ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ: ಸುಪ್ರೀಂ ತೀರ್ಪು ಉಲ್ಲಂಘನೆ

Update: 2018-07-24 06:22 GMT

 ಹಿಂದೂ ಸಂತ, ಉತ್ತರ ಭಾರತದ ಜೀತ ವಿಮುಕ್ತಿ ನಾಯಕರೆಂದೇ ಖ್ಯಾತರಾದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆಯನ್ನು ಹಿಂದೂ ಯುವ ಮೋರ್ಚಾ ಸಂಘಟನೆಗೆ ಸೇರಿದವರು ಮಾಡಿದ್ದಾರೆಂದು ವರದಿಯಾಗಿದೆ. ‘‘ಗುಂಪು ಸೇರಿ ಥಳಿಸಿ ಕೊಲ್ಲುವುದು ಭಯಾನಕ ಕೃತ್ಯ’’ ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತು ದಿನ ಕಳೆಯುವುದರೊಳಗಾಗಿ ಈ ಅಮಾನುಷ ಹಲ್ಲೆ ನಡೆದಿರುವುದು ಜನರನ್ನು ಕಂಗೆಡಿಸಿದೆ. ದುಷ್ಕೃತ್ಯ ಎಸಗುವ ಕೇಸರಿ ಗೂಂಡಾಗಳಿಗೆ ಕಾನೂನಿನ ಭಯವೇ ಇಲ್ಲವೆಂಬುವುದು ಗೋಚರಿಸುತ್ತಿದೆ. ಪ್ರಗತಿಪರರು, ಜನಪರ ಸಾಹಿತಿಗಳು, ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಹಲ್ಲೆಯನ್ನು ಖಂಡಿಸಿ ದೇಶದ ನಾನಾ ಕಡೆ ಹೋರಾಟಕ್ಕಿಳಿದಿದ್ದಾರೆ.

 ಸ್ವಾಮಿ ಅಗ್ನಿವೇಶ್ ಯಾರು, ಎಲ್ಲಿಯವರು?
 ಅಗ್ನಿವೇಶ್ ಸಾಮಾಜಿಕ ಕಾರ್ಯಕರ್ತರಾಗಿ ಹೋರಾಟಗಾರರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು. ಅವರ ಸ್ವಂತ ಊರು ಆಂದ್ರಪ್ರದೇಶದ ಶ್ರೀಕಾಕುಳಂ. 1939ರಲ್ಲಿ ತನ್ನ ತಂದೆ ತಾಯಿ ಮರಣದ ನಂತರ ತನ್ನ ಅಜ್ಜನ ಊರಾದ ಛತ್ತೀಸ್‌ಗಡ ರಾಜ್ಯಕ್ಕೆ ಹೋದರು. ಅವರು ಓದಿದ್ದು ತತ್ವಶಾಸ್ತ್ರ ಮತ್ತು ಕಾನೂನು. ಕೆಲವು ವರ್ಷಗಳು ಕೋಲ್ಕತಾದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸ್ವಲ್ಪಸಮಯ ವಕೀಲರಾಗಿಯೂ ಪ್ರಾಕ್ಟೀಸ್ ಮಾಡಿದರು. ಹರ್ಯಾಣ ರಾಜ್ಯದ ಶಾಸನ ಸಭೆಯ ಶಾಸಕರಾಗಿ ಆಯ್ಕೆಯಾಗಿ ವಿದ್ಯಾಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಾನು ಓದಿದ ಓದಿಗೆ ನಿಜವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ, ಜೀತ ವಿಮುಕ್ತಿ, ಬಾಲಕರ ಬಿಟ್ಟಿ ಚಾಕರಿ ವಿರುದ್ಧ, ಆದಿವಾಸಿಗಳ ಪರವಾಗಿ ಹೋರಾಟಗಳ ಮೂಲಕ ತಮ್ಮದೇ ಶೈಲಿಯಲ್ಲಿ ಚಳವಳಿ ನಡೆಸುತ್ತ ಜನ ಜಾಗೃತಿ ಮಾಡುತ್ತಾ ಬರುತ್ತಿದ್ದಾರೆ. ಇತ್ತೀಚಿಗೆ ಆಂಧ್ರಪ್ರದೇಶದ ಸೊಂಪೇಟಾ ಥರ್ಮಲ್ ವಿದ್ಯುತ್ ಸ್ಥಾವರ ನಿರ್ಮಾಣದ ವಿರುದ್ಧ ಹೋರಾಟ ನಡೆಸುತ್ತಿರುವವರ ಪರವಾಗಿ ಬೆಂಬಲ ಸೂಚಿಸಿದ್ದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ world council of arya samajaದ ಅಧ್ಯಕ್ಷರಾಗಿರುವುದು ಅವರ ಘನತೆಗೆ ಸಂದ ಗೌರವ.

