ವಿಶ್ವವಿದ್ಯಾನಿಲಯಗಳ ಆತ್ಮದ ಮೇಲೆ ದಾಳಿ

Update: 2018-07-21 04:46 GMT

ಭಾರತ ತನ್ನ ‘ಇತ್ತುಗಳ ಗರಿಮೆ’ಯನ್ನು ಹಿಡಿದೆತ್ತುವ ಹೆಸರಿನಲ್ಲೇ, ಈಗ ಇರುವುದನ್ನೆಲ್ಲ ನಾಶ ಮಾಡುವ ಮನಸ್ಥಿತಿಯೊಂದನ್ನು ತನ್ನದಾಗಿಸಿಕೊಳ್ಳುತ್ತಿದೆಯೆಯೇ? ಒಂದಾನೊಂದು ಕಾಲದಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿತ್ತು, ಶಿಕ್ಷಣದಲ್ಲಿ ಭಾರತದ ಅಪಾರ ಸಾಧನೆಯನ್ನು ಮಾಡಿತ್ತು ಎಂದು ಹೇಳುತ್ತಲೇ, ಈ ಭಾರತ ಇಂದಿನ ವೈಜ್ಞಾನಿಕ, ವೈಚಾರಿಕ ಚಿಂತನೆಗಳಿಗೆ ಈ ಸಂಸ್ಕೃತಿ ಆರಾಧಕರು ಬಹುದೊಡ್ಡ ಅಡ್ಡಿಯಾಗುತ್ತಿದ್ದಾರೆಯೇ? ಹಿಂದುತ್ವವಾದದ ಹೆಸರಿನಲ್ಲಿ ನಮ್ಮನ್ನಾಳುವ ಮಂದಿ ಹಂತ ಹಂತವಾಗಿ ಹೇಗೆ ವೈಚಾರಿಕ ಚಿಂತನೆಗಳಿಗೆ ಅಡ್ಡಿಯಾಗುತ್ತಿದ್ದಾರೆ ಎನ್ನುವುದಕ್ಕೆ, ಕುಲಗೆಡುತ್ತಿರುವ ಭಾರತದ ಶಿಕ್ಷಣ ನೀತಿಯೇ ಅತ್ಯುತ್ತಮ ಉದಾಹರಣೆ. ಸಂಸ್ಕೃತಿ ರಕ್ಷಕರು 1193ರ ನಳಂದಾ ವಿಶ್ವವಿದ್ಯಾನಿಲಯದ ಕುರಿತಂತೆ ಆಗಾಗ ಕಣ್ಣೀರು ಸುರಿಸುವುದಿದೆ.

ಹೇಗೆ ವಿದೇಶಿಯರು ಪ್ರಾಚೀನ ಭಾರತದ ವಿಶ್ವವಿದ್ಯಾನಿಲಯವೊಂದನ್ನು ನಾಶ ಮಾಡಿದರು ಎನ್ನುವುದನ್ನು ಆಗಾಗ ಸಭೆಗಳಲ್ಲಿ ಭಾಷಣ ಮಾಡುವುದಿದೆ. ಪ್ರಧಾನಿ ಮೋದಿಯೂ ಇದಕ್ಕೆ ಹೊರತಲ್ಲ. ಆದರೆ ಇದೇ ಸಂದರ್ಭದಲ್ಲಿ, ಮೋದಿ ನೇತೃತ್ವದ ಸರಕಾರ ಆಧುನಿಕ ವಿಶ್ವವಿದ್ಯಾನಿಲಯಗಳನ್ನೆಲ್ಲ ಹಂತ ಹಂತವಾಗಿ ನಾಶ ಮಾಡುವುದಕ್ಕೆ ಸಂಚು ನಡೆಸುತ್ತಿದೆ. ಒಂದೆಡೆ ಪ್ರಾಚೀನ ವೈಚಾರಿಕ ಭಾರತವನ್ನು ಮಂಡಿಸುತ್ತಾ, ಆಧುನಿಕ ವೈಚಾರಿಕ ಭಾರತವನ್ನು ಧ್ವಂಸಗೊಳಿಸುವ ಪ್ರಯತ್ನ ನಡೆಯುತ್ತಿದೆ. ವರ್ತಮಾನದ ಆಧುನಿಕ ಭಾರತವನ್ನು ನಾಶಗೊಳಿಸುವುದಕ್ಕಾಗಿಯೇ ಅವರು