ಚಿಕ್ಕಮಗಳೂರು: ಮಲೆನಾಡಿನಲ್ಲಿ ಮತ್ತೆ ಧಾರಾಕಾರ ಮಳೆ; ಆತಂಕದಲ್ಲಿ ಕಾಫಿ, ಅಡಿಕೆ ಬೆಳೆಗಾರರು

Update: 2018-07-23 11:48 GMT

ಚಿಕ್ಕಮಗಳೂರು, ಜು.23: ಜಿಲ್ಲೆಯ ಮಲೆನಾಡು ಭಾಗದಲ್ಲಿ ರವಿವಾರ ರಾತ್ರಿಯಿಂದ ಮತ್ತೆ ಮಳೆ ಆರ್ಭಟ ಆರಂಭವಾಗಿದ್ದು, ಸೋಮವಾರ ಬೆಳಗಿನಿಂದಲೂ ಮಲೆನಾಡಿನಾದ್ಯಂತ ಧಾರಾಕಾರ ಮಳೆ ಎಡಬಿಡದೇ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯಲಾರಂಭಿಸಿವೆ. ಮಳೆಗೆ ಕೆಲ ಮನೆಗಳು ಕುಸಿದು ಹಾನಿ ಉಂಟಾದ ಬಗೆ ವರದಿಯಾಗಿದೆ. 

ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿರುವ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಸಂಜೆ ಆರಂಭವಾದ ಭಾರೀ ಮಳೆ ರಾತ್ರಿ ಇಡೀ ಸುರಿದಿದ್ದು, ಸೋಮವಾರವೂ ಮಳೆ ಬಿರುಸುಗೊಂಡಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಜಾವಳಿ, ಮಾಗುಂಡಿ, ಕಳಸ, ಹೊರನಾಡು, ಕೊಟ್ಟಿಗೆಹಾರ ಭಾಗದಲ್ಲಿ ಸತತ ಮಳೆಯಾಗುತ್ತಿದೆ. ತಾಲೂಕಿನಾದ್ಯಂತ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಕವಿದ ವಾತಾವರಣ ಹಾಗೂ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರ ಬೆಳಗಿನಿಂದಲೂ ಎಡಬಿಡದೆ ಮಳೆಯಾಗುತ್ತಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದ ಮಳೆ ಸಂಜೆಯ ಹೊತ್ತಿಗೆ ಮತ್ತೆ ಬಿರುಸು ಪಡೆದುಕೊಂಡಿತ್ತು. ಭಾರೀ ಮಳೆಯಿಂದಾಗಿ ಕೊಪ್ಪ ತಾಲೂಕಿನ ಹರಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅರವಿಂದ ನಾಯ್ಕ್ ಎಂಬವರ ಮನೆ ಕುಸಿದ ಬಗ್ಗೆ ವರದಿಯಾಗಿದ್ದು, ಶೃಂಗೇರಿ ಹನುಮನಗರದ ಗಾಯತ್ರಿ ಎಂಬವರ ಮನೆಯ ಒಂದು ಭಾಗ ಕುಸಿದು ಶೇ.25ರಷ್ಟು ಹಾನಿಯಾಗಿದೆ, ಸುಮಾರು 30 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. 

ಇತ್ತ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದರೆ ಬಯಲುಸೀಮೆ ಭಾಗವಾದ ಚಿಕ್ಕಮಗಳೂರು, ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತ ಮೋಡ ಕವಿದ ವಾತವರಣವಿದ್ದು, ರವಿವಾರ ಮತ್ತು ಸೋಮವಾರ ಸಂಜೆ ಧಾರಾಕಾರ ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ಮತ್ತೆ ಮುಂದುವರಿದಲ್ಲಿ ನದಿ ಪಾತ್ರದ ಗ್ರಾಮಗಳು ಮತ್ತೆ ನೆರೆ ಭೀತಿಗೆ ಸಿಲುಕಲಿವೆ.

ಅಡಿಕೆ, ಕಾಫಿ ಬೆಳೆಗಾರರಲ್ಲಿ ಆತಂಕ:  
ಮಲೆನಾಡು ಭಾಗದಲ್ಲಿ ಸತತ ಮಳೆಯಾಗುತ್ತಿರವುದರಿಂದ ಅಡಿಕೆ ಮತ್ತು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಅಡಿಕೆ ಮತ್ತು ಕಾಫಿ ಬೆಳೆಗೆ ಕೊಳೆ ರೋಗದ ಕಾಟ ಆರಂಭವಾಗಿದ್ದು, ಈ ಹೊತ್ತಿಗೆ ಅಡಿಕೆ, ಕಾಫಿ ಬೆಳೆಗಳಿಗೆ ತಗುಲುವ ಕೊಳೆ ರೋಗ ನಿಯಂತ್ರಣಕ್ಕಾಗಿ ಒಂದು ಸುತ್ತಿನ ಬೋಡೋ ದ್ರಾವಣ ಸಿಂಪಡಣೆ ಮಾಡಬೇಕಿತ್ತು. ಆದರೆ ಸತತ ಮಳೆಯಿಂದಾಗಿ ಬೆಳೆಗಾರರಿಗೆ ಬೋಡೋ ದ್ರಾವಣ ಸಿಂಪಡಣೆಗೆ ಅವಕಾಶ ಸಿಗುತ್ತಿಲ್ಲ. ಪರಿಣಾಮ ಕೊಳೆ ರೋಗಕ್ಕೆ ಅಡಿಕೆ ಮತ್ತು ಕಾಫಿ ಬೆಳೆ ತುತ್ತಾಗುವ ಭೀತಿ ಮಲೆನಾಡಿನ ರೈತರನ್ನು ಕಾಡುತ್ತಿದೆ. 

ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಪ್ರಮಾಣದ ಹಾನಿಯುಂಟಾಗುತ್ತಿದ್ದು, ಶನಿವಾರ, ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದಿರುವುದಲ್ಲದೆ ನದಿಯ ನೀರು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ ತಾಲೂಕುಗಳಲ್ಲಿ ಮಳೆ ಹೆಚ್ಚಾಗಿ ಬರುತ್ತಿದೆ. ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತ ಉಂಟಾದ ಕಾರಣ ಹೇಮಾವತಿ ನದಿಯ ನೀರು ಅಕ್ಕ ಪಕ್ಕದ ಅಡಕೆ ತೋಟಗಳಿಗೆ ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಇಡೀ ತೋಟವೇ ನದಿ ನೀರಿನಲ್ಲಿ ಮುಳುಗಿದ ಬಗ್ಗೆ ವರದಿಯಾಗಿದ್ದು, ಹಲವು ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News