ಆತನ ಮಕ್ಕಳನ್ನೂ ಹೊಡೆದು ಕೊಂದುಬಿಡಿ: ಗೋರಕ್ಷಕರಿಂದ ಹತ್ಯೆಯಾದ ಅಕ್ಬರ್ ತಂದೆಯ ಅಳಲು

Update: 2018-07-23 09:07 GMT

ಹೊಸದಿಲ್ಲಿ, ಜು.23:  "ನಮ್ಮ ಕಿರಿಯ ಪುತ್ರನಿಗೆ 2 ವರ್ಷ ವಯಸ್ಸು. ಆತ 'ಅಬ್ಬ' (ಅಪ್ಪ) ಎಂದು ಸರಿಯಾಗಿ ಕಳೆದ ತಿಂಗಳಷ್ಟೇ ಉಚ್ಛರಿಸಿದ್ದ. ಅಕ್ಬರ್ ಗೆ ತುಂಬಾ ಖುಷಿಯಾಗಿತ್ತು. ಮುಂದಿನ ಈದ್ ಗೆ ಭಾರೀ 'ಈದಿ' ನೀಡುವ ಬಗ್ಗೆಯೂ ತಿಳಿಸಿದ್ದರು" ಎಂದು ಆಲ್ವಾರ್ ನಲ್ಲಿ ಗೋರಕ್ಷಕರಿಂದ ಹತ್ಯೆಯಾದ ಅಕ್ಬರ್ ಖಾನ್ ರ ಪತ್ನಿ ಅಶ್ಮೀನಾ ಹೇಳುತ್ತಾರೆ.

ಅಕ್ಬರ್ ಹಾಲು ಮಾರಿ ಕುಟುಂಬವನ್ನು ಸಲಹುತ್ತಿದ್ದರು. ಇದಕ್ಕಾಗಿ ಹಸುವೊಂದನ್ನು ಖರೀದಿಸಲು ಆಲ್ವಾರ್ ಗೆ ತೆರಳಿದ್ದರು. ತಾನು ಕೂಡಿಟ್ಟಿದ್ದ ಎಲ್ಲಾ ಹಣದಿಂದ 2 ಹಸುಗಳನ್ನು ಖರೀದಿಸಿದ್ದ ಅಕ್ಬರ್ ಟೆಂಪೋಗೆ ಹಣವಿಲ್ಲದೆ ಇದ್ದುದರಿಂದ ಕಾಲ್ನಡಿಗೆಯಲ್ಲೇ ಹಿಂದಿರುಗಬೇಕಾಯಿತು. ಮನೆಗೆ 10 ಕಿ.ಮೀ. ದೂರದಲ್ಲಿರುವಾಗ ಗೋರಕ್ಷಕರು ಅಕ್ಬರ್ ಮೇಲೆ ದಾಳಿ ನಡೆಸಿದ್ದರು ಎಂದು ವಿವರಿಸುತ್ತಾ ಗದ್ಗದಿತರಾಗುತ್ತಾರೆ ಅಕ್ಬರ್ ರ ತಂದೆ ಸುಲೈಮಾನ್. "ನೀವು ಅಕ್ಬರ್ ನ ಏಳು ಮಕ್ಕಳನ್ನೂ ಕೊಂದುಬಿಡಿ. ಹಸಿವೆಯಿಂದ ಅವರೂ ಕೂಡ ಸಾಯುತ್ತಾರೆ" ಎಂದವರು ಹೇಳುತ್ತಾರೆ.

"ನನ್ನ ಪುತ್ರ ಅಕ್ಬರ್ ಖಾನ್ ಹಾಲು ಮಾರುತ್ತಿದ್ದನೇ ಹೊರತು ಗೋಕಳ್ಳನಲ್ಲ. ತುಂಬಾ ಪ್ರೀತಿಯಿಂದ ಎರಡು ಹಸುಗಳನ್ನು ಸಾಕಿದ್ದ ಆತ ಅವುಗಳಿಗಾಗಿ ಮೇವು ಖರೀದಿಸಲು ತಾನು ಹಸಿವೆಯಿಂದ ದಿನ ಕಳೆದಿದ್ದ" ಎಂದವರು ವಿವರಿಸುತ್ತಾರೆ.