ಪುರಾತನ ಭಾರತದ ವೈಭವಗಳನ್ನು ಬಳಸುತ್ತಿರುವುದು ಇಂದಿನ ದುರಂತ. ಯುಜಿಸಿಯ ವಿರುದ್ಧ ಸರಕಾರ ಇಡುತ್ತಿರುವ ಹೆಜ್ಜೆಗಳನ್ನು ನಾವು ಗಮನಿಸಬೇಕಾಗಿದೆ. ಮೊದಲು ಸರಕಾರ 1956ರಿಂದ ಅಸ್ತಿತ್ವದಲ್ಲಿದ್ದ ಯುಜಿಸಿಯ ಸ್ಥಾನದಲ್ಲಿ ಭಾರತ ಉನ್ನತ ಶಿಕ್ಷಣ ಆಯೋಗ ವನ್ನು(ಎಚ್‌ಇಸಿಯ) ರಚಿಸುತ್ತಿರುವುದಾಗಿ ಘೋಷಿಸಿತು. ಇದರ ಬಳಿಕ, ಅಸ್ತಿತ್ವದಲ್ಲೇ ಇಲ್ಲದ ಮುಖೇಶ್ ಅಂಬಾನಿ ಪ್ರಾಯೋಜಿತ ಜಿಯೋ ಇನ್‌ಸ್ಟಿಟ್ಯೂಟ್ ಸೇರಿದಂತೆ, ಆರು ‘ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್’ ಎಂಬ ಸಂಸ್ಥೆಗಳ ಘೋಷಣೆಯಾಯಿತು. ಸರಕಾರದ ಈ ಎರಡು ಕ್ರಮಗಳು ಭಾರತದ ಉನ್ನತ ಶಿಕ್ಷಣದ ಸರ್ವನಾಶದ ಆಘಾತಕಾರಿ ಹಾಗೂ ಭಯಾನಕ ತಂತ್ರಗಳ ಭಾಗಗಳಾಗಿವೆ.

ಅಂದ ಹಾಗೆ ಎಚ್‌ಸಿಇಯ ಸುಧಾರಣೆಯ ಅಂಶ ಹೇಗಿರುತ್ತದೆ ಗೊತ್ತೆ? ಮುಂದಿನ ದಿನಗಳಲ್ಲಿ, ಸರಕಾರ ಹೇಳುವ ‘‘ಯಾವುದನ್ನೇ’’ ಅದರ ಉದ್ದೇಶ ಪೂರ್ವಕವಾಗಿ ಅಥವಾ ಸತತವಾಗಿ ಮಾಡಲು ತಪ್ಪಿದಲ್ಲಿ’’ ಆ ವಿಶ್ವವಿದ್ಯಾನಿಲಯಗಳ ಅಧಿಕಾರಗಳನ್ನು ಕಿತ್ತುಕೊಳ್ಳಬಹುದು. ತಪ್ಪುವ ಅಥವಾ ಸರಕಾರದ ನಿಯಮವನ್ನು ಉಲ್ಲಂಘಿಸುವ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರನ್ನು ಅಥವಾ ಉಪಕುಲಪತಿಗಳನ್ನು ಮೂರು ವರ್ಷಗಳ ಅವಧಿಗೆ ಶಿಕ್ಷೆಗೆ ಗುರಿಪಡಿಸಬಹುದು. ವಿಚಿತ್ರ ಅನ್ನಿಸಬಹುದಾದರೂ ಇದೇ ಎಚ್‌ಇಸಿಐ ಮಾಡಲು ಹೊರಟಿರುವ ಸುಧಾರಣೆಯ ಸಾರಾಂಶ. ಯುಜಿಸಿಯ ಕೈಯಲ್ಲಿ ಹಣಕಾಸು ಮಂಜೂರಾತಿ ಮತ್ತು ನಿಯಂತ್ರಣ ಎರಡೂ ಇತ್ತು. ಈಗ ಇವೆರಡನ್ನೂ ಪ್ರತ್ಯೇಕಿಸಲಾಗುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಉನ್ನತ ಶಿಕ್ಷಣಕ್ಕೆ ತಾನೇ ನೇರವಾಗಿ ಅನುದಾನ ನೀಡಲಿದೆ; ಎಚ್‌ಸಿಐ ‘ಗುಣಮಟ್ಟಗಳ’ (ಸ್ಟಾಂಡರ್ಡ್ಸ್) ಉಸ್ತುವಾರಿ ನೋಡಿಕೊಳ್ಳಲಿದೆ. ಆದರೂ ಈ ಉಸ್ತುವಾರಿ ನಡೆಸುವಾಗ ಅದು ರಚಿಸುವ ಯಾವುದೇ ನಿಯಮಕ್ಕೆ ‘ಕೇಂದ್ರ ಸರಕಾರದ ಪೂರ್ವಾನುಮತಿ’ ದೊರಕಿಸಿಕೊಳ್ಳಲೇಬೇಕಾಗುತ್ತದೆ. 1956ರ ಕಾಯ್ದೆಯಂತೆ ಅಸ್ತಿತ್ವಕ್ಕೆ ಬಂದ ಯುಜಿಸಿಯ ಸದಸ್ಯರಲ್ಲಿ ಕೃಷಿ, ಅರಣ್ಯ, ವೈದ್ಯಕೀಯ ಮತ್ತು ಕಾನೂನಿನಂತಹ ಕ್ಷೇತ್ರಗಳಿಂದ ಆಯ್ದ ಸದಸ್ಯರು ಸೇರಿದಂತೆ, ಕನಿಷ್ಠ ಶೇ.50 ಮಂದಿ ಸದಸ್ಯರು ಸರಕಾರದ ಹೊರಗಿನವರಾಗಿರಬೇಕಾಗಿತ್ತು. ಆದರೆ ಈಗ ಎಚ್‌ಇಸಿಐಯಲ್ಲಿ ಸರಕಾರದಿಂದ ನೇಮಿಸಲ್ಪಡುವ/ ನಾಮಾಂಕಿತರಾಗುವ ಸದಸ್ಯರದ್ದೇ ಪ್ರಾಬಲ್ಯವಿರುತ್ತದೆ.

 ಯುಜಿಸಿ ಪರಿಪೂರ್ಣವಾಗಿತ್ತು, ದೋಷರಹಿತವಾಗಿತ್ತು ಎಂದು ಹೇಳಲಾಗದು. ಅದು ಕೂಡ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗೆ ಪೂರಕವಲ್ಲದ ಹಲವು ಹೆಜ್ಜೆಗಳನ್ನಿಡಲು ವಿಶ್ವವಿದ್ಯಾನಿಲಯಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಉದಾಹರಣೆಗೆ ದಿಲ್ಲಿ ವಿವಿಯಲ್ಲಿ ವರ್ಷದಿಂದ ವರ್ಷಕ್ಕೆ ಬದಲಾಗುವ ಪಠ್ಯಕ್ರಮ, ಪರೀಕ್ಷಾ ಕ್ರಮಗಳಿಂದಾಗಿ ಹಲವಾರು ತೊಂದರೆಗಳಾಗಿವೆ. ವಾರ್ಷಿಕ ಪರೀಕ್ಷೆಯ ಬದಲು ಸೆಮಿಸ್ಟರ್ ಪರೀಕ್ಷೆಗಳು, ಇದನ್ನು ವಿದ್ಯಾರ್ಥಿಗಳು ವಿರೋಧಿಸಿದಾಗ ಮರಳಿ ವಾರ್ಷಿಕ ಪರೀಕ್ಷೆ - ಹೀಗೆಲ್ಲ ಅಲ್ಲಿ ನಡೆದಿದೆ. 2018ರಲ್ಲಿ ವಾರಕ್ಕೆ ಈಗ ಇರುವ 12-15ಗಂಟೆಗಳ ಬದಲು ವಾರಕ್ಕೆ 20ಗಂಟೆಗಳ ಉಪನ್ಯಾಸಗಳು ನಡೆಯಬೇಕೆಂದು ಅದು ಹೇಳುತ್ತಿದೆ. ಅಧಿಕಾರಶಾಹಿಗಳು ಮತ್ತು ಸಚಿವರುಗಳು ಕಾಲೇಜಿಗೆ ಹೋಗಿದ್ದಾರೆಯೇ? ವಿದ್ಯಾರ್ಥಿಗಳಿಗೆ 18 ಗಂಟೆ ಆಲಿಸುವ ತಾಳ್ಮೆ ಇರುತ್ತದೆಯೇ? ಒಂದು ಗಂಟೆಯ ಉಪನ್ಯಾಸಕ್ಕೆ ಎಷ್ಟು ಗಂಟೆಗಳ ಸಿದ್ಧತೆ ಬೇಕು? ಎಂದು ಇವರಿಗೆಲ್ಲ ಗೊತ್ತಿದೆಯೇ? ಎಂದು ಕೇಳಬೇಕಾಗಿದೆ.

