ಮಡಿಕೇರಿ: ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಪ್ರಶಸ್ತಿ ವಿತರಣೆ

Update: 2018-07-22 18:35 GMT

ಮಡಿಕೇರಿ, ಜು.22: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ 2017ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಪತ್ರಕರ್ತರು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಇಲ್ಲಿನ ಪತ್ರಕರ್ತರು ಮೂಡಿಸಿದ್ದಾರೆ. ವಾಸ್ತವತೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.

ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಕೊಡಗಿನ ಪತ್ರಕರ್ತರು ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಕೊಂಡಿದ್ದರೂ ಕೂಡ ತಮ್ಮ ವೃತ್ತಿಯೊಂದಿಗೆ ಅದನ್ನು ಬೆರೆಸಿಕೊಂಡಿಲ್ಲ. ರಾಜಕೀಯೇತರವಾಗಿ ವರದಿ ಮಾಡುವ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಾಹಿತಿ ಆನಂದತೀರ್ಥ ಕೆ. ಭಾರಧ್ವಾಜ್ ಮಾತನಾಡಿ ಕೊಡಗಿನಲ್ಲಿ ರಾಜಕೀಯ ಹೊರತಾಗಿಯೂ ವರದಿ ಮಾಡಲು ಹಲವು ವಿಷಯಗಳಿವೆ. ಪತ್ರಕರ್ತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು. ಕೊಡಗಿನ ಪತ್ರಕರ್ತರು ಸಾಕಷ್ಟು ಹೆಸರು ಗಳಿಸಿದ್ದು, ಈ ವಿಶ್ವಾಸರ್ಹತೆನ್ನು ಉಳಿಸಿಕೊಳ್ಳಬೇಕೆಂದರು. 

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಪತ್ರಕರ್ತರಿಗೆ ಪೂರಕವಾದಂತಹ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಇದೇ ಕಾರ್ಯಕ್ರಮ ಮುಂದುವರೆಸಿ ಸಂಘಕ್ಕೆ ಸೇವೆ ಸಲ್ಲಿಸಬೇಕೆಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಖಜಾಂಚಿ ಸವಿತಾ ರೈ, ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಪಾರ್ಥಚಿಣ್ಣಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕವನ್ ಕಾರ್ಯಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ದತ್ತಾದ್ರಿ ಮತ್ತಿತರರು ಹಾಜರಿದ್ದರು.

ಪ್ರಶಸ್ತಿ ವಿತರಣೆ: ರಾಜಕೀಯ, ಹುಲಿ ಸಂರಕ್ಷಣೆ, ಶೈಕ್ಷಣಿಕ ವರದಿಗೆ ಎಚ್.ಟಿ. ಅನಿಲ್, ತೋಟಗಾರಿಕಾ ವರದಿಗೆ ವಿಘ್ನೇಶ್ ಎಂ. ಭೂತನಕಾಡು, ಗ್ರಾಮೀಣ ವರದಿ ವಿಜಯ ಹಾನಗಲ್, ಅತ್ಯುತ್ತಮ ಕ್ರೀಡಾ ವರದಿ ಕಾಯಪಂಡ ಶಶಿ ಸೋಮಯ್ಯ, ಅತ್ಯತ್ತಮ ತನಿಖಾ ವರದಿ ಎಂ.ಎನ್. ನಾಸೀರ್, ಮಾನವೀಯ ವರದಿಗೆ ರಾಕೇಶ್ ಕೊಡಗು, ಅರಣ್ಯ ವನ್ಯಜೀವಿ ವರದಿ ಪ್ರಶಸ್ತಿಗೆ ಪುತ್ತರಿರ ಕರುಣ್ ಕಾಳಯ್ಯ, ಆರೋಗ್ಯ ವರದಿ ಪ್ರಶಸ್ತಿಗೆ ಟಿ.ಜೆ. ಕಿಶೋರ್‍ಕುಮಾರ್ ಶೆಟ್ಟಿ, ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಗೆ ಸುನಿಲ್ ಪೊನ್ನೇಟಿ, ಕೃಷಿ ವರದಿಗೆ ಹಿರಿಕರ ರವಿ, ಹೈನುಗಾರಿಕೆ ವರದಿ ಪ್ರಶಸ್ತಿಗೆ ಸಣ್ಣುವಂಡ ಕಿಶೋರ್ ನಾಚಪ್ಪ, ಸುದ್ದಿ ಛಾಯಾಚಿತ್ರ ಪ್ರಶಸ್ತಿಗೆ ಸುನಿಲ್ ಪೊನ್ನೇಟಿ, ಅರಣ್ಯ ವನ್ಯಜೀವಿ ದೃಶ್ಯ ಮಾಧ್ಯಮ ವರದಿಗೆ ಆಯ್ಕೆಯಾದ ಬಾಚರಣಿಯಂಡ ಅನು ಕಾರ್ಯಪ್ಪ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News