ರಾಮಾಯಣ ಓದಿದ ಸಿಪಿಎಂ ನಾಯಕಿ

Update: 2018-07-23 07:56 GMT

ತಿರುವನಂತಪುರ, ಜು. 23: ಕೇರಳದಲ್ಲಿ ಆಡಳಿತಾರೂಢ ಎಡಪಂಥೀಯ ಪಕ್ಷಗಳು ಹಿಂದೂ ಪುರಾಣ ಗ್ರಂಥ ರಾಮಾಯಣದ ಬಗ್ಗೆ ಸರಣಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ನಿರ್ಧರಿಸಿರುವ ಬಗ್ಗೆ ಎದ್ದಿರುವ ವಿವಾದದ ನಡುವೆಯೇ, ಸಿಪಿಎಂನ ಶಾಸಕಿಯೊಬ್ಬರ ರಾಮಾಯಣ ಪ್ರೇಮ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯ ವಿಧಾನಸಭೆಯಲ್ಲಿ ಕಯಮ್‌ಕುಲಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಯು. ಪ್ರತಿಭಾ ಹರಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಶಾಸಕಿ ರಾಮಾಯಣ ಮಾಸದ ಅಂಗವಾಗಿ ರಾಮಾಯಣ ಓದುತ್ತಿರುವ ದೃಶ್ಯದ ತುಣುಕುಗಳಿವೆ. ಸಾಂಪ್ರದಾಯಿಕ ಕೇರಳ ಸೀರೆ ಉಟ್ಟುಕೊಂಡು ನೆಲದಲ್ಲಿ ಕುಳಿತು ರಾಮಾಯಣ ಪದ್ಯಗಳನ್ನು ಓದುತ್ತಿರುವ ಚಿತ್ರಣ ಇದೆ.

"ರಾಮಾಯಣ ಮಾಸ ಆರಂಭವಾಗಿದೆ. ಪ್ರತಿಯೊಂದು ನಂಬಿಕೆ ಮತ್ತು ರಾಮಾಯಣದ ಓದು ಮೌಲ್ಯಗಳನ್ನು ಪ್ರಚುರಪಡಿಸಲಿ ಎಂಬ ಶೀರ್ಷಿಕೆಯೊಂದಿಗೆ ಜುಲೈ 18ರಂದು ಶಾಸಕಿ ವೀಡಿಯೊ ಪೋಸ್ಟ್ ಮಾಡಿದ್ದರು. ಬಹಳಷ್ಟು ಮಂದಿ ಇದನ್ನು ಶೇರ್ ಮಾಡಿದ್ದಾರೆ.

ಜುಲೈ 17ರಂದು ಆರಂಭವಾಗಿರುವ ರಾಮಾಯಣ ಮಾಸದಲ್ಲಿ, ತುಂಚತ್ ರಾಮಾನುಜನ್ ಎಳುತಾಚನ್ ವಿರಚಿತ ಆಧ್ಯಾತ್ಮ ರಾಮಾಯಣದ ಚರಣಗಳನ್ನು ಸಾಂಪ್ರದಾಯಿಕ ದೀಪಗಳ ಮುಂದೆ ಓದಲಾಗುತ್ತದೆ. ಸಂಸ್ಕೃತಿ ಸಂಘ ಎಂಬ ಎಡಪಂಥೀಯ ಸಂಘಟನೆ ರಾಜ್ಯದಲ್ಲಿ ರಾಮಾಯಣ ಕುರಿತ ಸರಣಿ ವಿಚಾರ ಸಂಕಿರಣಗಳನ್ನು ಆಯೋಜಿಸಲು ನಿರ್ಧರಿಸಿರುವ ಬಗ್ಗೆ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಶಾಸಕಿಯ ರಾಮಾಯಣ ಪ್ರೇಮ ಕೂಡಾ ವಿಶೇಷ ಮಹತ್ವ ಪಡೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News