ಆದರೂ ಎಚ್‌ಇಸಿಐ ತರಲಿರುವ ಸುಧಾರಣೆಗಳು ಇದಕ್ಕಿಂತ ಹೆಚ್ಚು ಸಮಸ್ಯಾತ್ಮಕವಾಗಿರಲಿವೆ. ಉನ್ನತ ಶಿಕ್ಷಣವನ್ನು ವಿಶ್ವ ರ್ಯಾಂಕಿಂಗ್ ದರ್ಜೆಗೆ ಏರಿಸುವ ಸರಕಾರದ ಗೀಳು ಖಾಸಗಿ ಶ್ರೀಮಂತ ವಿಶ್ವವಿದ್ಯಾನಿಲಯಗಳನ್ನು ಇನ್ನಷ್ಟು ಕೊಬ್ಬಿಸಲಿದೆ. ಅತ್ಯುತ್ತಮ ಸಂಶೋಧಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಯಾವಾಗಲೂ ಬೃಹತ್ ವಿವಿಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ, ಸಾರ್ವಜನಿಕ ಹಣಕಾಸು ಕೂಡ ಆ ವಿವಿಗಳಿಗೇ ಹೋಗುತ್ತದೆ. ಖಾಸಗಿ ಹಣಕಾಸು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತದೆ. ಇದೇ ಸಂದರ್ಭದಲ್ಲಿ ಮೂಲ ಸವಲತ್ತುಗಳ ಕೊರತೆಗಳುಳ್ಳ ವಿವಿಗಳು ಹಿಂದಕ್ಕೆ ತಳ್ಳಲ್ಪಡುತ್ತವೆ ಅಥವಾ ನಾಶವಾಗಲಿವೆ. ಆದರೆ ಈಗ ನಮ್ಮ ದೇಶಾದ್ಯಂತ ಕಾಲೇಜುಗಳಿಗೆ ಮೂಲ ಸೌಕರ್ಯಗಳಿಲ್ಲ - ಶೌಚಾಲಯಗಳು , ಪರೀಕ್ಷೆಗಳು ಮತ್ತು ಸಲಕರಣೆಗಳಿಲ್ಲ. ಭಾರತದಲ್ಲಿ 760 ವಿಶ್ವವಿದ್ಯಾನಿಲಯಗಳಿವೆ ಮತ್ತು 38,498 ಕಾಲೇಜುಗಳಿವೆ. ಅಂದಾಜು 31.56ಮಿಲಿಯನ್ ವಿದ್ಯಾರ್ಥಿಗಳಲ್ಲಿ ಶೇ.80ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪದವಿ ಹಂತದ ಕೋರ್ಸುಗಳಲ್ಲಿ ಕಲಿಯುವವರು.ಕೇವಲ ಶೇ.0.67 ವಿದ್ಯಾರ್ಥಿಗಳು ಮತ್ತು ಸರಕಾರ ನಿಯಂತ್ರಣದ ಮಂತ್ರ ಪಠಿಸುತ್ತಿರುವಾಗಲೂ ಒಟ್ಟು ಕಾಲೇಜುಗಳಲ್ಲಿ ಶೇ.78 ಕಾಲೇಜುಗಳು ಖಾಸಗಿ ರಂಗದ ಕೈಯಲ್ಲಿರುವ ಕಾಲೇಜುಗಳು.

