ಜಯ್ ಶಾ ಪ್ರಕರಣ: ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದ 'ದಿ ವೈರ್'

Update: 2018-07-18 06:00 GMT

ಹೊಸದಿಲ್ಲಿ, ಜು. 18: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಶಾ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅವರ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು 'ದಿ ವೈರ್' ಸುದ್ದಿ ತಾಣ ಮತ್ತು ಪತ್ರಕರ್ತೆ ರೋಹಿಣಿ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

'ದಿ ವೈರ್‌'ನಲ್ಲಿ ಕಳೆದ ವರ್ಷದ ಅಕ್ಟೋಬರ್ 8ರಂದು ಜಯ್ ಶಾ ಅವರ ವಹಿವಾಟಿನ ಬಗ್ಗೆ ಲೇಖನ ಪ್ರಕಟವಾದ ಹಿನ್ನೆಲೆಯಲ್ಲಿ ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.

'ದಿ ವೈರ್' ಪರವಾಗಿ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ರಾಜು ರಾಮಚಂದ್ರನ್, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖನ್ವೀಲ್ಕರ್, ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿದೆ.

ಕಳೆದ ಎಪ್ರಿಲ್ 18ರಂದು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಎರಡೂ ಕಡೆಯವರಿಗೆ ಸಲಹೆ ಮಾಡಿತ್ತು. "ಈ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಿ. ಹಿರಿಯ ವಕೀಲ ಕಪಿಲ್ ಸಿಬಾಲ್ ಹಾಗೂ ನೀರಜ್ ಕಿಶನ್ ಕೌಲ್ ಜತೆಗೆ ಕೂತು ಮಾತುಕತೆ ನಡೆಸಿ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಸಲಹೆ ಮಾಡಿದ್ದರು.

ಶಾ ವಿರುದ್ಧ ಪ್ರಕಟವಾದ ಲೇಖನಕ್ಕೆ ಪ್ರತಿಯಾಗಿ ಅಕ್ಟೋಬರ್ 12ರಂದು 100 ಕೋಟಿ ರೂಪಾಯಿಯ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ ಪ್ರತ್ಯೇಕ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕೂಡಾ ಹೂಡಲಾಗಿದೆ.

ಈ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡುವಂತೆ 'ದ ವೈರ್' ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News