ಶೌಚಾಲಯ ಸ್ವಚ್ಛಗೊಳಿಸದ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿದ ಶಾಲೆ !

Update: 2018-07-26 03:57 GMT

ಗೋರಖ್‌ಪುರ, ಜು. 26: ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದ ಇಬ್ಬರು ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಹಾಕಿದ ಘಟನೆ ದಿಯೋರಿಯಾ ಜಿಲ್ಲೆಯ ಸನಿವಾಸ ಶಾಲೆಯಲ್ಲಿ ನಡೆದಿದೆ.

"ಶೌಚಾಲಯ ಶುಚಿಗೊಳಿಸುವಂತೆ ವಾರ್ಡನ್ ನೀಡಿದ ಸೂಚನೆಯನ್ನು ನಾವು ಪಾಲಿಸಿಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ಹೊರಹಾಕಲಾಗಿದೆ" ಎಂದು ಸಲೀಮನ್ ಮತ್ತು ನಫ್ರೀನ್ ಎಂಬವರು ಮಾಡಿದ ದೂರಿನ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಗೆ ಶಿಕ್ಷೆಯಾಗಿ ಶೌಚಾಲಯ ತೊಳೆಯುವಂತೆ ಶ್ರುತಿ ಮಿಶ್ರಾ ಸೂಚಿಸಿದ್ದರು ಎಂದು ಆಪಾದಿಸಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲ ಶಿಕ್ಷಣ ಅಧಿಕಾರಿ ಸಂತೋಷ್ ದೇವ್ ಪಾಂಡೆ ಹೇಳಿದ್ದಾರೆ.

ಸಲೀಮನ್ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನಫ್ರೀಲ್ 6ನೇ ತರಗತಿಯಲ್ಲಿ ಓದುತ್ತಿದ್ದಳು. ಇಬ್ಬರೂ ಕೂಲಿ ಕಾರ್ಮಿಕರ ಮಕ್ಕಳಾಗಿದ್ದು, ರಾಂಪುರ ಠಾಣೆ ವ್ಯಾಪ್ತಿಯ ಸಾನಿಪತ್ತಿ ನಿವಾಸಿಗಳು. "ಮೇಡಂ ನಮ್ಮಲ್ಲಿ ಶೌಚಾಲಯ ತೊಳೆಸುವುದು ಮತ್ತು ಇತರ ಕೆಲಸ ಮಾಡಿಸುತ್ತಿದ್ದರು. ಕೆಟ್ಟ ಭಾಷೆಯಲ್ಲಿ ಬೈದು ಅವಮಾನ ಮಾಡುತ್ತಿದ್ದರು. ನಮಗೆ ಸಾಕಾಗಿ ಹೋಗಿ ಇನ್ನೆಂದೂ ಶೌಚಾಲಯ ತೊಳೆಯುವುದಿಲ್ಲ ಎಂದು ಹೇಳಿದೆವು. ಸೋಮವಾರ ಸಂಜೆ ನಮ್ಮನ್ನು ಹೊರಗೆ ಕಳುಹಿಸಿದರು. ಮರುದಿನದಿಂದ ನಾವು ಶಾಲೆ ಬಿಟ್ಟೆವು" ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News