ಅಭಿವೃದ್ಧಿಗೆ ಸಚಿವ ಸ್ಥಾನದ ಅವಶ್ಯಕತೆಯಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ

Update: 2018-07-18 16:45 GMT

ದಾವಣಗೆರೆ,ಜು.18: ಅಭಿವೃದ್ಧಿಗೆ ಸಚಿವ ಸ್ಥಾನದ ಅವಶ್ಯಕತೆಯಿಲ್ಲ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು. 

ಬುಧವಾರ 9 ಮತ್ತು 10ನೇ ವಾರ್ಡ್‍ನಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಗೆ ಉಸ್ತುವಾರಿ ಸಚಿವ ಸ್ಥಾನದ ಕೊರತೆ ಇಲ್ಲದಂತೆ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ರಸ್ತೆ, ಚರಂಡಿಗಳು ಕಾಂಕ್ರೀಟೀಕರಣ ಆಗುತ್ತಿವೆ. ಈ ಎಲ್ಲಾ ಕಾಮಗಾರಿಗಳಿಗೆ ಹಿಂದಿನ ಸರ್ಕಾರದಿಂದ ಅನುದಾನ ತರಲಾಗಿದ್ದು, ಅನುದಾನ ಕೊರತೆ ಉಂಟಾಗುವುದಿಲ್ಲ. ಅಗತ್ಯ ಬಿದ್ದರೆ ಅನುದಾನ ತರಲಾಗುವುದು ಎಂದರು.

ಮುಂದಿನ 6 ತಿಂಗಳೊಳಗಾಗಿ ದಾವಣಗೆರೆಗೆ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಮೂಲಸೌಲಭ್ಯಗಳಿಗೆ ಸಹ ಒತ್ತು ಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲಸದ ಒತ್ತಡದಿಂದಾಗಿ ಕಣ್ಣೀರು ಹಾಕುತ್ತಿದ್ದಾರೆ. ಹೊರತಾಗಿ ಕಾಂಗ್ರೆಸ್‍ನ ಒತ್ತಡವಿಲ್ಲ ಎಂದು ಅವರೇ ಸ್ಪಷ್ಟ ಪಡಿಸಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ವಿತರಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಮನೂರು, ಸರ್ಕಾರ ಇದೀಗ ತಾನೇ ರಚನೆಯಾಗಿದೆ. ಕೊಟ್ಟ ಆಶ್ವಾಸನೆ ಈಡೇರಿಸಲು ಸ್ವಲ್ಪಮಟ್ಟದ ಕಾಲಾವಾಕಾಶ ಬೇಕಿದೆ. ಕೂಸು ಹುಟ್ಟಲು ಒಂಭತ್ತು ತಿಂಗಳು ಹೇಗೆ ಸಮಯಬೇಕು ಅದೇ ರೀತಿ ಎಲ್ಲಾ ಭರವಸೆ ಈಡೇರಿಸಲು ಸಮಯ ಬೇಕು. ನಮ್ಮ ಸರ್ಕಾರ ಉಚಿತ ಬಸ್ ಪಾಸ್ ವಿತರಣೆ ಮಾಡುವುದು ಖಂಡಿತ ಎಂದು ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ಲಕ್ಷ್ಮೀದೇವಿ ಬಿ. ವೀರಣ್ಣ, ಅನಿತಾಬಾಯಿ, ದಿನೇಶ್ ಕೆ. ಶೆಟ್ಟಿ,  ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್, ನಗರಸಭಾ ಮಾಜಿ ಅಧ್ಯಕ್ಷ ಬಿ. ವೀರಣ್ಣ, ನಗರಸಭಾ ಮಾಜಿ ಉಪಾಧ್ಯಕ್ಷ ಎಸ್.ಎನ್. ಚಂದ್ರಪ್ಪ, ಡೂಡಾ ಮಾಜಿ ಸದಸ್ಯ ವಿನಾಯಕ ಪೈಲ್ವಾನ್, ಗೌಡ್ರು ಚನ್ನಬಸಪ್ಪ, ವಾರ್ಡ್ ಅಧ್ಯಕ್ಷ ಡಿಶ್ ಮಂಜುನಾಥ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News