ಆಸ್ಪತ್ರೆಯಲ್ಲಿ ಬಾಲಕನ ಸಾವು: ಉದ್ರಿಕ್ತ ಗುಂಪಿನ ದಾಂಧಲೆ ; ಇಬ್ಬರು ಪೊಲೀಸರ ಸಹಿತ ಐದು ಮಂದಿಗೆ ಗಾಯ

Update: 2018-07-22 17:53 GMT

ಮುಂಬೈ, ಜು.22: ಮಹಾನಗರಪಾಲಿಕೆಯ ಅಧೀನದ ಸಿಯೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17ರ ಹರೆಯದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಗುಂಪೊಂದು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿತಲ್ಲದೆ ಪೊಲೀಸರ ಮೇಲೆ ಕಲ್ಲೆಸೆದ ಕಾರಣ ಇಬ್ಬರು ಕಾನ್‌ಸ್ಟೇಬಲ್‌ಗಳ ಸಹಿತ ಐದು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

ಧಾರಾವಿ ಪ್ರದೇಶದ ನಿವಾಸಿಯಾಗಿದ್ದ ಸಚಿನ್ ಜೈಸ್ವರ್ ಎಂಬ ಬಾಲಕನನ್ನು ಕ್ರಿಮಿನಲ್ ಪ್ರಕರಣವೊಂದರ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಮನೆಗೆ ತೆರಳಿದ್ದ ಈತ ಏಕಾಏಕಿ ಅಸ್ವಸ್ಥನಾಗಿದ್ದು ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬಾಲಕ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಸಾವಿಗೆ ಕಸ್ಟಡಿಯಲ್ಲಿ ನೀಡಿರುವ ಚಿತ್ರಹಿಂಸೆ ಹಾಗೂ ಬಳಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ ಕಾರಣ ಎಂದು ಆರೋಪಿಸಿದ ಸುಮಾರು 100 ಜನರಿದ್ದ ಗುಂಪು ಆಸ್ಪತ್ರೆ ಎದುರು ಗುಂಪುಗೂಡಿ ದಾಂಧಲೆ ನಡೆಸಿ ಪೊಲೀಸರ ವಾಹನದತ್ತ ಕಲ್ಲೆಸೆದಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸರು, ಮಹಾರಾಷ್ಟ್ರ ರಾಜ್ಯ ಭದ್ರತಾ ಸಂಸ್ಥೆ(ಎಂಎಸ್‌ಎಸ್‌ಸಿ)ಯ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News