ಚಿಕ್ಕಮಗಳೂರಿನಲ್ಲಿ ಮೂಲಸೌಕರ್ಯ ವಂಚಿತ ಹಲವು ಗ್ರಾಮಗಳು: ಕಾಲು ಸಂಕ, ಸಾರಗಳ ಮೂಲಕ ಜೀವನ

Update: 2018-07-18 18:16 GMT

ಕೊಪ್ಪ, ಜು.18: ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಗ್ರಾಮಗಳು ಇಂದಿಗೂ ಮೂಲಸೌಕರ್ಯ ವಂಚಿತವಾಗಿವೆ. ಕೆಲವು ಗ್ರಾಮಗಳಂತೂ ಮಳೆಗಾಲದ ದಿನಗಳಲ್ಲಿ ಪಟ್ಟಣದ ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ. ರಸ್ತೆ ಸಂಪರ್ಕವಿಲ್ಲದ ಅನೇಕ ಗ್ರಾಮಗಳಲ್ಲಿ ಜನ ಕಾಲು ಸಂಕ(ಕೈಪಿಡಿಯಿಲ್ಲದ ಸಣ್ಣ ಸೇತುವೆ), ಸಾರ(ಮರದಿಂದ ನಿರ್ಮಿಸಿದ ತಾತ್ಕಾಲಿಕ ಸೇತುವೆ)ಗಳನ್ನೇ ಅವಲಂಬಿಸಿವೆ.

