ಆಧುನಿಕ ತಂತ್ರಜ್ಞಾನಗಳ ಭರಾಟೆಯಿಂದ ಜಾನಪದಕ್ಕೆ ಕುತ್ತು: ಶಾಸಕ ಕುಮಾರಸ್ವಾಮಿ

Update: 2018-07-22 18:46 GMT

ಚಿಕ್ಕಮಗಳೂರು, ಜು.22 ಆಧುನಿಕತೆಯ ಭರದಲ್ಲಿ ಮೂಲೆ ಗುಂಪಾಗುತ್ತಿರುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ವಿದ್ಯಾವಂತರು ಮುಂದಾಗಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಲಹೆ ಮಾಡಿದರು.

ಸ್ವರ ಮಾಧುರ್ಯ ಸುಗಮ ಸಂಗೀತ ಸಂಘ ತಾಲೂಕಿನ ಕೂದುವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಜಾನಪದ ಮತ್ತು ಸುಗಮ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಪೂರ್ವಿಕರ ಕಾಲ ಜಾನಪದರ ಕಾಲವಾಗಿತ್ತು, ಆ ಕಾಲದಲ್ಲಿ ನ್ಯಾಯ ನೀತಿ, ಧರ್ಮವಿತ್ತು, ಸುಳ್ಳು, ಮೋಸ, ಕಪಟವಿರಲಿಲ್ಲ, ನಮ್ಮ ಹಿರಿಯರು ಗ್ರಾಮೀಣ ಜನರು ಅಂದು ಶ್ರಮದ ಬದುಕಿನ ನಡುವೆ ಪದಗಳನ್ನು ಕಟ್ಟಿ ಹಾಡುತ್ತಿದ್ದರು. ಇಂದು ಅವರೂ ಇಲ್ಲ ಅವರ ಸಂಸ್ಕೃತಿಯೂ ಇಲ್ಲದಂತಾಗಿದೆ, ಆಧುನಿಕತೆಯಿಂದಾಗಿ ನಾವಿಂದು ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ಸಂಗೀತಕ್ಕೆ ಮತ್ತು ಜಾನಪದ ಕಲೆಗೆ ಎಲ್ಲರನ್ನೂ ಮತ್ತು ಎಲ್ಲವನ್ನೂ ಒಗ್ಗೂಡಿಸುವ ಅಗಾಧವಾದ ಶಕ್ತಿಯಿದೆ. ವಿದ್ಯಾವಂತ ಸಮೂಹ ಇದನ್ನು ಅರಿಯಬೇಕು. ಈಗಲಾದರೂ ಎಚ್ಚೆತ್ತು ಕಾಲದ ಹೊಡತಕ್ಕೆ ಸಿಕ್ಕಿ ಮರೆಯಾಗುತ್ತಿರುವ ಅವುಗಳನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಇಂದಿನ ಯುವ ಜನತೆ ಜಾನಪದದ ಮೇಲಿರುವ ಅನಾಧರ, ಅಸಡ್ಡೆ ಮತ್ತು ಕೀಳರಿಮೆಯನ್ನು ಬಿಡಬೇಕು ಜಾನಪದ ಮನರಂಜನೆಯ ಜೊತೆಗೆ ಜ್ಞಾನವನ್ನೂ ನೀಡುತ್ತದೆ ಎಂಬುದನ್ನು ಅರಿಯಬೇಕು, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವರ ಮಾಧುರ್ಯ ಸುಗಮ ಸಂಗೀತ ಸಂಘದ ಅಧ್ಯಕ್ಷ ಜಿ.ಬಿ.ಸುರೇಶ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಆಶಯ ನುಡಿಗಳನ್ನಾಡಿದರು, ಐಡಿಎಸ್‍ಜಿ ಕಾಲೇಜಿನ ಪ್ರಾಧ್ಯಾಪಕ ಡಾ.ಹೆಚ್.ಎಂ.ಮಹೇಶ್ ಜಾನಪದ ಕಲೆಗಳ ಉಳಿವಿಗೆ ಸಂಘಟನೆಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.

ಗ್ರಾಮದ ಜಾನಪದ ಗಾಯಕಿ ಚಂದ್ರಮ್ಮ ಮತ್ತು ದಿಣ್ಣೇಕೆರೆಯ ಹರಿಕಥೆ ವಿದ್ವಾಂಸ ವೇಣುಗೋಪಾಲ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಕಾರ್ಯಕ್ರಮದ ನಡುವೆ ನಡೆದ ಜಾನಪದ ಮತ್ತು ಸುಗಮ ಸಂಗೀತ ಗಾಯನ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ತಾ.ಪಂ.ಸದಸ್ಯ ಡಿ.ಜೆ.ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎಸ್.ಕವೀಶ್, ಕೂದುವಳ್ಳಿ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ವಸ್ತಾರೆ ಗ್ರಾ.ಪಂ. ಅಧ್ಯಕ್ಷ ವಿ.ಪಿ.ರವಿ, ಸಿ.ಡಿ.ಭವಾನಿ ಶಂಕರ್,ಅರವಿಂದ್ ಉಪಸ್ಥಿತರಿದ್ದರು.
ವಾಸಂತಿ ಪದ್ಮನಾಭ್ ಕಾರ್ಯಕ್ರಮವನ್ನು ನಿರೂಪಿಸಿದರು, ಆರ್.ವಿನೀತ್ ಸ್ವಾಗತಿಸಿದರು, ಉಪನ್ಯಾಸಕ ವಿರೂಪಾಕ್ಷ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News