ಈ ಹಲ್ಲೆ ಎಲ್ಲಿ? ಹೇಗಾಯಿತು?
ಜಾರ್ಖಂಡ್ ರಾಜ್ಯದ ರಾಂಚಿಯಿಂದ ಸುಮಾರು 365 ಕಿ. ಮೀ. ಪಹಾರಿ ಎಂಬಲ್ಲಿ ಬುಡಕಟ್ಟು ಸಂಘಟನೆ ಸಡೆಸುತ್ತಿದ್ದ ಸಭೆಗೆ ಹೋಗುವುದಕ್ಕಾಗಿ ಅಲ್ಲಿಗೆ ಹತ್ತಿರದ ಪಾಕುರ್ ಎಂಬ ಪ್ರದೇಶದ ಹೊಟೇಲ್ನಲ್ಲಿ ಅಗ್ನಿವೇಶ್ ತಂಗಿದ್ದರು. ಅಲ್ಲಿಂದ ಹೊರಬರುವ ಸಮಯದಲ್ಲಿ ಹಲ್ಲೆಕೋರರು ದೌರ್ಜನ್ಯ ನಡೆಸಿದ್ದಾರೆ. ‘‘ನಾನು ಬರುವುದನ್ನೇ ಪೂರ್ವನಿಯೋಜಿತವಾಗಿ ದಾಳಿ ಮಾಡಲು ಕಾದು ಕೂತಿದ್ದ ಗುಂಪು ಹಠತ್ತಾನೆ ನನ್ನ ಮೇಲೆ ಎರಗಿತು. ಎಳೆದಾಡಿ, ದೂಡಿ ಮನಬಂದಂತೆ ಬಡಿದರು, ರಸ್ತೆ ಮೇಲೆ ಬೀಳಿಸಿ ಕಾಲಿನಿಂದ ತುಳಿದರು, ಮೈ ಮೇಲಿನ ಬಟ್ಟೆಯನ್ನು ಹರಿದು ಹಾಕಿ, ರುಮಾಲನ್ನು ಕಿತ್ತೆಸೆದರು, ಅತ್ಯಂತ ನೀಚ ಹೊಲಸು ಬೈಗುಳಗಳಿಂದ ಬೈದು ಅವಮಾನಿಸಿದರು. ‘ಜೈಶ್ರೀರಾಂ’ ಎಂದು ಕೂಗುತ್ತ ಕೇಸರಿ ಬಾವುಟ ತೋರಿಸುತ್ತಿದ್ದರು. ನನಗೆ ‘ವಂದೇ ಮಾತರಂ’ ಹೇಳುವಂತೆ ಒತ್ತಾಯಿಸುತ್ತಿದ್ದರು. ನನ್ನೊಂದಿಗೆ ಕೆಲವು ಆದಿವಾಸಿ ಯುವಕರಿದ್ದು ಬಿಡಿಸಿಕೊಳ್ಳಲು ಮುಂದಾದರು. ಅವರನ್ನು ಸಹ ಆ ಪುಂಡರು ಹೆದರಿಸಿ ದೂರ ತಳ್ಳಿದರು. ನನ್ನ ಮೇಲೆ ಹಲ್ಲೆ ನಡೆಯುವ ಸಮಯದಲ್ಲಿ ಒಬ್ಬ ಪೊಲೀಸ್ ಸಹ ಇರದೆ ಹೋದರು.’’ ಹೀಗೆಂದು ತಮ್ಮ ಮೇಲೆ ನಡೆದ ಬೀಭತ್ಸ ಹಲ್ಲೆಯನ್ನು ವಿವರಿಸುತ್ತಾರವರು.