ತಾಲೂಕಿನ ಸಿದ್ಧರಮಠ, ನುಗ್ಗಿ, ಮೇಗೂರು, ಹಸಿರುಕೊಡಿಗೆ, ಮೇಗೂರು, ಕೊಗ್ರೆ, ಮುಂತಾದ ಭಾಗಗಳಲ್ಲಿ ಈಗಲೂ ಕಾಲುಸಂಕವನ್ನೇ ಬಳಸಿ ಓಡಾಡುವ ಸ್ಥಿತಿ ಇದೆ. ಸಿದ್ದರಮಠ ಸಮೀಪದ ಮಾತ್‌ಗೋಡು ಮತ್ತು ಬಾಂದಡ್ಲುವಿನಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಬಾಂದಡ್ಲುವಿನ ಮಂದಿ ಕೊಪ್ಪಕ್ಕೆ ಬರಬೇಕಾದರೆ ಬ್ರಾಹ್ಮೀ ನದಿ ದಾಟಿ ಮಾತ್‌ಗೋಡು ಸಿದ್ಧರಮಠಕ್ಕೆ ಬರಬೇಕಾಗುತ್ತದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ನದಿಯ ಮೂಲಕವೇ ದಾಟಿಕೊಂಡು ಬರಬಹುದು. ಆದರೆ, ಮಳೆಗಾಲದಲ್ಲಿ 6-7ತಿಂಗಳು ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ನದಿ ದಾಟುವುದು ಕಷ್ಟ. ನದಿಗೆ ಸೇತುವೆ ನಿರ್ಮಾಣವಾಗಿಲ್ಲ. ಇದು ನದಿಯ ಒಂದು ಭಾಗದಲ್ಲಿರುವ ಬಾಂದಡ್ಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಸೇರಿದ್ದರೆ ಇನ್ನೊಂದು ಭಾಗದಲ್ಲಿರುವ ಮಾತ್ಗೋಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪತಾಲೂಕಿಗೆ ಸೇರುತ್ತದೆ. ಬ್ರಾಹ್ಮೀ ನದಿಯೇ ಎರಡು ಜಿಲ್ಲೆಗಳನ್ನು ಪ್ರತ್ಯೇಕಿಸುತ್ತದೆ. ಇದೇ ಕಾರಣಕ್ಕಾಗಿ ಈವರೆಗೆ ನದಿಗೆ ಸೇತುವೆ ನಿರ್ಮಾಣ ವಾಗಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ತಾತ್ಕಾಲಿಕವಾಗಿ ನದಿಗೆ ಅಡ್ಡಲಾಗಿ 50 ಅಡಿ ಉದ್ದದ ಸಾರ(ಮರವನ್ನು ಬಳಿಸಿ ನಿರ್ಮಿಸಿರುವ ತಾತ್ಕಾಲಿಕ ಸಂಕ) ಎರಡು ಕಡೆಯ ಗ್ರಾಮಸ್ಥರು ಸೇರಿ ನಿರ್ಮಿಸಿದ್ದು, ಇದು ಆಗಾಗ ನೀರಿನ ಸೆಳೆತಕ್ಕೆ ಕೊಚ್ಚಿಹೋಗುತ್ತಿರುತ್ತದೆ. ಬಾಂದಡ್ಲುವಿನಲ್ಲಿ 10 ಕುಟುಂಬಗಳ 75 ಮಂದಿ ಇದ್ದು ಅಂಗನವಾಡಿಗೆ ಹೋಗುವ 4, ಪ್ರಾಥಮಿಕ ಶಾಲೆಗೆ ಹೋಗುವ 2 ಹಾಗೂ ಪ್ರೌಢಶಾಲೆಗೆ ಹೋಗುವ 4 ಮಕ್ಕಳಿದ್ದಾರೆ. 5 ಮಂದಿ ವಯಸ್ಕರು ಹಾಗೂ ಒಬ್ಬ ವಿಕಲಚೇತನ ಇದ್ದಾರೆ. ಎಲ್ಲಾ ರೈತ ಕುಟುಂಬಳಾಗಿದ್ದು ತಮ್ಮ ಎಲ್ಲಾ ಅವಶ್ಯಕತೆಗಳಿಗೂ ಈ ಕಾಲುಸಂಕವನ್ನು ದಾಟಿ ಹೋಗಬೇಕಾಗುತ್ತದೆ. ಕೆಲವು ಸಲ ನದಿಯ ನೀರು ಕಾಲು ಸಂಕದ ಮೇಲೆ ಬರುತ್ತದೆ. ಇಲ್ಲಿನ ಜನ ದಿನನಿತ್ಯ ಸಂಕದ ಮೇಲೆ ಸರ್ಕಸ್ ಮಾಡಿಕೊಂಡೇ ದಾಟಬೇಕಾದ ಅನಿವಾರ್ಯತೆ ಉಂಟಾಗಿದೆ. ವಿದ್ಯುತ್ ಸಂಪರ್ಕವಿಲ್ಲದೇ ಚಿಮಿಣಿ ದೀಪದಲ್ಲೇ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕಿ.ಮೀ. ಗಟ್ಟಲೇ ದೂರದಿಂದ ನೀರು ಹೊತ್ತು ತರಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸೇತುವೆ ನಿರ್ಮಿಸಿಕೊಡುವಂತೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಲಾಯಿತು. ಕಳೆದ ಬಾರಿ ಡಿ.ಎಚ್. ಶಂಕರಮೂರ್ತಿಯವರು ವಿಧಾನ ಪರಿಷತ್ ಸಭಾಧ್ಯಕ್ಷರಾಗಿದ್ದಸಂದರ್ಭ ಮನವಿ ಮಾಡಿದ್ದು, ಅಧಿಕಾರಿಗಳು ಬಂದು ಸರ್ವೆ ಮಾಡಿ ಅಂದಾಜು ಪಟ್ಟಿ ತಯಾರಿಸಿಕೊಂಡು ಹೋಗಿದ್ದರು. 20 ಲಕ್ಷದಲ್ಲಿ ಕಾಂಕ್ರಿಟ್‌ನ ಕಾಲು ಸಂಕ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಅಷ್ಟರಲ್ಲಿ ಅವರ ಅಧಿಕಾರಾವಧಿ ಮುಗಿದ ಕಾರಣ ಸೇತುವೆ ನಿರ್ಮಾಣದ ಕನಸು ಕಮರಿಹೋಯಿತು ಎಂದು ತಮ್ಮ ಸಂಕಷ್ಟ ಹೇಳಿಕೊಳ್ಳು ಗ್ರಾಮಸ್ಥರು, ಆದಷ್ಟು ಶೀಘ್ರ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ತಾತ್ಕಾಲಿಕ ಸೇತುವೆ ಬಳಸಿ ಜನ ಓಡಾಡಬೇಕಾಗುತ್ತದೆ. ಪದೇ ಪದೇ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದ್ದು ಜನ ಕಷ್ಟ ಪಡುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ಸೇತುವೆ ಹಾಗೂ 1 ಕಿ.ಮೀ. ರಸ್ತೆ ನಿರ್ಮಿಸಿಕೊಡಬೇಕು.
-ನಟರಾಜ್, ತಟ್ಟಿಬೈಲು ಗ್ರಾಮಸ್ಥ

ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮೂರಿಗೆ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ ಸೌಲಭ್ಯ ಬಂದಿಲ್ಲ. 4 ವರ್ಷದ ಹಿಂದೆ ವಿದ್ಯುತ್ ಸೌಲಭ್ಯ ಬಿಟ್ಟರೇ ಬೇರೆ ಯಾವುದೇ ಅನುಕೂಲತೆ ಸಿಕ್ಕಿಲ್ಲ. ದಿನನಿತ್ಯ ಶಾಲಾ ಮಕ್ಕಳು, ವಯಸ್ಕರು, ಅಂಗವಿಕಲರು ಜೀವಭಯದಲ್ಲಿ ಕಾಲುಸಂಕ ದಾಟಿಕೊಂಡು ಓಡಾಡಬೇಕು. ನಗರದಿಂದ ಸರಕು-ಸಾಮಗ್ರಿಯನ್ನು 4 ಕಿ.ಮೀ ತಲೆಮೇಲೆ ಹೊತ್ತು ತರಬೇಕು. ಆದಷ್ಟು ಬೇಗ ಅಗತ್ಯ ಸೌಲಭ್ಯಗಳನ್ನು ಸರಕಾರ ಕಲ್ಪಿಸಬೇಕು.
-ವಿಶ್ವನಾಥ್, ಬಾಂದಡ್ಲು ಗ್ರಾಮಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News