ಸರಕಾರ ಈ ಎಲ್ಲ ಕಾಲೇಜುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಏನು ಯೋಜನೆ ಹಾಕಿಕೊಂಡಿದೆ? ಎಚ್‌ಇಸಿಪಿಯ ಸುಧಾರಣೆಯಲ್ಲಿ ಇವರಿಗೆಲ್ಲ ಏನು ಸಿಗಲಿದೆ? ಖ್ಯಾತ ಮತ್ತು ಸ್ವಾಯತ್ತವಲ್ಲದ ಎಂಬ ಶ್ರೇಣೀಕರಣವನ್ನು ಸೃಷ್ಟಿಸುವ ಮೂಲಕ, ಈಗ ಅಸ್ತಿತ್ವದಲ್ಲಿರುವ ನಮ್ಮ ಎಲ್ಲ ಕಾಲೇಜುಗಳಿಗೆ ಮತ್ತು ವಿಶ್ವವಿದ್ಯಾನಿಲಯಗಳಿಗೆ ದ್ವಿತೀಯ ದರ್ಜೆಯ ವಿಶ್ವವಿದ್ಯಾನಿಲಯಗಳು ಎಂಬ ಹಣೆಪಟ್ಟಿಯನ್ನು ಕಟ್ಟಲು ಹೊರಟಿವೆ. ಒಟ್ಟಿನಲ್ಲಿ ಸುಧಾರಣೆಯೆಂದರೆ, ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸದಂತೆ ನೋಡಿಕೊಳ್ಳುವುದು. ನಿರಂಕುಶಮತಿಗಳಾಗದೆ, ಸರಕಾರ ಮತ್ತು ವ್ಯವಸ್ಥೆಗೆ ಪೂರಕವಾಗಿರುವ ಮನಸ್ಥಿತಿಯನ್ನು ಸೃಷ್ಟಿಸುವುದು ಎಂದು ಸರಕಾರ ತಿಳಿದುಕೊಂಡಿದೆ. ‘‘ಎಲ್ಲಿ ಮನಕಳುಕಿರದೋ...ಎಲ್ಲಿ ತಲೆ ಬಾಗಿರದೋ.ಎಲ್ಲಿ ತಿಳಿವಿಗೆ ತೊಡಕು ಬಾರದಿಹುದೋ ಅಲ್ಲಿ....’’ ಎಂಬ ಸಾಲುಗಳಿಗೆ ತದ್ವಿರುದ್ಧವಾಗಿ, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಮನಕೆ ಅಳುಕನ್ನು, ತಿಳಿವಿಗೆ ತೊಡಕನ್ನು ಉಂಟು ಮಾಡುವ ಮೂಲಕ ಅವುಗಳನ್ನು ನಿಯಂತ್ರಿಸುವ ಹೊಸ ತಂತ್ರವನ್ನು ಅನುಷ್ಠಾನಕ್ಕೆ ತರಲು ಹೊರಟಿದೆ. ಇದು ವಿಶ್ವವಿದ್ಯಾನಿಲಯಗಳ ಆತ್ಮದ ಮೇಲೆ ಸರಕಾರ ನಡೆಸುತ್ತಿರುವ ಬರ್ಬರ ದಾಳಿಯಾಗಿದೆ. ನಳಂದಾ ವಿಶ್ವವಿದ್ಯಾನಿಲಯದ ಮೇಲೆ ಅಂದು ನಡೆದ ದಾಳಿಗಿಂತಲೂ ಕ್ರೂರವಾದುದು ಇದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News