ಮಂಡ್ಯ: ರೈತ ಹುತಾತ್ಮ ದಿನದ ಅಂಗವಾಗಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2018-07-21 17:49 GMT

ಮಂಡ್ಯ, ಜು.21: ರೈತರ ಎಲ್ಲಾ ಕೃಷಿ ಸಾಲ ಸಂಪೂರ್ಣ ಮನ್ನಾ, ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು 38ನೆ ರೈತ ಹುತಾತ್ಮರ ದಿನವಾದ ಶನಿವಾರ ನಗರದಲ್ಲಿ ಧರಣಿ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, 38 ವರ್ಷದ ಹಿಂದೆ ರೈತ ಚಳವಳಿ ಹತ್ತಿಕ್ಕಲು ಅಂದಿನ ಸರಕಾರ ರೈತರ ಮೇಲೆ ಗುಂಡು ಹಾರಿಸಿತು. ಇದರಿಂದ ರಾಜ್ಯದ ವಿವಿಧೆಡೆ 143 ರೈತರು ಹುತಾತ್ಮರಾದರು. ಅಂದಿನಿಂದ ಹೋರಾಟ ಮುಂದುವರಿಸಿಕೊಂಡು ಬಂದಿದ್ದರೂ ಸರಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ವಿರೋಧಿ ಧೋರಣೆಗಳಿಂದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಯಾಗಿಲ್ಲ. ಜಾಗತೀಕರಣ ನಂತರ ವಿಶ್ವಬ್ಯಾಂಕ್ ಸೂಚನೆ ಮೇರೆಗೆ ರೈತರಿಗೆ ನೀಡುತ್ತಿದ್ದ ಸಹಾಯ  ಧನ ಕೈಬಿಡಲಾಗುತ್ತಿದೆ. ಇದರಿಂದಾಗಿ ರೈತರು ಪಡೆದ ಸಾಲ ತೀರಿಸಲು ಆಗುತ್ತಿಲ್ಲ ಎಂದು ಅವರು ಹೇಳಿದರು.

ಸರಕಾರಗಳ ರೈತವಿರೋಧಿ ನೀತಿಯಿಂದ ಕಳೆದ 21 ವರ್ಷದಲ್ಲಿ ದೇಶದಲ್ಲಿ ಸುಮಾರು 3.75 ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರಕಾರಗಳು ರೈತ ವಿರೋಧಿ ಧೋರಣೆ ಕೈಬಿಟ್ಟು ರೈತರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಯಾಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷರಾದ ಎಸ್.ವಿಶ್ವನಾಥ್, ಕೆ.ನಾಗೇಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ, ಕೆ.ರಾಮಲಿಂಗೇಗೌಡ, ಸೋ.ಸಿ.ಪ್ರಕಾಶ್ ಸೊಳ್ಳೇಪುರ, ಉಮೇಶ್,  ಗದ್ದೆನಿಂಗೇಗೌಡ ಕುಂಟನಹಳ್ಳಿ, ಎಳೇಗೌಡ, ಗೊರವನಹಳ್ಳಿ ಅಂಕಪ್ಪ, ಡಿ.ಎಸ್.ಚಂದ್ರಶಖರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಇತರ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.

ಬೇಡಿಕೆಗಳು:
ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳ ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕ್ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.
ಕೆ.ಜಿ.ರೇಷ್ಮೆ ಗೂಡಿಗೆ 500 ರೂ., ಲೀಟರ್ ಹಾಲಿಗೆ 30 ರೂ., ಟನ್ ಕಬ್ಬಿಗೆ 3,500 ರೂ. ನಿಗದಿಪಡಿಸಿ ಕಾರ್ಖಾನೆ ಆರಂಭಿಸಬೇಕು. ಹಳೇ ಬಾಕಿ ಪಾವತಿಗೆ ಕ್ರಮವಹಿಸಬೇಕು.
ಎಸ್.ಐ.ಹೊನಗಳಿ ವ್ಮಠ ಇತರೆಡೆಯ ಇನಾಂ ಗ್ರಾಮಗಳ ರೈತರಿಗೆ ಗಣಕೀಕೃತ ಆರ್‍ಟಿಸಿ ಕೊಡಿಸಬೇಕು. ಮೈಷುಗರ್, ಕಾರ್ಖಾನೆ ಉಳಿಸಬೇಕು. ರಾಜ್ಯದ 28 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಕ್ರಮ ಕೈಬಿಟ್ಟು, ಗ್ರಾಮೀಣ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News