"ಹಸುಗಳನ್ನು ಖರೀದಿಸಿ ಮನೆಗೆ ಹಿಂದಿರುಗುವ ಮೊದಲು ಅವರು ಕರೆ ಮಾಡಿದ್ದರು. ಈಗ ನಮ್ಮ ಬಳಿ ನಾಲ್ಕು ಹಸುಗಳಿವೆ. ಮುಂದೆ ನಮಗೆ ಒಳ್ಳೆಯದಾಗಲಿದೆ. ಹಾಲು ಮಾರಿ ಬರುವ ಹಣದಿಂದ ನನಗೆ ಕಿವಿಯೋಲೆಗಳನ್ನು ಖರೀದಿಸುವುದಾಗಿ ಅವರು ಹೇಳಿದ್ದರು. ಆದರೆ ಇಂದು ಅವರನ್ನು ದಫನ ಮಾಡುವುದಕ್ಕಾಗಿ ನನ್ನಲ್ಲಿದ್ದ ಕಿವಿಯೋಲೆಗಳನ್ನು ಮಾರಬೇಕಾಗಿತ್ತು ಎಂದು ಯಾರಿಗೆ ತಿಳಿದಿತ್ತು?, ಅವರು ಎರಡು ಹಸುಗಳನ್ನು ಕಾಪಾಡಲು ನನ್ನ ಪತಿಯನ್ನು ಕೊಂದರು, ಆದರೆ ಏಳು ಮಕ್ಕಳನ್ನು ಅನಾಥರನ್ನಾಗಿಸಿದರು" ಎಂದು ಹೇಳುತ್ತಾರೆ ಅಕ್ಬರ್ ಪತ್ನಿ ಅಶ್ಮೀನಾ.

ಗೋಕಳ್ಳತನ ಶಂಕೆಯಲ್ಲಿ ಆಲ್ವಾರ್ ನಲ್ಲಿ ಅಕ್ಬರ್ ಖಾನ್ ಎಂಬವರನ್ನು ಗೋರಕ್ಷಕರು ಥಳಿಸಿ ಕೊಂದಿದ್ದರು. ಈ ಕೊಲೆಯಲ್ಲಿ ಪೊಲೀಸರ ಪಾತ್ರವೂ ಇದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಥಳಿತದ ಮಾಹಿತಿ ಲಭಿಸಿದ ನಂತರ ಪೊಲೀಸರು 1:15ರ ಸುಮಾರಿಗೆ ಸ್ಥಳಕ್ಕೆ ತಲುಪಿದ್ದರೂ ಅಕ್ಬರ್ ರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಾಗ 4 ಗಂಟೆಯಾಗಿತ್ತು. ಈ ನಡುವೆ ಪೊಲೀಸರು ಗೋವುಗಳನ್ನು ಗೋಶಾಲೆಗೆ ಸಾಗಿಸಿದ್ದರು. ಚಹಾ ಕುಡಿಯಲು ತಮ್ಮ ವಾಹನವನ್ನು ನಿಲ್ಲಿಸಿದ್ದರು ಹಾಗು ವಾಹನದೊಳಗಿದ್ದ ಅಕ್ಬರ್ ಗೆ ಥಳಿಸಿದ್ದರು ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಗುಂಪುಹತ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಈ ಬಗ್ಗೆ ಕಾನೂನಿನ ಅಗತ್ಯವನ್ನು ಪ್ರಸ್ತಾಪಿಸಿದ ಕೆಲದಿನಗಳಲ್ಲೇ ಈ ಪೈಶಾಚಿಕ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News