಪಾಗಿ ಹತ್ಯೆ ಮಾಡಿದರೆ ಸುಲಭದಲ್ಲಿ ಪಾರಾಗಬಹುದು ಎನ್ನುವುದನ್ನು ಕಾನೂನು ಅವರಿಗೆ ಹೇಳಿಕೊಟ್ಟಿದೆ. ಗುಂಪು ಕೊಲೆಗಾರರು ಈ ಧೈರ್ಯದಿಂದಲೇ ಬೀದಿಗಿಳಿದಿದ್ದಾರೆ. ಆದುದರಿಂದ ಗುಂಪು ಹತ್ಯೆಗೆ ನಾವು ವಾಟ್ಸ್ ಆ್ಯಪ್‌ಗಳನ್ನು ಮಾತ್ರ ಹೊಣೆ ಮಾಡುವಂತೆ ಇಲ್ಲ. ಜಾರ್ಖಂಡ್‌ನಲ್ಲಿ ಸ್ವಾಮಿ ಅಗ್ನಿವೇಶ್‌ರಂತಹ ಹಿರಿಯ ಚಿಂತಕರ ಮೇಲೆ ಮೃಗಗಳಂತೆ ದುಷ್ಕರ್ಮಿಗಳು ಎರಗಿದ್ದಾರೆ. ಹಲ್ಲೆ ನಡೆಸಿದವರು ಯಾವುದೇ ವದಂತಿಗೆ ಬಲಿಯಾದವರಲ್ಲ ಅಥವಾ ಅಮಾಯಕರೂ ಅಲ್ಲ. ಅವರೆಲ್ಲ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರು. ಅವರು ಹಲ್ಲೆ ನಡೆಸಿರುವುದು, ತಮ್ಮನ್ನು ಕಾನೂನು ಬಂಧಿಸುವುದಿಲ್ಲ ಎನ್ನುವ ಧೈರ್ಯದಿಂದಲೇ ಆಗಿದೆ. ಸ್ವಾಮಿ ಅಗ್ನಿವೇಶ್‌ರ ಜಾಗದಲ್ಲಿ ಒಬ್ಬ ಶ್ರೀಸಾಮಾನ್ಯನಿದ್ದಿದ್ದರೆ ಆತನ ಹತ್ಯೆಯೇ ಆಗಿ ಬಿಡುತ್ತಿತ್ತು. ಮೋದಿ ಆಡಳಿತದಲ್ಲಿ ಈ ದೇಶ ನಿಧಾನಕ್ಕೆ ಶಿಲಾಯುಗದತ್ತ ಮುನ್ನಡೆಯುತ್ತಿರುವುದರ ಸೂಚನೆಯಿದು. ಆರೋಪಿಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬೆಂಬಲದಿಂದಲೇ ಪ್ರಜಾಸತ್ತೆಯ ಮೇಲೆ ಎರಗುತ್ತಿರುವುದು ಇಂದಿನ ಭಾರತದ ದುರಂತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News