ಸಂಸತ್ ನ ಮುಂಗಾರು ಅಧಿವೇಶನ ಆರಂಭ

Update: 2018-07-18 15:37 GMT

ಹೊಸದಿಲ್ಲಿ,ಜು.18: ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮತ್ತು ಪ್ರತಿಪಕ್ಷಗಳು ನರೇಂದ್ರ ಮೋದಿ ಸರಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಸೂಚನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಬುಧವಾರ ಒಪ್ಪಿಗೆ ಸೂಚಿಸಿದ್ದು,ಲೋಕಸಭೆಯು ಶುಕ್ರವಾರ ನಿರ್ಣಯದ ಮೇಲೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾಗಿದ್ದ ಬುಧವಾರ ಭೋಜನ ವಿರಾಮದ ಬಳಿಕ ಸದನವು ಮರುಸಮಾವೇಶಗೊಂಡಾಗ ಮಹಾಜನ್ ಅವರು, ಸದನವು ಶುಕ್ರವಾರ,ಜು.20ರಂದು ಅವಿಶ್ವಾಸ ನಿರ್ಣಯವನ್ನು ಚರ್ಚೆಗೆತ್ತಿಕೊಳ್ಳಲಿದೆ. ಇಡೀ ದಿನ ಚರ್ಚೆಯ ಬಳಿಕ ಮತದಾನ ನಡೆಯಲಿದೆ ಎಂದು ಪ್ರಕಟಿಸಿದರು.

ಅಂದು ಪ್ರಶ್ನೆವೇಳೆ ಇರುವುದಿಲ್ಲ ಮತ್ತು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯನ್ನು ಹೊರತುಪಡಿಸಿ ಇತರ ಯಾವುದೇ ಕಲಾಪಗಳಿರುವುದಿಲ್ಲ ಎಂದೂ ಅವರು ತಿಳಿಸಿದರು. ಇದಕ್ಕೂ ಮುನ್ನ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ದಿನಾಂಕವನ್ನು 2-3 ದಿನಗಳಲ್ಲಿ ಪ್ರಕಟಿಸುವುದಾಗಿ ಸ್ಪೀಕರ್ ತಿಳಿಸಿದ್ದರು.

ಶೂನ್ಯವೇಳೆಯಲ್ಲಿ ಒಂದೇ ಬಗೆಯ ಅವಿಶ್ವಾಸ ನಿರ್ಣಯ ಸೂಚನೆಗಳನ್ನು ಸಲ್ಲಿಸಿರುವ ಟಿಡಿಪಿ,ಕಾಂಗ್ರೆಸ್,ಎನ್‌ಸಿಪಿ ಮತ್ತು ಇತರ ಪಕ್ಷಗಳ ಎಲ್ಲ ಸದಸ್ಯರನ್ನು ಹೆಸರಿಸಿದ್ದ ಅವರು,ಟಿಡಿಪಿಯು ಮೊದಲು ವಿಷಯವನ್ನೆತ್ತಿರುವುದರಿಂದ ಆ ಪಕ್ಷದ ಸದಸ್ಯ ಕೇಸಿನೇನಿ ಶ್ರೀನಿವಾಸ ಅವರು ನಿರ್ಣಯವನ್ನು ಮಂಡಿಸುತ್ತಾರೆ ಎಂದು ತಿಳಿಸಿದ್ದರು.

ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಗಳಿಂದಾಗಿ ಯಾವುದೇ ಕಲಾಪ ನಡೆಯದೆ ವ್ಯರ್ಥಗೊಂಡಿದ್ದ ಬಜೆಟ್ ಅಧಿವೇಶನದಲ್ಲಿಯೂ ಅವಿಶ್ವಾಸ ನಿರ್ಣಯ ಸೂಚನೆಗಳನ್ನು ಸಲ್ಲಿಸಲಾಗಿತ್ತಾದರೂ ಮಹಾಜನ್ ಅವರು ಅವುಗಳನ್ನು ಒಪ್ಪಿಕೊಂಡಿರಲಿಲ್ಲ. ವಿವಿಧ ವಿಷಯಗಳ ಕುರಿತು ಪ್ರತಿಪಕ್ಷ ಸದಸ್ಯರು ನಿರಂತರವಾಗಿ ಸದನದ ಬಾವಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದು,ಸದನದಲ್ಲಿ ಸುವ್ಯವಸ್ಥೆಯಿಲ್ಲ ಎಂಬ ಕಾರಣದಿಂದ ಅವರು ನೋಟಿಸ್‌ಗಳನ್ನು ತಿರಸ್ಕರಿಸಿದ್ದರು.

ಸರಕಾರವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿರುವುದನ್ನು ಪ್ರತಿಭಟಿಸಿ ಕಳೆದ ಮಾರ್ಚ್‌ನಲ್ಲಿ ಆಡಳಿತ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದ್ದ ಟಿಡಿಪಿಯು ಶೂನ್ಯವೇಳೆಯಲ್ಲಿ ಸಲ್ಲಿಸಿದ್ದ ನಿರ್ಣಯಕ್ಕೆ ಮಹಾಜನ್ ಸಮ್ಮತಿ ನೀಡಿದರು.

ಸದನದಲ್ಲಿ ಅತ್ಯಂತ ದೊಡ್ಡ ಪಕ್ಷವು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದಾಗ,ಮಹಾಜನ ಅವರು ನಿಯಮಾವಳಿಗಳಂತೆ ಮೊದಲು ನಿರ್ಣಯವನ್ನು ಪ್ರಸ್ತಾಪಿಸಿರುವ ಪಕ್ಷಕ್ಕೆ ಅದನ್ನು ಮಂಡಿಸುವ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.

ಅವಿಶ್ವಾಸ ನಿರ್ಣಯ ಸೂಚನೆಯನ್ನು ಸಲ್ಲಿಸಿರುವ ಎಲ್ಲ ಪಕ್ಷಗಳಿಗೂ ಅದನ್ನು ಮಂಡಿಸಲು ಅವಕಾಶ ದೊರೆಯಬೇಕು ಎಂದು ಖರ್ಗೆ ಮತ್ತೆ ಆಗ್ರಹಿಸಿದಾಗ ಕುಪಿತ ಮಹಾಜನ್ ಅವರು,ನೀವು ದಾಖಲೆಗಳನ್ನು ಓದಬೇಕು. ನಾನು ನಿಯಮಗಳಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದರು.

ಹಲವಾರು ಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸರಕಾರವು ಸಿದ್ಧವಾಗಿದೆ ಎಂದು ತಿಳಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ ಅವರು,ಇಡೀ ದೇಶವು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿಶ್ವಾಸವನ್ನು ಹೊಂದಿದೆ ಎಂದು ಹೇಳಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ,ಗುಂಪುಗಳಿಂದ ಥಳಿಸಿ ಹತ್ಯೆಗಳು,ಮಹಿಳೆಯರು ಮತ್ತು ದಲಿತರ ವಿರುದ್ಧ ದೌರ್ಜನ್ಯಗಳು ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಿರುವುದು ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರಕಾರದ ವಿರುದ್ಧ ಈ ಅವಿಶ್ವಾಸ ನಿರ್ಣಯವನ್ನು ತಂದಿವೆ.

ನಿರ್ಣಯಕ್ಕೆ ಜಯ: ಸೋನಿಯಾ ವಿಶ್ವಾಸ

ಲೋಕಸಭೆಯಲ್ಲಿ 273 ಸದಸ್ಯರನ್ನು ಹೊಂದಿರುವ ಆಡಳಿತ ಬಿಜೆಪಿ ಅವಿಶ್ವಾಸ ಸತ್ವಪರೀಕ್ಷೆಯನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆಯಾದರೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಾಗೆ ಭಾವಿಸಿಲ್ಲ.

ಅವಿಶ್ವಾಸ ನಿರ್ಣಯದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,ನಮ್ಮ ಬಳಿ ಅಗತ್ಯ ಸಂಖ್ಯೆಯ ಸದಸ್ಯರಿಲ್ಲ ಎಂದು ಯಾರು ಹೇಳುತ್ತಾರ ಎಂದು ಮರುಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News