ದೌರ್ಜನ್ಯ ಶೋಷಣೆ ನಿಲ್ಲಲು ಶೋಷಿತರಿಗೆ ಅಧಿಕಾರ ಅತ್ಯಗತ್ಯ: ವಿಚಾರವಾದಿ ಎಂ.ಕೃಷ್ಣಮೂರ್ತಿ

Update: 2018-07-19 16:33 GMT

ಮಂಡ್ಯ, ಜು.19: ದೌರ್ಜನ್ಯ ಮತ್ತು ಶೋಷಣೆ ನಿಲ್ಲಲು ಶೋಷಿತರಿಗೆ ಅಧಿಕಾರ ಅತ್ಯಗತ್ಯ. ಶೋಷಣೆ ಇಂತಹವುಗಳನ್ನು ತಡೆಯಲು ರಾಜಕೀಯ ಮತ್ತು ಉದ್ಯೋಗದ ಅಧಿಕಾರ ಬೇಕಿದೆ ಎಂದು ಅಂಬೇಡ್ಕರ್ ವಿಚಾರವಾದಿ ಎಂ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾ ಎಸ್ಸಿಎಸ್ಟಿ ನೌಕರರ ಭವನದಲ್ಲಿ ಬಹುಜನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್)ಜಿಲ್ಲಾ ಘಟಕ ನೆಲ್ಸನ್ ಮಂಡೆಲಾ ಅವರ 100ನೇ ಜನ್ಮದಿನೋತ್ಸವ ಅಂಗವಾಗಿ ಗುರುವಾರ ಆಯೋಜಿಸಿದ್ದ ಒಂದು ದಿನದ ಶ್ರಮದಾನ ಹಾಗೂ ವರ್ಣಭೇಧ ನೀತಿ ಮತ್ತು ವಿಮೋಚನಾ ಚಳುವಳಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದ ವಿವಿಧ ದೇಶಗಳಲ್ಲಿ ಇಲ್ಲದಂತಹ ಜಾತಿ ಮತ್ತು ಅಸ್ಪೃಶ್ಯತೆ ಭಾರತ ದೇಶಲ್ಲಿ ಹಾಗೂ ವರ್ಣಭೇಧನೀತಿಯು ದಕ್ಷಿಣ ಆಫ್ರೀಕಾದೇಶದಲ್ಲಿ ಕಾಣಬಹುದಾಗಿದೆ. ಜೀವವಿರೋಧಿ ನೀತಿಗಳನ್ನು ಭಾರತದೇಶದಲ್ಲಿ ಮನುಸ್ಮತಿ ಮೂಲಕ ಜನರಿಗೆ ಹೇರಿದಂತೆ ದಕ್ಷಿಣ ಆಫ್ರೀಕಾದ ಕಪ್ಪುವರ್ಣದ ಜನರ ಮೇಲೆ ಬಿಳಿಯ ವರ್ಣದ ಜನರು ವರ್ಣಭೇಧ ನೀತಿ ರೂಪಿಸಿ ಗುಲಾಮಗಿರಿಯನ್ನು ಹೇರಲಾಗಿತ್ತು ಎಂದು ಅವರು ಹೇಳಿದರು.

ವರ್ಣಭೇಧ ನೀತಿ ವಿರುದ್ದ ಹೋರಾಟ ನಡೆಸಲು ಕಪ್ಪುಜನಾಂಗದ ನೆಲ್ಸನ್ ಮಂಡೇಲಾ ಅವರು ಮುಂದಾಗುತ್ತಾರೆ. 26 ವರ್ಷಗಳ ಕಾಲ ಅವರನ್ನು ಬಿಳಿಯ ಜನಾಂಗದ ಅಧಿಕಾರಸ್ಥರು ಬಂಧಿಸಿ ಜೈಲಿನಲ್ಲಿ ಇರಿಸುತ್ತಾರೆ. ಆದರೂ ಅವರು ಹೋರಾಟವನ್ನು ಮುಂದುವರಿಸಿ, ದಕ್ಷಿಣ ಆಫ್ರೀಕಾದ ಅಧ್ಯಕ್ಷರಾಗಿ ವಿಶ್ವಗಣ್ಯರೆನಿಸಿ ಹೊಸ ಇತಿಹಾಸ ಸೃಷ್ಠಿಸಿಸುತ್ತಾರೆ ಎಂದು ಅವರು ಸ್ಮರಿಸಿದರು.

ಭಾರತದೇಶದಲ್ಲಿ ಇಂದಿಗೂ ವರ್ಣಪದ್ದತಿ, ಜಾತಿ ವ್ಯವಸ್ಥೆ, ಅಸ್ಪೃಶ್ಯತಾ ಆಚರಣೆ ಜೀವಂತವಾಗಿರುವುದಕ್ಕೆ ನಿರಂತವಾಗಿ ಶೋಷಿತರ ಮೇಲೆ ದೌರ್ಜನ್ಯಗಳು, ದಬ್ಬಾಳಿಕೆಗಳು, ಅತ್ಯಾಚಾರಗಳು, ಕೊಲೆಗಳು ವರದಿಯಾಗುತ್ತಿವೆ. ಯುವ ಸಮುದಾಯವಾದರೂ ಶಿಕ್ಷಣ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿ ಇಂತಹ ಅನಿಷ್ಠ ಪದ್ದತಿಗಳನ್ನು ನಿರ್ಮೂಲನೆ ಮಾಡಲು ಪಣತೊಡಬೇಕಿದೆ ಎಂದು ಅವರು ಕರೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಜಿಲ್ಲಾ ಎಸ್ಸಿಎಸ್ಟಿ ನೌಕರರ ಭವನದ ಆವರಣದಲ್ಲಿ ಒಂದು ದಿನ ಶ್ರಮದಾನ ನಡೆಸಿ, ಅನಗತ್ಯ ಸಸಿ ಮತ್ತು ತ್ಯಾಜ್ಯವಸ್ತಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಬಹುಜನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ತರಬೇತಿದಾರ ವಜ್ರಮುನಿ ಬಹುಜನ್, ಬಿವಿಎಸ್ ಕಾರ್ಯಾಧ್ಯಕ್ಷ ಏಳುಮಲೈ, ಮಹಿಳಾ ಉಪಾಧ್ಯಕ್ಷೆ ಅನುಪಮ, ಸಂಯೋಜಕ ಪ್ರಮೋದ್, ರಾಹುಲ್, ಬಾಲಕೃಷ್ಣ, ಸಿಂಧು, ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News