ಕೊಡಗಿನಲ್ಲಿ ಮಳೆಹಾನಿಯಿಂದ ಅಪಾರ ನಷ್ಟ: 1 ಸಾವಿರ ಕೋಟಿ ಬಿಡುಗಡೆಗೆ ಅಪ್ಪಚ್ಚು ರಂಜನ್ ಒತ್ತಾಯ

Update: 2018-07-18 18:24 GMT

ಮಡಿಕೇರಿ, ಜು.18: ಕೊಡಗಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಭೀಕರವಾಗಿದ್ದು, ಮಳೆಹಾನಿ ಪರಿಹಾರ ಕಾರ್ಯ ಕೈಗೊಳ್ಳಲು ಕನಿಷ್ಠ 1 ಸಾವಿರ ಕೋಟಿ ರೂ. ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.

ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಕ್ಕೆ ಒತ್ತಿಕೊಂಡಂತಿರುವ ಮೂವತ್ತೊಕ್ಲು, ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಶಿರಂಗಳ್ಳಿ, ಕಿಕ್ಕರಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಕೂತಿ, ತೋಳೂರುಶೆಟ್ಟಳ್ಳಿ ಭಾಗದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಇಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಹಿತ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರ ಜನಪ್ರತಿನಿಧಿಗಳು ಭೇಟಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕೊಡಗು ಜಿಲ್ಲೆ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರಕಾರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು. ಜಿಲ್ಲೆಯ ಸಂತ್ರಸ್ತರಿಗೆ ಅಗತ್ಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಶಾಸಕರು ಮೂವತ್ತೊಕ್ಲು ಗ್ರಾಮಕ್ಕೆ ತೆರಳಿದ ಸಂದರ್ಭ ಗ್ರಾಮಸ್ಥರು ಅಲ್ಲಿನ ಸಂಕಷ್ಟದ ಸನ್ನಿವೇಶದ ಬಗ್ಗೆ ಮಾಹಿತಿ ಒದಗಿಸಿದರು. ಎಂ.ಡಿ. ಕಾರ್ಯಪ್ಪಅವರ ಮನೆಯ ಛಾವಣಿ ಭಾರೀ ಗಾಳಿಗೆ ಹಾರಿ ಹೋಗಿದ್ದು, ಸಂಗೀತ ಮತ್ತು ಗಂಗೆ ಎಂಬವರ ಮನೆಯ ಬರೆಕುಸಿತದಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವದನ್ನು ರಂಜನ್ ಪರಿಶೀಲಿಸಿದರು. ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಗಂಗೆ ಅವರ ಮನೆಯ ಕೆಳಭಾಗದಲ್ಲಿ ರೂ. 1.50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಬೇಕು. ಪ್ರತಿ ಮನೆಗಳಿಗೂ ಪೈಪ್ ನೀಡಿ ಮನೆಯ ನೀರನ್ನು ಚರಂಡಿಗೆ ಹರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ ಅವರಿಗೆ ಸೂಚಿಸಿದರು.

ಶಿರಂಗಳ್ಳಿ-ಗರ್ವಾಲೆ-ಸೂರ್ಲಬ್ಬಿ-ಶಾಂತಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಬರೆ ಕುಸಿತ ಸಂಭವಿಸಿದ್ದು, ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಡಕಾಗಿದೆ. ಇದರೊಂದಿಗೆ ಬರೆಕುಸಿತದಿಂದ ಹೊಳೆಗೆ ಮಣ್ಣು ತುಂಬಿದ್ದು, ತಕ್ಷಣ ಜೆಸಿಬಿ ಯಂತ್ರದಿಂದ ರಸ್ತೆಯ ಮೇಲಿರುವ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಅಭಿಯಂತರ ಪೀಟರ್ ಅವರಿಗೆ ನಿರ್ದೇಶನ ನೀಡಿದರು. ಅಲ್ಲದೆ, ಹಾನಿ ಪ್ರಕರಣಗಳ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಕಂದಾಯ ಇಲಾಖಾಧಿಕಾರಿ ಉಮೇಶ್ ಅವರಿಗೆ ಸೂಚಿಸಿದರು.

ಸೂರ್ಲಬ್ಬಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಇಲ್ಲಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನ ಸೆಳೆದರು. ಈ ಬಗ್ಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು, ವೈದ್ಯರ ನಿಯೋಜನೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ತೋಳೂರುಶೆಟ್ಟಳ್ಳಿಯ ಹಲವರ ಮನೆ ಹಾಗೂ ಕೊಟ್ಟಿಗೆ, ಚಿಕ್ಕತೋಳೂರು ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ, ತೋಳೂರುಶೆಟ್ಟಳ್ಳಿ ಸ.ಮಾ.ಪ್ರಾ. ಶಾಲೆಯ ಮೇಲ್ಛಾವಣಿ, ಯಡದಂಟೆ ಬಸ್ ತಂಗುದಾಣದ ಮೇಲ್ಛಾವಣಿ ಮಳೆಯಿಂದ ಹಾನಿಗೊಳಗಾಗಿರುವ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ತೋಳೂರುಶೆಟ್ಟಳ್ಳಿಯಲ್ಲಿ ಶಾರದ ಎಂಬವರ ಮನೆ ಸಂಪೂರ್ಣ ನೆಲಸಮಗೊಂಡಿದ್ದು, ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲಾಗುವುದು. ಇದರೊಂದಿಗೆ ಸರಕಾರದ ಆಶ್ರಯ ಯೋಜನೆಯಡಿಯಲ್ಲೂ ನೂತನ ಮನೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಸದಸ್ಯ ರಜಿತ್‌ಕುಮಾರ್, ಪ್ರಮುಖರಾದ ಕೆ.ಕೆ. ಸುಧಾಕರ್, ಉಮೇಶ್, ಚಂದ್ರಶೇಖರ್, ಶಶಿ, ಪಳಂಗಪ್ಪ, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News