ತರೀಕೆರೆ: ಕಾಡಾನೆ ಗುಂಪು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

Update: 2018-07-23 11:50 GMT

ತರೀಕೆರೆ, ಜು.23: ಆಹಾರ ಅರಸಿ ಕಾಡಿನಿಂದ ಬಂದ ಕಾಡಾನೆಗಳ ಗುಂಪೊಂದು ತಾಲೂಕು ರೈತರೊಬ್ಬರ ಜಮೀನಿನಲ್ಲಿ ಬೀಡು ಬಿಡುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಹಿರೇಕಾತೂರು ಗ್ರಾಮದಲ್ಲಿ ವರದಿಯಾಗಿದೆ.

ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿರುವ ಭದ್ರಾ ಅಭಯಾರಣ್ಯದಿಂದ ಕಾಡಾನೆಗಳ ಗುಂಪು ಹಿರೇಕಾತೂರು ಗ್ರಾಮದ ಯಲ್ಲಪ್ಪಯ್ಯ ಎಂಬವರ ಜಮೀನಿನಲ್ಲಿ ಬೀಡು ಬಿಟ್ಟಿದ್ದವು. ನಂತರ ಅಲ್ಲೇ ಇದ್ದ ಕೆರೆಯೊಂದರಲ್ಲಿ ಮುಳುಗಿದ ಕಾಡಾನೆಗಳು ನೀರಿನಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದವು. ಬೆಳಗ್ಗೆ ಕಾಡಾನೆಗಳನ್ನು ಕಂಡ ಗ್ರಾಮದ ರೈತರೊಬ್ಬರು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದರಿಂದ ಸ್ಥಳದಲ್ಲಿ ಜನ ಜಮಾಯಿಸಿದ್ದನ್ನು ಕಂಡ ಕಾಡಾನೆಗಳು ಗಲಿಬಿಲಿಗೊಂಡು ಗ್ರಾಮದ ಜಮೀನುಗಳ ಬಳಿ ಓಡಾಡಿದ್ದರಿಂದ ರೈತರ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಕೆಲ ಗ್ರಾಮಸ್ಥರು ಆನೆಗಳನ್ನು ಓಡಿಸುವ ಸಾಹಸಕ್ಕೆ ಕೈ ಹಾಕಿದ್ದರಿಂದ ಬೆದರಿದ ಆನೆಗಳು ಜನರ ಗುಂಪಿನತ್ತ ದಾಳಿಗೆ ಮುಂದಾಗಿದ್ದವೆಂದು ತಿಳಿದು ಬಂದಿದೆ. ಬಳಿಕ ಅರಣ್ಯಾಧಿಕಾರಿಗಳಿಗೆ ಸುದ್ದಿ ಮಟ್ಟಿಸಿದ್ದರಿಂದ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಜನರನ್ನು ಚದುರಿಸಿ ಆನೆಗಳನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾದರೆಂದು ತಿಳಿದು ಬಂದಿದೆ. ಆನೆಗಳು ರೈತರ ಜಮೀನುಗಳಲ್ಲಿ ಓಡಾಡಿದ್ದರಿಂದ ಗ್ರಾಮದಲ್ಲಿ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News