ಕೊಪ್ಪ: ಮನೆ ಮೇಲೆ ಮರ ಬಿದ್ದು ಹಾನಿ

Update: 2018-07-19 17:47 GMT

ಕೊಪ್ಪ, ಜು.19: ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಪಟ್ಟಣದ ವಿದ್ಯಾನಗರದಲ್ಲಿ ಗಾಯತ್ರಿ ಎಂಬವರ ವಾಸದ ಮನೆಯ 20ಕ್ಕೂ ಹೆಚ್ಚು ಸಿಮೆಂಟ್ ಶೀಟುಗಳು ಹಾರಿಹೋಗಿದ್ದು, ಮನೆಯ ಗೋಡೆ ಬಿರುಕುಬಿಟ್ಟಿದೆ. 

ಪಟ್ಟಣದ ಹೊರವಲಯದ ಕೌರಿಯಲ್ಲಿ ಪ್ರೇಮಾ ರವಿ ಹಾಗೂ ಸುಶೀಲಾ ನರಸಿಂಹ ಎಂಬವರ ವಾಸದ ಮನೆಯ ಮೇಲೆ ಬೃಹತ್ ಗಾತ್ರದ ಮಾವಿನ ಮರ ಉರುಳಿ ಬಿದ್ದು ಹಾನಿಯಾಗಿದೆ. ಎರಡೂ ಮನೆಯ ಛಾವಣಿಯ ಸಿಮೆಂಟ್ ಶೀಟು ಪುಡಿಯಾಗಿದೆ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯರಾದ ವೈ.ಎಚ್.ಅಬ್ದುಲ್ ಹಮೀದ್, ಎಚ್.ಆರ್.ಸಂಜೀವ, ಶಾರದಾ ವಿಠಲ್, ಪಿಡಿಒ ಅನಿಲ್ ಕುಮಾರ್ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹರಿಹರಪುರ ಹೋಬಳಿ ಕುಪ್ಪಳಿ ಗ್ರಾಮದ ಬಿ.ಟಿ. ಸುಬ್ರಹ್ಮಣ್ಯ ಎಂಬವರ ದನದ ಕೊಟ್ಟಿಗೆ ಮೇಲೆ ಅಕೇಶಿಯಾ ಮರ ಬಿದ್ದು 150ಕ್ಕೂ ಅಧಿಕ ಹಂಚುಗಳು ಪುಡಿಯಾಗಿದೆ. ಭಂಡೀಗಡಿ ಪೇಟೆಯಲ್ಲಿ ಮುಹಮ್ಮದ್ ಹುಸೇನ್ ಎಂಬವರ ವಾಸದ ಮನೆಯ ಗೋಡೆ ಕುಸಿದು ಬಿದ್ದು ಹಾನಿಯುಂಟಾಗಿದೆ. ಭಂಡೀಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈಚಲುಬೈಲಿನ ಈ.ಟಿ. ವೆಂಕಟೇಶ್ ಎಂಬವರ ಮನೆಯ ಪಕ್ಕದಲ್ಲಿ ಧರೆ ಸಮೇತ ಮರ ಉರುಳಿ ಬಿದ್ದಿದೆ. ಮೇಗುಂದ ಹೋಬಳಿಯ ಬಸ್ರೀಕಟ್ಟೆ-ಅಬ್ಬಿಕಲ್ಲು ಮಧ್ಯೆ ಮುಖ್ಯ ರಸ್ತೆಯ ಮೇಲೆ ಗುಡ್ಡ ಜರಿದು ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News