ಸಾವರ್ಕರ್ ನಿಜ ಮುಖವನ್ನು ತೆರೆದಿಡುವ ನೂರಾನಿ

Update: 2018-07-26 18:41 GMT

ಗಾಂಧೀಜಿಯ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಸಾಕ್ಷಾಧಾರ ಕೊರತೆಯಿಂದ ಬಿದ್ದು ಹೋಗಿರ ಬಹುದು. ಆದರೆ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಮತ್ತು ಸಾವರ್ಕರ್‌ಗೆ ಇರುವ ನಂಟನ್ನು ನಿರಾಕರಿಸಲು ಸಾಧ್ಯವಿಲ್ಲ. ಗೋಡ್ಸೆ ಬೆಳೆದದ್ದು ಸಾವರ್ಕರ್ ಅವರ ನೆರಳಲ್ಲಿ. ಅದರೆ ಅವರ ಹಿಂದುತ್ವ ಸಿದ್ಧಾಂತ ಹಾಲಾಹಲವನ್ನು ಉಣ್ಣುವ ಮೂಲಕ ಬೆಳೆದರು ಮತ್ತು ತನ್ನ ಬದುಕಿನ ಕೊನೆಯಲ್ಲಿ ಅದನ್ನೇ ಕಕ್ಕಿ ಸತ್ತರು. ಸಾವರ್ಕರ್‌ರನ್ನು ಸ್ವಾತಂತ್ರ ಯೋಧ ಎಂದು ಬಿಂಬಿಸಲು ಸಂಘಪರಿವಾರ ಮತ್ತು ಬಿಜೆಪಿ ಸರಕಾರ ಪ್ರಯತ್ನಿಸುತ್ತಲೇ ಇದೆ. ಆದರೆ ಸ್ವಾತಂತ್ರ ಹೋರಾಟದಲ್ಲಿ ಒಂದು ಹಂತದವರೆಗೆ ಭಾಗವಹಿಸಿ, ಅದರಿಂದ ಹಿಂದೆ ಸರಿದವರು ಸಾವರ್ಕರ್. ಅಷ್ಟೇ ಅಲ್ಲ, ಬ್ರಿಟಿಷರ ವಿರುದ್ಧ ಪ್ರತಿರೋಧ ವ್ಯಕ್ತ ಪಡಿಸಿದ್ದಕ್ಕಾಗಿ ಲಿಖಿತವಾಗಿ ಕ್ಷಮೆಯಾಚನೆಯನ್ನು ಬರೆದು ಕೊಟ್ಟವರು. ಭಾರತೀಯತೆಯ ಮೇಲೆ ಸಾವರ್ಕರ್‌ಗೆ ನಂಬಿಕೆಯಿರಲಿಲ್ಲ. ಪ್ರಾದೇಶಿಕ ರಾಷ್ಟ್ರೀಯತೆಯ ಕಲ್ಪನೆಯನ್ನು ಅವರು ತಿರಸ್ಕರಿಸಿದ್ದರು. ಆರೆಸ್ಸೆಸ್‌ನಿಂದ ರಚಿಸಲ್ಪಟ್ಟ, ಕಪೋಲ ಕಲ್ಪಿತ, ರೋಚಕ, ಭ್ರಾಮಕ ಸಾಂಸ್ಕೃತಿಕ ರಾಷ್ಟ್ರೀಯತೆಯ ಮೇಲೆ ನಂಬಿಕೆಯಿಟ್ಟಿದ್ದರು ಮತ್ತು ಸ್ವಾತಂತ್ರ ಹೋರಾಟದಿಂದ ಹಿಂದೆ ಸರಿದು, ಇಂತಹದೊಂದು ಹಿಂದುತ್ವ ಸಿದ್ಧಾಂತದ ತಳಹದಿಯಲ್ಲಿ ರಾಷ್ಟ್ರೀಯವಾದವನ್ನು ಕಟ್ಟುವ ಪ್ರಯತ್ನದಲ್ಲಿ ತೊಡಗಿ ದರು. ಬಿಜೆಪಿ ಇಂದು ಸಾವರ್ಕರ್ ಒಬ್ಬ ರಾಷ್ಟ್ರೀಯ ವೀರಪುರುಷನೆಂದು ಬಿಂಬಿಸಲು ಯತ್ನಿಸುತ್ತಿದೆ. ಆದರೆ ವಾಸ್ತವವಾಗಿ ಅವರು ಗಾಂಧಿಗೆ ಪರ್ಯಾಯವಾಗಿ ಸಾವರ್ಕರ್‌ನ್ನು ಬಿಂಬಿಸ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಚ್ಚಿಡುವ ಸಾವರ್ಕರ್ ಅವರ ನಿಜಬಣ್ಣವನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ. ಒಂದೆಡೆ ಗೋಡ್ಸೆಗೂ ಗಾಂಧಿ ಹತ್ಯೆಗೂ ಸಂಬಂಧವಿಲ್ಲ ಎನ್ನುತ್ತಲೇ ಒಳಗೊಳಗೆ ಗೋಡ್ಸೆಯ ಮೇಲೂ, ಅವನನ್ನು ಸಿದ್ಧಪಡಿಸಿದ ಸಾವರ್ಕರ್‌ನ್ನು ವೈಭವೀಕರಿಸುವ ರಾಜಕಾರಣದ ಮುಖವಾಡವನ್ನು ಎ.ಜಿ. ನೂರಾನಿ ಅವರು ಬರೆದಿರುವ ‘ಸಾವರ್ಕರ್, ಗೋಡ್ಸೆ ನಂಟು ಮತ್ತು ಹಿಂದುತ್ವ ಸಿದ್ಧಾಂತ’ ಕೃತಿ ಬಯಲಿಗೆಳೆಯುತ್ತದೆ. ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿವೆ.

