ವಿಶ್ವಕಪ್: ಭಾರತ-ಇಂಗ್ಲೆಂಡ್ ಮಹಿಳಾ ಹಾಕಿ ಪಂದ್ಯ ಡ್ರಾ

Update: 2018-07-21 19:06 GMT

ಲಂಡನ್, ಜು.21: ಮಹಿಳಾ ಹಾಕಿ ವಿಶ್ವಕಪ್‌ನ ಮೊದಲ ದಿನವಾದ ಶನಿವಾರ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ‘ಬಿ’ ಗುಂಪಿನ ಪಂದ್ಯ 1-1 ರಿಂದ ಡ್ರಾನಲ್ಲಿ ಕೊನೆಗೊಂಡಿದೆ. ಇಲ್ಲಿನ ಲೀ ವ್ಯಾಲಿ ಹಾಕಿ ಹಾಗೂ ಟೆನಿಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 25ನೇ ನಿಮಿಷದಲ್ಲಿ ಗೋಲು ಬಾರಿಸಿದ ನೇಹಾ ಗೋಯಲ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, 54ನೇ ನಿಮಿಷದಲ್ಲಿ ಗೋಲು ಹೊಡೆದ ಲಿಲಿ ಒಸ್ಲೆ ಆತಿಥೇಯರು 1-1 ರಿಂದ ಸಮಬಲ ಸಾಧಿಸಲು ನೆರವಾದರು. ವಿಶ್ವದ ನಂ.2ನೇ ತಂಡ ಇಂಗ್ಲೆಂಡ್ ಕಿಕ್ಕಿರಿದ ತವರು ಪ್ರೇಕ್ಷಕರ ಸಮ್ಮುಖದಲ್ಲಿ ಪಂದ್ಯ ಆರಂಭವಾದ ತಕ್ಷಣ ಪೆನಾಲ್ಟಿ ಅವಕಾಶ ಪಡೆಯಿತು. ಭಾರತದ ಗೋಲ್‌ಕೀಪರ್ ಸವಿತಾ ಇಂಗ್ಲೆಂಡ್‌ಗೆ ಪಂದ್ಯದ ಆರಂಭದಲ್ಲೇ ಮುನ್ನಡೆ ನಿರಾಕರಿಸಿದರು. ವಿಶ್ವದ ನಂ.10ನೇ ತಂಡ ಭಾರತ ಮೊದಲ ಕ್ವಾರ್ಟರ್‌ನ ಕೊನೆಯಲ್ಲಿ ಒತ್ತಡ ಹೇರಲು ಯತ್ನಿಸಿತು. 2ನೇ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್ ದಾಳಿ ಮುಂದುವರಿಸಿತು. ಗೋಲ್‌ಕೀಪರ್ ಸವಿತಾ ಹಾಗೂ ಡಿಫೆಂಡರ್‌ಗಳು ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಭಾರತಕ್ಕೆ 52ನೇ ನಿಮಿಷದಲ್ಲಿ ಮುನ್ನಡೆ ಸಾಧಿಸುವ ಅವಕಾಶ ಲಭಿಸಿತ್ತು. ಆದರೆ, ಲಾಲ್‌ರೆಂಸಿಯಾಮಿ ಚೆಂಡನ್ನು ಗೋಲು ಬಲೆಗೆ ಬೀಳಿಸಲು ವಿಫಲರಾದರು. ಉಭಯ ತಂಡಗಳು ಕೊನೆಯ ಕ್ಷಣದ ತನಕ ಗೋಲು ಬಾರಿಸಲು ಯತ್ನಿಸಿದವು. ಆದರೆ, ಎರಡೂ ತಂಡಗಳ ಡಿಫೆಂಡರ್‌ಗಳು ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಡ್ರಾಗೊಳಿಸಿದರು.

ಭಾರತ ಜು.26ಕ್ಕೆ ನಡೆಯಲಿರುವ ತನ್ನ 2ನೇ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News