ಮಡಿಕೇರಿ: ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಮೃತ್ಯು; ಕುಟುಂಬಸ್ಥರ ಆರೋಪ

Update: 2018-07-23 11:36 GMT

ಮಡಿಕೇರಿ, ಜು.23: ಮಾನವೀಯತೆಯನ್ನು ಮರೆತ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದಾಗಿ ನಗರದ ರಾಣಿಪೇಟೆಯ ವ್ಯಕ್ತಿಯೊಬ್ಬರು ಅಕಾಲಿಕವಾಗಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ನಾಗರಿಕರು ಹಾಗೂ ಮೃತರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರದ ನಿವಾಸಿ ಹಾಗೂ ನಗರಸಭೆಯ ಮಾಜಿ ಸದಸ್ಯ ಎಸ್.ಐ.ಮುನೀರ್ ಅಹಮ್ಮದ್ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಇದೇ ಜುಲೈ 19 ರಂದು ರಾಣಿಪೇಟೆಯ ನಿವಾಸಿ ಆದಂ ಕುಂಞ ಎಂಬವರ ಪುತ್ರ ಕರೀಂ(38) ಎಂಬವರು ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಸಿಲುಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ, ಜೀವನ್ಮರಣದ ಸ್ಥಿತಿಯಲ್ಲಿದ್ದ ಕರೀಂಗೆ ವೈದ್ಯರು ಕನಿಷ್ಠ ಪ್ರಥಮ ಚಿಕಿತ್ಸೆಯನ್ನೂ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕರೀಂ ಮೃತ ಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಸ್ವಸ್ಥರಾಗಿದ್ದ ಕರೀಂ ಅವರಿಗೆ ಅಗತ್ಯ ಚಿಕಿತ್ಸೆ ಒದಗಿಸಲು ತಜ್ಞ ವೈದ್ಯರ ನೆರವನ್ನು ಪಡೆಯುವ ಪ್ರಯತ್ನವು ಆ ಸಂದರ್ಭ ನಡೆಯಲಿಲ್ಲ. ವೈದ್ಯರೊಬ್ಬರಿಗೆ ದೂರವಾಣಿ ಕರೆ ಮಾಡಿ ರೋಗಿಯನ್ನು ಬೇರೆಡೆಗೆ ಕಳುಹಿಸಲು ಸೂಚಿಸುತ್ತಿರುವುದಾಗಿ ತಿಳಿಸಿದ ಆಸ್ಪತ್ರೆ ಸಿಬ್ಬಂದಿಗಳು, ಕಿಂಚಿತ್ ಚಿಕಿತ್ಸೆ ನೀಡುವ ಪ್ರಯತ್ನಕ್ಕೂ ಮುಂದಾಗಲಿಲ್ಲ. ಇಂತಹ ಘಟನೆ ಇವರೊಬ್ಬರಿಗಲ್ಲ, ಹಲವಾರು ಮಂದಿಯ ಅನುಭವಕ್ಕೆ ಬಂದಿದೆ. ಹೀಗಿದ್ದೂ ಯಾರೂ ವ್ಯವಸ್ಥೆಯ ವಿರುದ್ಧ ಬಾಯಿ ಬಿಡದಿರುವುದರಿಂದ ಹದಗೆಟ್ಟಿರುವ ಆಸ್ಪತ್ರೆಯ ಅವ್ಯವಸ್ಥೆ ಹಾಗೆಯೇ ಮುಂದುವರೆದಿರುವುದಾಗಿ ಬೇಸರ ವ್ಯಕ್ತಪಡಿಸಿದರು.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಗಳು ಕನಿಷ್ಟ ಸಾಂತ್ವನ ಹೇಳುವ ಸೌಜನ್ಯವನ್ನಾದರೂ ಹೊಂದಿರುವುದು ಅತ್ಯಗಶ್ಯ. ಕರೀಂ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವರ ಅನಾರೋಗ್ಯವನ್ನು ಗಮನಿಸಿ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ಅದಾವುದರ ಬಗ್ಗೆ ಆಸಕ್ತಿ ವಹಿಸದ ಮಂದಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರಾದರೂ, ಸರ್ಕಾರದ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲು ಮುಂದಾಗದೆ ಅಮಾನವೀಯತೆ ಮೆರೆದಿರುವುದಾಗಿ ಮುನೀರ್ ಅಹಮ್ಮದ್ ಆರೋಪಿಸಿದರು.

