ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ನಿಧನ

Update: 2018-07-22 11:43 GMT

ವಿಜಯಪುರ, ಜು. 22: ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ (69) ಅವರು ರವಿವಾರ ನಸುಕಿನಲ್ಲಿ ನಿಧನರಾಗಿದ್ದಾರೆ.

ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ವಿಮಲಾಬಾಯಿ ಅವರು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಸೋಮವಾರ ಮುದ್ದೆಬಿಹಾಳ ತಾಲೂಕಿನ ನಾಲತವಾಡದಲ್ಲಿನ ದೇಶಮುಖ್ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಪತಿಯ ನಿಧನದ ನಂತರ 1994ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಗ ಸಚಿವರಾಗಿದ್ದ ಸಿ.ಎಸ್.ನಾಡಗೌಡರನ್ನು ಸೋಲಿಸಿದ್ದರು. ಅನಂತರ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರು.

‘ಉಳುವವನೇ ಭೂ ಒಡೆಯ’ ಕಾಯ್ದೆ ಜಾರಿಯಾದಾಗ ಇವರ ಕುಟುಂಬ ಸಾವಿರಾರು ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ದೇಶಮುಖ್ ಮನೆತನ ಜಿಲ್ಲೆಯಲ್ಲೇ ದೊಡ್ಡ ಕುಟುಂಬ. ವಿಮಲಾಬಾಯಿ ಅವರ ಪತಿ ಜೆ.ಎಸ್.ದೇಶಮುಖ್ ಅವರು, ಮೂರು ಬಾರಿ ಮುದ್ದೇಬಿಹಾಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಗೊತ್ತಾಗಿದೆ.

ವಿಮಲಾಬಾಯಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ.ಜಯಮಾಲಾ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿಎಂ ಸಂತಾಪ: ಮಾಜಿ ಸಚಿವೆ ಹಾಗೂ ಮಹಿಳಾ ಸಬಲೀಕರಣದ ಸಂಕೇತವೂ ಆಗಿದ್ದ ವಿಮಲಾಬಾಯಿ ದೇಶಮುಖ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ವಿಮಲಾಬಾಯಿ ದೇಶಮುಖ್ ಅವರ ನಾಯಕತ್ವದ ಗುಣ ಹಾಗೂ ಮಹಿಳಾ ಏಳಿಗೆಯ ಕಾಳಜಿ ಎಲ್ಲರಿಗೂ ಮಾರ್ಗದರ್ಶಿಯಾಗಿರಲಿ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಈ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News