ಮುಂದಿನ 5 ವರ್ಷದಲ್ಲಿ ಎಲ್ಲರಿಗೂ ಮನೆ: ಶಾಸಕ ಜ್ಯೋತಿ ಗಣೇಶ್

Update: 2018-07-25 13:25 GMT

ತುಮಕೂರು, ಜ.26: ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಮುಂದಿನ 5 ವರ್ಷಗಳಲ್ಲಿ ಮನೆ ನೀಡಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದ್ದಾರೆ.

ನಗರ ಶಾಸಕರ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆಗೆ ಜುಲೈ 31ರಂದು ಕೊನೆ ದಿನವಾಗಿದ್ದು, ಈಗಾಗಲೇ 21,068 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲರಿಗೂ ಕಾಲಮಿತಿಯೊಳಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಕೇಂದ್ರ ಸರಕಾರ ವಸತಿ ಸೌಲಭ್ಯ ಪಡೆಯಲು ಆದಾಯ ಮಿತಿ ನಿಗಧಿಪಡಿಸಿಲ್ಲ. ಆದರೆ ರಾಜ್ಯ ಸರಕಾರದಿಂದ ವಸತಿ ಸೌಲಭ್ಯ ಪಡೆಯಲು 87,500 ರೂ.ಆದಾಯ ಮಿತಿ ನಿಗದಿ ಪಡಿಸಲಾಗಿದೆ. ಇದರಿಂದ ಬಡವರು ಮನೆ ಪಡೆಯಲು ಸಮಸ್ಯೆಯಾಗುತ್ತಿದ್ದು, ರಾಜ್ಯ ಸರಕಾರ ನಿಗದಿ ಪಡಿಸಿದ ಆದಾಯ ಮಿತಿಯನ್ನು ಕೇಂದ್ರದ ಮಾದರಿಯಲ್ಲಿ ರದ್ದು ಪಡಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 20 ಚದರದವರೆಗೆ ಮನೆ ಕಟ್ಟಲು ಆದಾಯ ತೆರಿಗೆ ಪಾವತಿಸುವವರಿಗೂ ಕೇಂದ್ರ ಸರಕಾರದಿಂದ ಬಡ್ಡಿ ರಿಯಾಯತಿಯಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶವಿದೆ. ಇಂತಹ ಮಾಹಿತಿಗಳನ್ನು ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಮೇಳ ನಡೆಸಿ ಸಾರ್ವನಿಕರಿಗೆ ಮಾಹಿತಿ ನೀಡಬೇಕು. ಬಡವರು ಮನೆ (ಗರಿಷ್ಠ ಮಿತಿಗೊಳಪಟ್ಟು) ವಿಸ್ತರಣೆ ಮಾಡಿಕೊಳ್ಳಲು ಸರಕಾರದಿಂದ ಸಾಲ ಸೌಲಭ್ಯವಿದೆ. ಇಂತಹ ಮಾಹಿತಿಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದರು.

ರಾಜೀವ್ ಆವಾಸ್ ಯೋಜನೆಯಡಿ ದಿಬ್ಬೂರಿನಲ್ಲಿ ನಿರ್ಮಿಸಿರುವ 1200 ಮನೆಗಳಲ್ಲಿ ಮನೆ ಪಡೆದಿರುವ ಫಲಾನುಭವಿಗಳ ಪೈಕಿ ಕೆಲವರು 1.12 ಲಕ್ಷ ರೂ. ವಂತಿಗೆ ಪಾವತಿಸಲು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಲಮ್ ಬೋರ್ಡ್ ಅಧಿಕಾರಿಗಳು ಈ ರೀತಿ ಸಮಸ್ಯೆ ಎದುರಿಸುತ್ತಿರುವ 100 ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳಿಂದ ಸಾಲಸೌಲಭ್ಯ ಕೊಡಿಸಬೇಕು. ಫಲಾನುಭವಿಗಳ ಪೈಕಿ ಯಾರೊಬ್ಬರಿಗೂ ಮನೆ ಕೈ ತಪ್ಪಬಾರದು. ವಂತಿಗೆ ಪಾವತಿಸಲು ಇದ್ದ ಜುಲೈ 25ರ ಕಾಲಮಿತಿ ವಿಸ್ತರಣೆಗೆ ಸ್ಲಮ್ ಬೋರ್ಡ್ ಕ್ರಮವಹಿಸಬೇಕು ಎಂದು ಸೂಚಿಸಿದರು. 

ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಿರುವ ಯುವ ನಿರುದ್ಯೋಗಿಗಳು ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕೈಗಾರಿಕೆಗಳ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರ ಕೈಗಾರಿಕೆಗಳಿಗೆ ಅಗತ್ಯವಿರುವ ಆಧುನಿಕ ತಂತ್ರಜ್ಞಾನಗಳನ್ನು ಬಳಸುವಂತೆ ಕೌಶಲ್ಯಗಳನ್ನು ಕಲಿಸಲು ಕ್ರಮ ವಹಿಸಬೇಕು. ಜಾತಿವಾರು ಇರುವ ಪತ್ತಿನ ಸಹಕಾರ ಸಂಘಗಳು ಆಯಾ ಜಾತಿಯ ನಿರುದ್ಯೋಗಿಗಳಿಗೆ ಮತ್ತು ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಜಿಲ್ಲಾ ಸಹಕಾರ ಇಲಾಖೆ, ಲೀಡ್ ಬ್ಯಾಂಕ್, ನಬಾರ್ಡ್ ಮತ್ತು ಜಾತಿವಾರು ಸಂಘಟನೆಗಳು ಸೇರಿ ಒಂದು ವಿನೂತನ ಕಾರ್ಯಕ್ರಮ ರೂಪಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ನಗರದಲ್ಲಿರುವ ಪ್ರತಿಯೊಬ್ಬ ನಿರುದ್ಯೋಗಿಗಳನ್ನು ಆನ್ ಲೈನ್ ಮೂಲಕ ನೋಂದಾಯಿಸಿಕೊಂಡು ಅವರ ಆಸಕ್ತಿಯಂತೆ ಸ್ವಯಂ ಉದ್ಯೋಗ ಅಥವಾ ಕೌಶಲ್ಯ ಕಲಿಸಲು ಕ್ರಮವಹಿಸಬೇಕು. ಈ ಬಗ್ಗೆ ಸಮುದಾಯ ಸಂಘಟನೆಗಳು ಜವಬ್ದಾರಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಉದ್ಯೋಗ ನಿಮಿತ್ತ ಪ್ರತಿದಿನ ಸಾವಿರಾರು ಜನ ಬೆಂಗಳೂರು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ನಗರದಲ್ಲೇ ಸಾಧ್ಯವಾದಷ್ಟು ಉದ್ಯೋಗ ಸೃಷ್ಟಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರಮ ಕೈಗೊಳ್ಳಬೇಕು. ಉದ್ಯೋಗ ಸೃಷ್ಟಿ ಯೋಜನೆಗಳ ಕುರಿತು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್ ಶ್ರೀನಿವಾಸ್‍ರೊಂದಿಗೆ ಚರ್ಚಿಸಲಾಗುವುದು. ಇದರ ಜೊತೆಗೆ ವಸಂತ ನರಸಾಪುರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಅಧಿಕಾರಿಗಳಿಗೆ ಅಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು ಎಂದರು.

ಇಲಾಖೆಗಳ ಸಮನ್ವಯತೆ: ಸ್ವಯಂ ಉದ್ಯೋಗ ಮತ್ತು ವಸತಿಗೆ ಸಂಬಂಧಿಸಿ ಎಲ್ಲಾ ಇಲಾಖೆಗಳು ಹಾಲಿ ನಡೆಯುತ್ತಿರುವ ಯೋಜನೆಗಳು ಮತ್ತು ಮುಂದೆ ಕೈಗೊಳ್ಳಬಹುದಾದ ಹೊಸ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂಗಡ ಪತ್ರ ಅಧ್ಯಯನ ಮಾಡಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ ಕಾಗದ ರಹಿತ ಕಚೇರಿಯಲ್ಲಿ ಅಪ್ ಲೋಡ್ ಮಾಡಬೇಕು. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸಬೇಕು. ಇದು ಸ್ಮಾರ್ಟ್ ಸಿಟಿಯ ಉದ್ದೇಶಗಳಲ್ಲಿ ಒಂದಾಗಿದೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ವಸತಿ ಮತ್ತು ನಿರುದ್ಯೋಗಿಗಳ ಬೆಸ್ಟ್ ಪ್ರಾಕ್ಟೀಸ್ ಯೋಜನೆಯಾಗಿ ಅನುಷ್ಠಾನವಾಗಬೇಕು. ಅಧಿಕಾರಿಗಳು ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುಸರಣೆ ಮಾಡಿ ಮಂಜೂರಾತಿ ಕೊಡಿಸುವ ಜವಬ್ದಾರಿ ತಮ್ಮದು ಎಂದರು.

ಈ ಸಂದರ್ಭ ಪಾಲಿಕೆ ಆಯುಕ್ತ ಎಲ್.ಮಂಜುನಾಥಸ್ವಾಮಿ, ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜ್ಯೋತಿ ಗಣೇಶ್, ಟುಡಾ ಆಯುಕ್ತ ರಂಗಸ್ವಾಮಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಕೀರ್ತಿಪ್ರಭ ಸೇರಿದಂತೆ 20 ಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News