ಸಾವರ್ಕರ್ ಪ್ರತಿಪಾದಿಸುವ ಮಿಥ್ಯೆಗಳು ಹೇಗೆ ಅಡ್ವಾಣಿಯವರ ಮೂಲಕ ಈ ದೇಶದಲ್ಲಿ ಯಾವ ಮುಜುಗರವೂ ಇಲ್ಲದೆ ಅನುಷ್ಠಾನಕ್ಕೆ ಇಳಿಯಿತು ಎನ್ನುವುದನ್ನು ಕೃತಿಯ ಮೊದಲ ಅಧ್ಯಾಯ ಹೇಳುತ್ತದೆ. ಅಡ್ವಾಣಿಯವರು ಅಂಡಮಾನ್‌ಗೆ ಭೇಟಿ ನೀಡಿ, ವಿಮಾನ ನಿಲ್ದಾಣಕ್ಕೆ ಸಾವರ್ಕರ್ ಅವರ ಹೆಸರನ್ನು ಮರು ನಾಮಕರಣ ಮಾಡುವುದರ ಹಿಂದಿನ ಸಂಚುಗಳನ್ನು ವಿವರಿಸುವ ಪ್ರಯತ್ನವನ್ನು ನೂರಾನಿ ಈ ಅಧ್ಯಾಯದಲ್ಲಿ ಮಾಡುತ್ತಾರೆ. ಹಿಂದುತ್ವ ಸಿದ್ಧಾಂತವನ್ನು ಅಧಿಕೃತವಾಗಿ ಈ ದೇಶ ಒಪ್ಪಬೇಕು ಎನ್ನುವ ಸಂದೇಶವನ್ನು ಅವರು ಈ ಕಾರ್ಯಕ್ರಮದಲ್ಲಿ ನೀಡಿದರು. ತನ್ನ ಹಿಂದುತ್ವದ ರಾಷ್ಟ್ರೀಯವಾದಕ್ಕಾಗಿ ಸ್ವಾತಂತ್ರ ಹೋರಾಟಗಾರರ ವಿರುದ್ಧ ಸಂಚು ಹೂಡಿ, ಬ್ರಿಟಿಷರಿಗೆ ಪರೋಕ್ಷ ನೆರವು ನೀಡಿದ ಸಾವರ್ಕರ್ ಅವರ ನಿಜ ವ್ಯಕ್ತಿತ್ವವನ್ನು ಮುಚ್ಚಿಟ್ಟು, ಕಲ್ಪಿತ ಮುಖವಾಡವನ್ನು ದೇಶದ ಮುಂದೆ ಅಡ್ವಾಣಿ ಯಾವ ಮುಜುಗರವೂ ಇಲ್ಲದೆ ಇಟ್ಟರು. ಇದೊಂದು ಭಂಡ ಸುಳ್ಳುಗಾರಿಕೆ ಎಂದು ಲೇಖಕರು ಹೇಳುತ್ತಾರೆ. ಗಾಂಧೀ ಕೊಲೆಯಲ್ಲಿ ಸಾವರ್ಕರ್ ಪಾತ್ರವನ್ನು ಹೇಳುವುದಲ್ಲದೆ, ಸಾವರ್ಕರ್‌ರ ರಾಜಕೀಯ ಬದುಕಿನ ಹಂತಗಳನ್ನು ಆಳವಾಗಿ ಚರ್ಚಿಸುತ್ತಾರೆ. ಅತ್ಯಂತ ಆಘಾತಕಾರಿ ಮಾಹಿತಿಗಳನ್ನು ಈ ಪುಸ್ತಕ ತೆರೆದಿಡುತ್ತದೆ. ಬಹುಶಃ ಅಡ್ವಾಣಿ ಬಿತ್ತಿದ ಸುಳ್ಳಿನ ಮುಳ್ಳಿನ ಮರ ಇಂದು ದೇಶದಾದ್ಯಂತ ವಿಸ್ತಾರವಾಗುತ್ತಿದೆ ಮತ್ತು ದೇಶದ ಆತ್ಮವನ್ನು ಇರಿಯುತ್ತಿದೆ. ಸಾವರ್ಕರ್ ರಾಷ್ಟ್ರೀಯವಾದದ ಗುರಿಯೇನು, ಅಂಡಮಾನ್ ದ್ವೀಪ ಸಮೂಹ ಮತ್ತು ಹಿಂದುತ್ವದ ಉಗಮ, ಹಿಂದುತ್ವಕ್ಕೆ ಎದುರಾಗಿ ಹಿಂದೂ ಧರ್ಮ, ಗಾಂಧಿ ಹತ್ಯೆ ಮತ್ತು ಅದರ ಪರಿಣಾಮಗಳು ಈ ಎಲ್ಲ ಅಧ್ಯಾಯಗಳು ವರ್ತಮಾನದ ರಾಜಕೀಯ ಹಿಂಸೆಗಳ ಹಿಂದಿರುವ ಕಾರಣಗಳನ್ನು ನಮಗೆ ಕಾಣಿಸಿಕೊಡುತ್ತದೆ.

ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 232. ಮುಖಬೆಲೆ 120 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News