ಜಿಎಸ್‌ಟಿ ಸರಳವಾಗಲಿ

Update: 2018-07-23 18:31 GMT

ಮಾನ್ಯರೇ,

ಕಳೆದ ವರ್ಷ ಸರಕು ಮತ್ತು ಸೇವಾ ತೆರಿಗೆ ಅಂದರೆ ಜಿಎಸ್‌ಟಿಯನ್ನು ಜಾರಿಗೆ ತರುವಾಗ ಅದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶವನ್ನು ಕರೆಯಲಾಗಿತ್ತು. ಒಂದು ದೇಶ, ಒಂದು ತೆರಿಗೆ ವ್ಯವಸ್ಥೆಯನ್ನು ಅಪ್ಪಿಕೊಳ್ಳುತ್ತಿರುವ ಕಾರಣ ಇದೊಂದು ಐತಿಹಾಸಿಕ ಕ್ಷಣ ಹಾಗೂ ಕ್ರಾಂತಿಕಾರಿ ಹೆಜ್ಜೆ ಎಂದೆಲ್ಲಾ ಬಣ್ಣಿಸಲಾಯಿತು. ಈ ವರ್ಷದ ಜುಲೈಗೆ ಹೊಸ ತೆರಿಗೆ ಪದ್ಧತಿ ಜಾರಿಗೆ ಬಂದು ವರ್ಷ ತುಂಬಿದ ಸಂದರ್ಭದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಎಸ್‌ಟಿಯಿಂದಾಗಿ ತೆರಿಗೆ ಸಂಗ್ರಹ ಸುಧಾರಿಸಿದೆ ಹಾಗೂ ಸರಳಗೊಂಡಿದೆ ಎಂಬುದು ಸರಕಾರದ ಹೇಳಿಕೆ. ಜಿಎಸ್‌ಟಿ ಪ್ರಕ್ರಿಯೆಯನ್ನು ಗರಿಷ್ಠ ಪ್ರಮಾಣದಲ್ಲಿ ಸರಳ, ಸುಗಮಗೊಳಿಸಿದರೆ ಅದರ ವ್ಯಾಪ್ತಿ ಸಹಜವಾಗಿ ವಿಸ್ತರಿಸಿ ತೆರಿಗೆ ಸಂಗ್ರಹವೂ ಹೆಚ್ಚಾಗುತ್ತದೆ. ಆಗ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಬಹುದು. ಜತೆಗೆ ಈಗ ನಮ್ಮಲ್ಲಿ ತೆರಿಗೆ ಹಂತಗಳು ಜಾಸ್ತಿಯಾಗಿದ್ದು ಅದನ್ನೂ ಕಡಿಮೆ ಮಾಡಬಹುದಾಗಿದೆ. ಅದೇ ರೀತಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ತೈಲ ಬೆಲೆ ಜಿಎಸ್‌ಟಿ ವ್ಯಾಪ್ತಿಗೆ, ಇನ್ನಷ್ಟು ಸರಕುಗಳ ಮೇಲಿನ ತೆರಿಗೆ ಇಳಿಕೆ ಹಾಗೂ ತೆರಿಗೆ ಹಂತಗಳ ಕಡಿತ ಇವು ಸಾಧ್ಯವಾದರೆ ಜನರು ಮತ್ತು ವ್ಯಾಪಾರಿಗಳಿಬ್ಬರೂ ಜಿಎಸ್‌ಟಿಯನ್ನು ಸಮರ್ಥಿಸಬಹುದು.

Similar News