ಪೊಲೀಸರಿಗೆ ನಾನು ಅಣಕದ ವಸ್ತು: ಉತ್ತರ ಪ್ರದೇಶ ಬಿಜೆಪಿಯ ದಲಿತ ಶಾಸಕ

Update: 2018-07-19 05:11 GMT

ಫೈಝಾಬಾದ್, ಜು.19: ಆಡಳಿತ ಪಕ್ಷದ ಶಾಸಕನೊಬ್ಬ ಜನಸಾಮಾನ್ಯರಂತೆ ಸರದಿಯಲ್ಲಿ ಬಂದು ತಹಶೀಲ್ ದಿವಸ್ ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಹೇಗಿರಬಹುದು?

ಬಹರೀಚ್ ಜಿಲ್ಲೆ ಬಲ್ಹಾ ಶಾಸಕ, ಬಿಜೆಪಿಯ ದಲಿತ ಮುಖಂಡ ಈ ರೀತಿ ದೂರುವ ಮೂಲಕ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದ್ದಾರೆ. "ಪೊಲೀಸರಿಗೆ ನಾನು ಹಾಸ್ಯದ ಸರಕಾಗಿದ್ದೇನೆ. ಬಡವರ ಪರವಾಗಿ ನಾನು ಮಾಡುವ ಯಾವ ಶಿಫಾರಸ್ಸಿಗೂ ಅವರು ಕಿವಿಗೊಡುತ್ತಿಲ್ಲ. ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಅವರ ಗಮನಕ್ಕೆ ತಂದರೂ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ" ಎಂದು ಅಕ್ಚವಾರ್‌ಲಾಲ್ ಗೊಂಡ್ ಜಿಲ್ಲಾ ಅಧಿಕಾರಿಗಳ ಮುಂದೆ ದೂರಿದರು.

"ಬಿಜೆಪಿ ಕಾರ್ಯಕರ್ತರು ಠಾಣೆಯಲ್ಲಿ ನನ್ನ ಹೆಸರು ಹೇಳಿಕೊಂಡು ಹೋದರೆ, ಅಧಿಕಾರಿಗಳು ಅಣಕವಾಡುತ್ತಾರೆ. ಮನವಿಯನ್ನು ನಿರ್ಲಕ್ಷಿಸುತ್ತಾರೆ" ಎಂದು ಆಪಾದಿಸಿದರು. ತಹಶೀಲ್ ದಿವಸ್ ಸಮಾರಂಭದ ಸ್ಥಳದಲ್ಲಿ ಜನಸಾಮಾನ್ಯರಂತೆ ಸರದಿಯಲ್ಲಿ ನಿಂತು ಗೊಂಡ್ ತಮ್ಮ ದೂರು ದಾಖಲಿಸಿದರು. ಶಾಸಕರನ್ನು ಗುರುತಿಸಿದ ಅಧಿಕಾರಿಗಳು ತಕ್ಷಣ ಅವರನ್ನು ವೇದಿಕೆಗೆ ಕರೆದರು. ಆದರೆ ಶಾಸಕರು, "ನಾನು ಜನಸಾಮಾನ್ಯರಂತೆ ನನ್ನ ದೂರು ದಾಖಲಿಸಿದ್ದೇನೆ. ಅಧಿಕಾರಿಗಳಾದರೂ ಇದಕ್ಕೆ ಕಿವಿಗೊಡುತ್ತಾರೆ ಎಂಬ ನಂಬಿಕೆ ನನ್ನದು. ಸುಜೌಲಿ ಠಾಣೆಯ ಪೊಲೀಸ್ ಅಧಿಕಾರಿಗಳು ನಾನು ನೀಡಿದ ಯಾವ ಶಿಫಾರಸ್ಸನ್ನೂ ಮಾನ್ಯ ಮಾಡುವುದಿಲ್ಲ ಹಾಗೂ ನಾನು ಯಾರೆಂದೇ ಗೊತ್ತಿಲ್ಲ ಎಂದು ಹೇಳುತ್ತಾರೆ" ಎಂದು ಶಾಸಕರು ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News