‘‘ಇಷ್ಟಕ್ಕೂ ಯಾಕಾಗಿ ಆ ಪುಂಡರು ನನ್ನ ಮೇಲೆ ಹಲ್ಲೆ ನಡೆಸಿದರು ನನಗೆ ತಿಳಿಯುತ್ತಿಲ್ಲ. ನಾನು ಎಲ್ಲಾ ತರಹದ ‘ಹಿಂಸೆ’ಯನ್ನು ವಿರೋಧಿಸಿಕೊಂಡು ಬಂದವನು. ಜನರ ಒಳಿತು ಮತ್ತು ಮಾನವೀಯತೆ ಪರವಾಗಿ ನಿಂತವನು. ಇಲ್ಲಿನ ಆದಿವಾಸಿಗಳು ಈ ನೆಲದ ನಿಜವಾದ ಕಾಯಕ ಜೀವಿಗಳು, ಸರಕಾರಗಳ ಯೋಜನೆಗಳು ಸರಿಯಾಗಿ ಅವರಿಗೆ ತಲುಪುತ್ತಿಲ್ಲ. ಕೇಂದ್ರ ರಾಜ್ಯ ಸರಕಾರಗಳ ಒಕ್ಕಲೆಬ್ಬಿಸುವ ಯೋಜನೆಗಳ ತೂಗು ಕತ್ತಿ ಅಲ್ಲಿನ ಜನರನ್ನು ಕಂಗೆಡಿಸಿದೆ. ಅದರ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಹಕ್ಕು ಎಂದು ತಿಳಿದಿದ್ದೇನೆ. ಗೋಮಾಂಸ ಭಕ್ಷಣೆ ಅಹಾರದ ಹಕ್ಕು, ಅದನ್ನು ವಿರೋಧಿಸಿ ಹಲ್ಲೆ ನಡೆಸುವುದು ಪುಂಡಾಟಿಕೆ. ಯಾರು ‘ಹಿಂದತ್ವ‘ವಾದಿಗಳಿಗೆ ಈ ಹಕ್ಕು ಕೊಟ್ಟವರು.’’ ಎಂದು ಪ್ರಶ್ನಿಸುತ್ತಾರೆ ಅವರು. ಹಲ್ಲೆಗೊಳಗಾಗಿ ಗಾಯಗೊಂಡ ಅಗ್ನಿವೇಶ್‌ರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಮೇಲೆ ನಡೆದ ಪೂರ್ವಯೋಜಿತ ದಾಳಿ ಸಂಘಪರಿವಾರದವರ ಸಂಚೆಂದು ಹೇಳಲಾಗುತ್ತಿದೆ. ಹಲ್ಲೆಗೆ ಸಂಬಂಧಪಟ್ಟಂತೆ ಪೊಲೀಸರು 20 ಜನರನ್ನು ಬಂಧಿಸಿ ಕೇಸು ಹಾಕಿ ವಿಚಾರಣೆ ನಡೆಸುತ್ತಿದ್ದಾರೆ.

