ಮಲೆನಾಡಿನಲ್ಲಿ ಮಳೆ ಇಳಿಮುಖ: ಕೃಷಿ ಚಟುವಟಿಕೆ ಚುರುಕು

Update: 2018-07-25 12:25 GMT

ಚಿಕ್ಕಮಗಳೂರು, ಜು.25: ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಬುಧವಾರ ಇಳಿಮುಖಗೊಂಡಿದ್ದು, ಬೆಳಗ್ಗೆ ಮಲೆನಾಡಿನ ವಿವಿಧೆಡೆ ಸಾಧಾರಣ ಮಳೆಯಾಗಿದ್ದು, ನಂತರ ಮಧ್ಯಾಹ್ನದಿಂದ ಸಂಜೆಯವರೆಗೂ ಬಿಸಿಲಿನ ವಾತಾವರಣ ಇತ್ತು. ಸತತ ಮಳೆಯಿಂದಾಗಿ ಕಂಗೆಟ್ಟಿದ್ದ ಮಲೆನಾಡಿನ ಜನತೆ ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಕಾಫಿ, ಅಡಿಕೆ ತೋಟಗಳ ಕೃಷಿ ಚಟುವಟಿಕೆಯತ್ತ ರೈತರು ಮುಖ ಮಾಡಿದ್ದಾರೆ.

ಮಂಗಳವಾರ ಜಿಲ್ಲೆಯಾದ್ಯಂತ ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ರಾತ್ರಿ ವೇಳೆ ಆಗಾಗ್ಗೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಂಗಳವಾರ ಬೆಳಗಾಗುತ್ತಲೇ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ಮಳೆ, ಗಾಳಿಯ ಆರ್ಭಟ ಕಡಿಮೆಯಾಗಿದ್ದು, ತುಂತುರು ಮಳೆಯಾಗಿದೆ. ಬುಧವಾರ ಮಧ್ಯಾಹ್ನದ ಬಳಿಕ ಮಲೆನಾಡಿನಾದ್ಯಂತ ಬಿಸಿಲ ವಾತಾವರಣ ಇತ್ತು.

ಕಳೆದ ಎರಡು ತಿಂಗಳಿನಿಂದ ಭಾರೀ ಮಳೆಯಿಂದಾಗಿ ಮಲೆನಾಡಿನ ಜನತೆ ಬಿಸಿಲು ಕಂಡಿದ್ದೇ ಅಪರೂಪ. ಸತತ ಮಳೆಯಿಂದಾಗಿ ಮಲೆನಾಡಿನ ಜನತೆ ರೋಸಿ ಹೋಗಿದ್ದರು. ಭಾರೀ ಮಳೆ ಕಾಫಿ, ಅಡಿಕೆ ತೋಟಗಳಲ್ಲಿನ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿತ್ತು. ಆದರೆ ಬುಧವಾರ ಮಳೆ ಆರ್ಭಟ ಕಡಿಮೆಯಾಗುವುದರ ಜೊತೆಗೆ ಬಿಸಿಲ ವಾತಾವರಣ ಆರಂಭವಾಗಿರುವುದರಿಂದ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಬುಧವಾರದಿಂದ ಮಳೆ ಕಡಿಮೆಯಾಗಲಿರುವುದರಿಂದ ನೆನೆಗುದಿಗೆ ಬಿದ್ದಿರುವ ಕಾಫಿ, ಅಡಿಕೆ ತೋಟಗಳ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. 

ಇನ್ನು ಜಿಲ್ಲೆಯ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ತುಂತುರು ಮಳೆಯೊಂದಿಗೆ ಬಿಸಿಲ ವಾತಾವರಣ ಇದ್ದರೇ, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಉಳಿದಂತೆ ಎಲ್ಲೆಡೆ ಬಿಸಿಲ ವಾತಾವರಣ ಇತ್ತು. ಮಲೆನಾಡಿನಲ್ಲಿ ಕಳೆದ ಎರಡು ತಿಂಗಳಿನಿಂದ ದಾಖಲೆಯ  ಮಳೆ ಸುರಿದ ಪರಿಣಾಮ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾಡ್ಯಾಂ ಭರ್ತಿಯಾಗಿದ್ದು, ನಾಲ್ಕುಗೇಟ್‍ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಇನ್ನು ಕಡೂರು ತಾಲೂಕಿನ ಮಗದಗದ ಕೆರೆ ಕಳೆದೊಂದು ದಶಕದ ಬಳಿಕ ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News