ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಮೃತದೇಹ

Update: 2018-07-22 17:40 GMT

ಕೆ.ಆರ್.ನಗರ,ಜು.22: ತಾಲೂಕಿನ ಅರ್ಜುನಹಳ್ಳಿ ಗ್ರಾಮದ ಸಮೀಪದ ಜಮೀನೊಂದರಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಅಂದಾಜು 30 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಮೃತರ ಕೈ ಮೇಲೆ ಕನ್ನಡ ಭಾಷೆಯಲ್ಲಿ ರಮೇಶ್ ಭಾಗ್ಯ ಎಂದು ಹಚ್ಚೆಯ ಗುರುತು ಕಂಡು ಬಂದಿದ್ದು, ದುಷ್ಕರ್ಮಿಗಳು ಕೊಲೆಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಎಂದಿನಂತೆ ಅರ್ಜುನಹಳ್ಳಿ ಗ್ರಾಮದ ರೈತರು ತಮ್ಮ ಜಮೀನಿಗೆ ತೆರಳುವ ಸಂದರ್ಭದಲ್ಲಿ ಪಕ್ಕದ ಜಮೀನಿನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮಸಿ ಸ್ಥಳಕ್ಕೆ ತೆರಳಿ ನೋಡಿದಾಗ ಅರೆಬೆಂದ ಸ್ಥಿತಿಯಲ್ಲಿ ಸುಮಾರು 30 ವರ್ಷದ ಮಹಿಳೆಯ ಮೃತದೇಹ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸುತ್ತಮುತ್ತಲ ಜಮೀನಿನ ರೈತರೆಲ್ಲರೂ ಸ್ಥಳಕ್ಕಾಗಮಿಸಿ, ತಕ್ಷಣ ಕೆ.ಆರ್.ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಕೆ.ಆರ್.ನಗರ ಪೊಲೀಸ್ ಠಾಣೆಯ ಪಿಎಸ್ಸೈ ಶಿವಪ್ರಕಾಶ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿ, ಸ್ಥಳ ಮಹಜರು ಮಾಡಿ, ಮಹಿಳೆಯ ಮೃತ ದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೃತ ಮಹಿಳೆಯ ಕತ್ತು ಕೊಯ್ದಿರುವ ಸ್ಥಿತಿಯಲ್ಲಿರುವುದರಿಂದ ಮತ್ತು ರಕ್ತದ ಗುರುತು ಪತ್ತೆಯಾಗಿರುವುದರಿಂದ ಕೊಲೆಮಾಡಿ ಅನುಮಾನ ಬರಬಾರದು ಎಂದು ಶವವನ್ನು ಸುಡಲು ದುಷ್ಕರ್ಮಿಗಳು ಯತ್ನಿಸಿರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದ್ದು. ಈ ಸಂಬಂಧ ಕೆ.ಆರ್.ನಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News