ಮಡಿಕೇರಿ: ಜೆಡಿಎಸ್ ನಲ್ಲಿ ಅಪಸ್ವರ; ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿರುದ್ಧ ಅಸಮಾಧಾನ

Update: 2018-07-19 18:12 GMT

ಮಡಿಕೇರಿ, ಜು.19: ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಪಕ್ಷದ ಹಿರಿಯರನ್ನು ಕಡೆಗಣಿಸುತ್ತಿದ್ದು, ಪಕ್ಷವನ್ನು ಪುನರ್ ರಚಿಸುವ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾ ಮುಖಂಡ ಕಾರ್ಮಾಡು ಸುಬ್ಬಣ್ಣ ತಿಳಿಸಿದ್ದಾರೆ.

ಮಡಿಕೇರಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರು ಪಕ್ಷದ ಹಿರಿಯರನ್ನು ನಿರ್ಲಕ್ಷಿಸುತ್ತಿದ್ದು, ಪಕ್ಷ ಬೆಳವಣಿಗೆ ಕುಂಟಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರಾಗಲಿ, ಸಂಸದರಾಗಲಿ ಇಲ್ಲ. ಹಾಗಾಗಿ ಸಾರ್ವಜನಿಕರು ನೀಡುವ ಮನವಿ ಪತ್ರಗಳನ್ನು ಪಕ್ಷದ ಕಾರ್ಯಕರ್ತರೇ ಮುಖ್ಯಮಂತ್ರಿಗಳಿಗೆ ತಲುಪಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಜ್ಯ ಯುವ ಜನತಾದಳ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ಜಿಲ್ಲಾಧ್ಯಕ್ಷರಿಗೆ ಪಕ್ಷದಲ್ಲಿ ಆಸಕ್ತಿ ಇಲ್ಲ, ಸದ್ಯ ಬಲಿಷ್ಠ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂದರು. ಈಗಿರುವ ಸಮಿತಿಯನ್ನು ವಿಸರ್ಜನೆ ಮಾಡಿ ಹೊಸ ಸಮಿತಿ ರಚಿಸಲು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾರ್ಮಾಡು ಸುಬ್ಬಣ್ಣನವರಿಗೆ ಜಿಲ್ಲಾದ್ಯಂತ ಜನ ಬೆಂಬಲವಿದೆ. ಅವರು ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ಪಕ್ಷ ಇನ್ನಷ್ಟು ಸಂಘಟನೆಗೊಳ್ಳಲಿದೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥಗೊಳಿಸಲು ಎಲ್ಲರೂ ಪರಿಶ್ರಮ ಪಡಬೇಕಾಗಿದೆ ಎಂದರು. ಪಕ್ಷಕ್ಕಾಗಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಾಗಿದೆ. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಪಕ್ಷದ ಆಗು-ಹೋಗುಗಳ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇಂತಹ ಮುಜುಗರದ ವ್ಯವಸ್ಥೆ ನಿರ್ಮಾಣವಾಗಿರುವುದು ಬೇಸರ ತಂದಿದೆ ಎಂದರು.

ಹಿರಿಯ ಮುಖಂಡ ದಯಾ ಚಂಗಪ್ಪ ಮಾತನಾಡಿ, ಮುಂಬರುವ ಪಟ್ಟಣ ಪಂಚಾಯತ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಮಡಿಕೇರಿ ಹಾಗೂ ಸೋಮವಾರಪೇಟೆಯಲ್ಲಿ ಪಕ್ಷವನ್ನು ಸದೃಢಗೊಳಿಸಬೇಕು. ಜಿಲ್ಲಾಧ್ಯಕ್ಷರ ಬದಲಾವಣೆ ಅನಿವಾರ್ಯವಾಗಿದ್ದು, ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ಬೆಂಗಳೂರಿಗೆ ನಿಯೋಗ ತೆರಳುತ್ತೇವೆ. ಸಂಕೇತ್ ಪೂವಯ್ಯನವರೂ ನಮ್ಮೊಂದಿಗೆ ಬರಲಿ, ಯಾರಿಗೆ ಜನಬಲ ಇದೆ ಎಂಬುವುದನ್ನು ಸಾಬೀತು ಪಡಿಸೋಣ ಎಂದು ಸವಾಲು ಹಾಕಿದರು.

ಜಿಲ್ಲಾ ಸಣ್ಣ ಕೈಗಾರಿಕೆ ಮತ್ತು ಉದ್ಯಮ ಘಟಕದ ಅಧ್ಯಕ್ಷ ಪಾರೆಮಜುಲು ಕುಸುಮ್, ಜೆಡಿಎಸ್ ಜಿಲ್ಲಾ ವಕ್ತಾರ ಭರತ್ ಕುಮಾರ್, ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಕುಮಾರ್, ಪ್ರಮುಖರಾದ ಬಲ್ಲಚಂಡ ಗೌತಮ್, ಜೀವನ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News