ಎಲ್ಲಾ ಸೌಲಭ್ಯಗಳೊಂದಿಗೆ ವೈದ್ಯಕೀಯ ಕಾಲೇಜನ್ನು ಹೊಂದಿದ್ದರೂ ಮಡಿಕೇರಿಯ ಜಿಲ್ಲಾ ಆಸ್ಪತ್ರೆ, ಅಲ್ಲಿನ ವೈದ್ಯರ ನಿರ್ಲಕ್ಷ್ಯ ಧೋರಣೆಗಳಿಂದ ಆರೋಗ್ಯ ಸೇವೆ ಶ್ರೀಸಾಮಾನ್ಯರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಔಷಧಿಯ ದೊಡ್ಡ ಉಗ್ರಾಣವೇ ಇದೆ, ಆದರೆ ಯಾವುದೇ ರೋಗಿ ಆಸ್ಪತ್ರೆಗೆ ಭೇಟಿ ನೀಡಿದರೂ ಪಾರಸಟಮೊಲ್ ಮಾತ್ರಯನ್ನಷ್ಟೇ ನೀಡಲಾಗುತ್ತಿದೆ. ಎಲ್ಲಾ ಔಷಧಿ, ಸ್ಕ್ಯಾನಿಂಗ್ ಗೆ ಖಾಸಗಿ ಕ್ಲಿನಿಕ್‍ಗಳಿಗೆ ಚೀಟಿ ಬರೆದುಕೊಡಲಾಗುತ್ತಿದೆ. ಸರಕಾರಿ ಆಸ್ಪತ್ರೆಯ ಹಲವು ಮಂದಿ ವೈದ್ಯರು ಖಾಸಗಿ ಕ್ಲಿನಿಕ್ ಗಳನ್ನು ನಡೆಸುತ್ತಿರುವುದರಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳ ಬಗ್ಗೆ ಮಾನವೀಯತೆಯೇ ಇಲ್ಲದಾಗಿದೆ ಎಂದು ಮುನೀರ್ ಆರೋಪಿಸಿದರು.

ಕಣ್ಣೀರು ಹಾಕಿದ ಸಹೋದರ
ಮೃತ ಕರೀಂನ ಸಹೋದರ ಹಸೈನಾರ್ ಮಾತನಾಡಿ, ತುರ್ತು ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲಾ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲು ಮತ್ತೆಷ್ಟು ವರ್ಷಗಳು ಬೇಕೆಂದು ಪ್ರಶ್ನಿಸಿ ಕಣ್ಣೀರು ಹಾಕಿದರು. ಸಹೋದರ ಕರೀಂನನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತನಿಗೆ ವೆಂಟಿಲೇಟರ್ ವ್ಯವಸ್ಥೆಯನ್ನು ಯಾಕೆ ಮಾಡಿಲ್ಲ? ರೋಗಿಯ ಎದೆಬಡಿತ ಕ್ಷೀಣವಾಗಿದೆ ಎಂದಾದರೆ ತಕ್ಷಣ ಸಂಬಂಧಿಸಿದ ವೈದ್ಯರನ್ನು ಯಾಕೆ ಕರೆಸಲಿಲ್ಲ ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಯಾಕೆ ಒದಗಿಸಲಿಲ್ಲವೆಂದು ಪ್ರಶ್ನಿಸಿದರು.

ಮೃತ ಕರೀಂನ ತಂದೆ ಆದಂ ಕುಂಞ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ನನ್ನ ಮಗ ಸಾವನ್ನಪ್ಪಿದ್ದು, ಇಂತಹ ಸ್ಥಿತಿ ಬೇರೆ ಯಾರಿಗೂ ಬಾರದಿರಲಿ ಎಂದು ನುಡಿದರು.

ಸ್ಥಳೀಯ ನಿವಾಸಿಗಳಾದ ಪುಲ್ಲೇರ ಕಾಳಪ್ಪ ಮಾತನಾಡಿ, ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳಿಗೆ ಪರಿಹಾರವೇ ಇಲ್ಲದಾಗಿದ್ದು, ತುರ್ತು ಪರಿಸ್ಥಿತಿಗಳಲ್ಲೂ ರೋಗಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಸರಕಾರ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರೂ ಅವುಗಳನ್ನು ಬಳಸಿಕೊಳ್ಳದ ಜಿಲ್ಲಾಸ್ಪತ್ರೆಯ ವೈದ್ಯರು ಎಕ್ಸ್ ರೇ, ಸ್ಕ್ಯಾನಿಂಗ್ ಮಾಡಿಸುವಂತೆ ಖಾಸಗಿ ಕ್ಲಿನಿಕ್‍ಗಳಿಗೆ ರೋಗಿಗಳನ್ನು ಅಲೆದಾಡಿಸುತ್ತಿದ್ದಾರೆ. ಅಲ್ಲದೆ ಕೊನೆಯ ಗಳಿಗೆಯಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ರೋಗಿಗಳನ್ನು ನೆರೆ ಜಿಲ್ಲೆಗಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡುವುದಕ್ಕಾಗಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಸೀಮಿತರಾಗಿದ್ದಾರೆ ಎಂದು ಆರೋಪಿಸಿದರು.

ಜನಸಾಮಾನ್ಯರಿಗೆ ಸ್ಪಂದಿಸುವ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ವೈದ್ಯರ ಅಗತ್ಯ ಜಿಲ್ಲಾಸ್ಪತ್ರೆಗೆ ಇದೆ ಎಂದು ಕಾಳಪ್ಪ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಅಬೂಬಕ್ಕರ್ ಹಾಗೂ ಡಾಲು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News