ಆರ್ಚರಿ ವಿಶ್ವಕಪ್: ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

Update: 2018-07-21 19:10 GMT

ಬರ್ಲಿನ್, ಜು.21: ಆರ್ಚರಿ ವಿಶ್ವಕಪ್‌ನಲ್ಲಿ ತ್ರಿಶಾ ದೇಬ್, ಜ್ಯೋತಿ ಸುರೇಖಾ ಹಾಗೂ ಮುಸ್ಕಾನ್ ಕಿರಾರ್ ಅವರನ್ನೊಳಗೊಂಡ ಭಾರತದ ಮಹಿಳಾ ಆರ್ಚರಿ ತಂಡ ಫ್ರಾನ್ಸ್ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ 229-228 ಅಂತರದಿಂದ ವೀರೋಚಿತ ಸೋಲುಂಡಿದೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ವಿಶ್ವಕಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ಸ್ಪರ್ಧೆಗಿಳಿದ ಜ್ಯೋತಿ, ಮುಸ್ಕಾನ್ ಹಾಗೂ ತ್ರಿಶಾ ಆರಂಭದಲ್ಲಿ 59-57 ಮುನ್ನಡೆ ಪಡೆದಿದ್ದರು. ಆದರೆ, ಮೂರನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಭಾರತ 4ನೇ ಸುತ್ತಿನ ಅಂತ್ಯದಲ್ಲಿ ತಿರುಗೇಟು ನೀಡಲು ಯತ್ನಿಸಿತು. ಅಂತಿಮವಾಗಿ ಫ್ರಾನ್ಸ್ ತಂಡ ಕೇವಲ 1 ಅಂಕದಿಂದ ಜಯ ಸಾಧಿಸಿ ಚಿನ್ನ ತನ್ನದಾಗಿಸಿಕೊಂಡಿತು. ಜ್ಯೋತಿ, ಮುಸ್ಕಾನ್ ಹಾಗೂ ತ್ರಿಶಾ ಗುರುವಾರ ನಡೆದ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಟರ್ಕಿ ತಂಡವನ್ನು 231-228 ಅಂತರದಿಂದ ಮಣಿಸುವುದರೊಂದಿಗೆ ಫೈನಲ್‌ಗೆ ತಲುಪಿದ್ದರು. 5ನೇ ಶ್ರೇಯಾಂಕದ ಭಾರತ ಮೊದಲ ಸುತ್ತಿನಲ್ಲಿ ಬ್ರಿಟನ್ ವಿರುದ್ಧ ಜಯ ಸಾಧಿಸಿ ತನ್ನ ಅಭಿಯಾನ ಆರಂಭಿಸಿತು. ಎರಡನೇ ಸುತ್ತಿನಲ್ಲಿ ಅಮೆರಿಕದ ವಿರುದ್ಧ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News