ಉದ್ದನೆಯ ಕಾವಿ ಜುಬ್ಬಾ, ದೋತಿ, ಕೊರಳಿಗೊಂದು ಕೆಂಪು ಶಲ್ಯ, ಮಾರುದ್ದದ ರುಮಾಲಿನಿಂದ ತಲೆಗೆ ಸುತ್ತಿರುವ ಪೇಟಾ, 78 ವರ್ಷದ ವಯೊವೃದ್ಧ್ದ, ಗಣ್ಯ ವ್ಯಕ್ತಿತ್ವ, ಮಾತಿನಲ್ಲಿ ಮಾನವೀಯತೆ ಬಿತ್ತುವ ಸಂತನ ಮೇಲೆ ಹಲ್ಲೆ ನಡೆಸಲು ಆ ಪುಂಡರಿಗೆ ಮನಸ್ಸಾದರೂ ಹೇಗೆ ಬಂತು ಎಂದು ಅವರನ್ನು ಬಲ್ಲವರು ಬೈದುಕೊಳ್ಳುತ್ತಿದ್ದಾರೆ. ಥಳಿತಕ್ಕೊಳಗಾಗಿ ಆಘಾತದಿಂದ ವಿಚಿಲಿತರಾಗಿರುವ ಅವರ ಫೋಟೊ ನೋಡಿದ ಯಾರಿಗೂ ಛೇ.. ಎನ್ನಿಸದಿರದು.

ಹಲ್ಲೆಯಾದ ಕೂಡಲೇ ಆ ಘಟನೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ಒಂದೆಡೆ ಹೇಳುತ್ತ, ಅಗ್ನಿವೇಶ್ ಮಾಡುತ್ತಾ ಬಂದಿರುವ ಕೆಲಸಗಳಿಗೆ ಇದು ಸಹಜ ಪ್ರತಿಕ್ರಿಯೆಯಾಗಿದೆ. ಯುವಜನರ ಆಕ್ರೋಶದ ಮುಂದೆ ನಾವೇನು ಮಾಡಲು ಸಾಧ್ಯ! ಎಂಬ ಹೇಳಿಕೆಗಳನ್ನು ಕೊಡುತ್ತ ಜಾರ್ಖಂಡ್ ಸರಕಾರ ಮತ್ತು ರಾಜಕಾರಣಿಗಳು ಹಲ್ಲೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ. ಕೇಂದ್ರ ಸರಕಾರದ ಹಿಂದುತ್ವದ ಕಾರ್ಯಸೂಚಿ, ಮತ್ತದರ ಯೋಜನೆಯನ್ನು ವಿರೋಧಿಸುವ ವ್ಯಕ್ತಿ ಮತ್ತು ಸಂಘಟನೆಗಳ ಮೇಲೆ ಸತತವಾಗಿ ಹಲ್ಲೆಗಳು ನಡೆಯುತ್ತಲೇ ಬರುತ್ತಿವೆ. ಅದು ಖ್ಯಾತ ಪರಿಸರವಾದಿ ಮೇಧಾಪಾಟ್ಕರ್, ಅಂಕಣಕಾರ ಸುಧೀಂದ್ರ ಕುಲಕರ್ಣಿ ಮೇಲೆ ಹಲ್ಲೆ, ಉನ ದಲಿತರ ಮೇಲಿನ ಮಾರಣಾಂತಿಕ ಹಲ್ಲೆ, ಅಖ್ಲಾಕ್, ಪೆಹ್ಲೂಖಾನ್, ಖಾಸಿಂರ ಮೇಲೆ ಹಲ್ಲೆಯಿಂದಾದ ಸಾವುಗಳು ಇತ್ಯಾದಿ. ಈ ಹಲ್ಲೆ ಅಥವಾ ದಾಳಿಗಳು ‘ರಾಷ್ಟ್ರಪ್ರೇಮ’, ‘ಗೋಮಾತೆ’ ಉಳಿಸುವ ಹೆಸರಲ್ಲಿ ನಡೆಯುತ್ತಿರುವುದರಿಂದ ದುಷ್ಕೃತ್ಯ ನಡೆಸುವವರು ಅಪರಾಧಿಗಳೆಂದು ಕರೆಸಿಕೊಳ್ಳುತ್ತಿಲ್ಲ. ಅವರು ಸ್ವಯಂ ಘೋಷಿತ ‘ದೇಶಪ್ರೇಮಿ’ಗಳಾಗಿ ಬದಲಾಗಿದ್ದಾರೆ. ಇಂತಹ ಕೃತ್ಯಗಳು ನಡೆದಾಗ ಸಂಬಂಧಪಟ್ಟ ರಾಜ್ಯ ಸರಕಾರಗಳಾಗಲಿ ಕೇಂದ್ರ ಸರಕಾರವಾಗಲಿ ಹಲ್ಲೆಗಳನ್ನು ತಡೆಯುವ ಅಥವಾ ನಿಯಂತ್ರಿಸುವ ಬಗ್ಗೆ ಸ್ಪಷ್ಟವಾಗಿ ಮಾತಾಡುವುದಿಲ್ಲ. ಹಲವು ಸಲ ಮೌನವನ್ನೇ ಮುರಿಯುವುದಿಲ್ಲ.

