ದಾವಣಗೆರೆ: ರಾಜ್ಯ ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

Update: 2018-07-18 16:50 GMT

ದಾವಣಗೆರೆ,ಜು.18: ಉಚಿತ ಬಸ್‍ಪಾಸ್ ಸೇರಿದಂತೆ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಲಿಲ್ಲವೆಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟಿಸಿದರು. 

ನಗರದ ಶ್ರೀ ಜಯದೇವ ವೃತ್ತದಿಂದ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗುತ್ತಾ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಎಸಿ ಸಿದ್ದೇಶ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ಸಂಘಟನೆ ಮುಖಂಡ ರಾಮು ವರ್ಣೇಕರ್, 2018-19ನೇ ಸಾಲಿನ ಬಜೆಟ್‍ನಲ್ಲಿ ಪರಿಶಿಷ್ಟರೂ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ನೀಡುವ ಘೋಷಣೆ ಮಾಡಲಾಗಿತ್ತು. ಆದರೆ, ಈಗಿನ ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಚೊಚ್ಚಲ ಬಜೆಟ್‍ನಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಬಸ್‍ಪಾಸ್ ನೀಡದೇ, ಕಡೆಗಣಿಸಿದ್ದಾರೆ ಎಂದರು. ಒಂದು ಕಡೆ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ನೀಡುವ ವಿಚಾರದಲ್ಲಿ ಸಿಎಂ ತಾರತಮ್ಯ ಮಾಡಿದರೆ, ಮತ್ತೊಂದು ಕಡೆ ಸಾರಿಗೆ ಸಚಿವರು ಉಚಿತ ವಿದ್ಯಾರ್ಥಿ ಬಸ್ ಪಾಸ್ ನೀಡುವುದಿಲ್ಲವೆಂಬ ಹೇಳಿಕೆ ನೀಡಿದ್ದನ್ನು ಖಂಡಿಸಿ, ರಾಜ್ಯದ ಸಮಸ್ತ ವಿದ್ಯಾರ್ಥಿಗಳ ಹಿತಕ್ಕಾಗಿ ಎಬಿವಿಪಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಂಡಿದ್ದು, ಸರ್ಕಾರ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವವರೆಗೂ ಹೋರಾಟ ನಡೆಯಲಿದೆ ಎಂದರು. 

ವಿದಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆಯೂ ಬೀಳುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಬಸ್‍ಪಾಸ್ ವಿಚಾರ ಸರ್ಕಾರವು ಲಾಭ, ನಷ್ಟದ ಲೆಕ್ಕಾಚಾರದಲ್ಲಿ ನೋಡದೇ, ವಿದ್ಯಾರ್ಥಿಗಳು, ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಗಮನಿಸಬೇಕು ಎಂದರು. ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕಳೆದ ಜೂನ್ 7ರಿಂದಲೇ ಬಸ್‍ಪಾಸ್ ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಅದನ್ನು ವಿಸ್ತರಿಸಬೇಕು ಎಂಬುದೇ ರಾಜ್ಯದ ಸಮಸ್ತ ವಿದ್ಯಾರ್ಥಿಗಳ ಬೇಡಿಕೆಯೂ ಆಗಿದೆ ಎಂದರು. 

ಕಳೆದ 2 ತಿಂಗಳಿನಿಂದಲೂ ಎಬಿವಿಪಿ ಹೋರಾಟ ನಡೆಸಿದ್ದರೂ ಸ್ಪಂದಿಸುವ ವ್ಯವದಾನವೂ ಮೈತ್ರಿ ಸರ್ಕಾರಕ್ಕೆ ಇಲ್ಲವಾಗಿದೆ. ವಿದ್ಯಾರ್ಥಿಗಳ ಪ್ರಬಲ ಬೇಡಿಕೆಯಾದ ಉಚಿತ ಬಸ್‍ಪಾಸ್ ನೀಡಲು ವಿಫಲವಾದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿದ್ಯಾರ್ಥಿ ವಿರೋಧಿ ಧೋರಣೆ ಖಂಡಿಸಿ ತೀವ್ರ ಹೋರಾಟ ನಡೆಸಲಿದ್ದು, ಹಿಂದಿನ ಸರ್ಕಾರದ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡಬೇಕು ಎಂದರು. 

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗಗನ್, ಕಮಲೇಶ, ಪ್ರದೀಪ್, ಸುಹಾಸ್, ಶ್ರೀಹರಿ, ವಿವೇಕ್, ಸ್ವಾತಿ, ಸ್ನೇಹ, ಶರತ್, ಪ್ರಶಾಂತ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News