ಅತ್ಯಾಚಾರ ಪಿಡುಗಿನ ವಿರುದ್ಧ ಧ್ವನಿಯೆತ್ತಿದ ಶಾ ಫೈಝಲ್ ಗೆ ರಾಹುಲ್ ಬೆಂಬಲ

Update: 2018-07-18 10:50 GMT

ಶ್ರೀನಗರ, ಜು.18: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡಿ ಸರಕಾರದಿಂದ ಶಿಸ್ತು ಕ್ರಮ ಎದುರಿಸುತ್ತಿರುವ ಜಮ್ಮು ಕಾಶ್ಮೀರ ಕೇಡರ್ ಐಎಎಸ್ ಅಧಿಕಾರಿ ಶಾ ಫೈಝಲ್ ಬೆಂಬಲಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಂತಿದ್ದಾರಲ್ಲದೆ ಈ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗೆ ಪತ್ರವನ್ನೂ ಬರೆದಿದ್ದಾರೆ.

"ದೇಶವನ್ನೆದುರಿಸುತ್ತಿರುವ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಅವಲೋಕಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸ್ವಾತಂತ್ರ್ಯ ನಮಗೆ ಅನುಮತಿಸುತ್ತದೆ. ನಿಮ್ಮ ಅಭಿಪ್ರಾಯಗಳನ್ನು ನೀವು ವ್ಯಕ್ತಪಡಿಸಿದ್ದಕ್ಕಾಗಿ ಸರಕಾರ ನಿಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಕಳವಳಕಾರಿ. ಇದು ಅಭದ್ರತೆಯನ್ನು ಸೂಚಿಸುತ್ತದೆ'' ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

"ಭಾರತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನೀವು ಧೈರ್ಯದಿಂದ ಹೇಳಿಕೊಂಡಿದ್ದೀರಿ. ನಿಮ್ಮ ಜತೆ ನಾವಿದ್ದೇವೆ. ನಮ್ಮ ಪಕ್ಷ ಕೂಡ ನಿಮ್ಮನ್ನು ಬೆಂಬಲಿಸುತ್ತದೆ" ಎಂದು ರಾಹುಲ್ ಪತ್ರ ಹೇಳುತ್ತದೆ.

2010 ಯುಪಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಶಾ ಫೈಝಲ್ ಅವರು ಎಪ್ರಿಲ್ ತಿಂಗಳಲ್ಲಿ ಟ್ವೀಟ್ ಮಾಡಿ "ಪಾಪ್ಯುಲೇಶನ್ +ಪೆಟ್ರಿಯಾರ್ಕಿ + ಇಲ್ಲಿಟರೆಸಿ + ಆಲ್ಕೋಹಾಲ್+ ಪೋರ್ನ್+ ಟೆಕ್ನಾಲಜಿ +ಅನಾರ್ಖಿ = ರೇಪಿಸ್ತಾನ್'' ಎಂದು ಟ್ವೀಟ್ ಮಾಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಮ್ಮು ಕಾಶ್ಮಿರ ಸರಕಾರಕ್ಕೆ ಸೂಚಿಸಿತ್ತು. ಅಂತೆಯೇ ಅಧಿಕಾರಿ ವಿರುದ್ಧ ನೋಟಿಸ್ ಕೂಡ ಜಾರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News