ಇಂತಹ ಹಲ್ಲೆಕೋರರಿಗೆ ಮೌನವೇ ಸಮ್ಮತಿಯಾಗಿ ಬಿಟ್ಟಿದೆ. ಬಹಳಷ್ಟು ದಿನಗಳಿಂದ ಇಂತಹ ಬೆಳವಣಿಗೆಯನ್ನು ನೋಡುತ್ತಾ ಬಂದ ಸರ್ವೋಚ್ಚ ನ್ಯಾಯಾಲಯ, ಗುಂಪು ಅಥವಾ ಸಮೂಹಿಕ ಹಲ್ಲೆ, ದೌರ್ಜನ್ಯ ನಡೆಸುವವರನ್ನು ಕಾನೂನು ವ್ಯಾಪ್ತಿಯಲ್ಲಿ ಶಿಕ್ಷಿಸಿ ನಿಯಂತ್ರಿಸಲು ಚಾರಿತ್ರಿಕ ತೀರ್ಪನ್ನು ಇತ್ತೀಚೆಗೆ ನೀಡಿದೆ.ಕೇವಲ ಕಾನೂನು ತೀರ್ಪುಗಳಿಂದ ಎಲ್ಲವನ್ನು ಮಾಡಲಾಗುವುದಿಲ್ಲ. ಒಂದಷ್ಟು ಸಹಕಾರಿಯಾಗ ಬಹುದಷ್ಟೇ. ನಮ್ಮ ದೇಶದಲ್ಲಿ ಕಾನೂನಿಗೇನು ಕೊರೆತೆ ಇಲ್ಲ. ಬಹಳಷ್ಟು ಕಾನೂನುಗಳು ಹಲ್ಲುಕಿತ್ತ ಹಾವಿನಂತಾಗಿವೆ. ಬುಸುಗುಡುತ್ತವೆಯಷ್ಟೇ ಕಚ್ಚುವುದಿಲ್ಲ. ಹಿಂಸಾ ರಾಜಕೀಯ ಯಾವ ಪಕ್ಷಕ್ಕೂ, ಸರಕಾರಗಳಿಗೂ, ಸಂಘಟನೆಗಳಿಗೂ ಸಲ್ಲದು.

ಪರಸ್ಪರ ಭಿನ್ನಾಭಿಪ್ರಾಯವನ್ನು ಮನ್ನಿಸುವ, ಅಭಿವ್ಯಕ್ತಿ ಸ್ವಾತಂತ್ರ ಗೌರವಿಸುವ ಸ್ವಸ್ಥ ಸಮಾಜವನ್ನು ಕಟ್ಟುವ ಉದ್ದೇಶ ಇಟ್ಟುಕೊಂಡ ಸರಕಾರಗಳಿದ್ದಾಗ ಮಾತ್ರ ಇದರ ನಿಯಂತ್ರಣ ಸಾಧ್ಯವಾಗುತ್ತದೆ ಎಂದಷ್ಟೆ ಹೇಳಬಹುದು.

Writer - ದೇವು ಟಿ. ವಡ್ಡಿಗೆರೆ

contributor

Editor - ದೇವು ಟಿ. ವಡ್ಡಿಗೆರೆ

contributor

Similar News