ಬೇಕಿದ್ದರೆ ಒಂದೇ ನಿಮಿಷದಲ್ಲಿ ಸಿಎಂ ಆಗಬಲ್ಲೆ ಎಂದ ಹೇಮಾಮಾಲಿನಿ

Update: 2018-07-27 09:22 GMT

ಮಥುರಾ,ಜು.27 : ನಟಿ, ರಾಜಕಾರಣಿ ಹೇಮಾ ಮಾಲಿನಿಗೆ ಮುಖ್ಯಮಂತ್ರಿಯಾಗುವ ಹಂಬಲವಿಲ್ಲ, ಆದರೆ ಅವರಿಗೆ ಮುಖ್ಯಮಂತ್ರಿಯಾಗಬೇಕೆಂದಿದ್ದರೆ ಅದು ಚಿಟಿಕೆ ಹೊಡೆದಷ್ಟೇ ಸುಲಭವಂತೆ. "ನನಗೆ ಬೇಕಿದ್ದರೆ ನಾನು  ಒಂದೇ ನಿಮಿಷದಲ್ಲಿ (ಮುಖ್ಯಮಂತ್ರಿ) ಆಗಬಲ್ಲೆ,'' ಎಂದು  ಒಂದು ದಶಕಕ್ಕೂ ಹಿಂದೆ  ರಾಜಕೀಯ ಪ್ರವೇಶಿಸಿದ್ದ ಹೇಮಾಮಾಲಿನಿ ರಾಜಸ್ಥಾನದ ಬಾನಸ್ವರ ಎಂಬಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದ್ದಾರೆ. ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ಅವರು ನಗರಕ್ಕೆ ಆಗಮಿಸಿದ್ದರು.

ಆದರೆ ತನಗೆ ಮುಖ್ಯಮಂತ್ರಿಯಾಗುವ ಹಂಬಲವೇನೂ ಇಲ್ಲ ಎನ್ನುವ ಅವರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಮುಖ್ಯಮಂತ್ರಿಯಾಗುವ ಅವಕಾಶ ನಿಮಗೆ ಒದಗಿ ಬಂದರೆ ಒಪ್ಪಿಕೊಳ್ಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, "ನನಗೆ ಕಟ್ಟಿ ಹಾಕಿಟ್ಟಂತಹ ಪರಿಸ್ಥಿತಿ ಬೇಡ. ಬೇಕಿದ್ದಲ್ಲಿ ಹೋಗುವ ನನ್ನ ಸ್ವಾತಂತ್ರ್ಯ ಆಗ ಇರುವುದಿಲ್ಲ,'' ಎಂದು ಹೇಳಿದರು.

ಹೇಮಾ ಮಾಲಿನಿಗೆ 2003ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರ ರಾಜ್ಯಸಭಾ ಸದಸ್ಯತ್ವ ನೀಡಿತ್ತು. ಅದಕ್ಕೂ ಹಿಂದೆ ಆಕೆ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದರೂ 2004ರಲ್ಲಿ ಆಕೆ ಅಧಿಕೃತವಾಗಿ ಬಿಜೆಪಿ ಸೇರಿದ್ದರು. 2010ರಲ್ಲಿ ಆಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರೆ 2011ರಲ್ಲಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2014ರಲ್ಲಿ ಅವರು ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಅಜಿತ್ ಸಿಂಗ್ ಅವರ ಪುತ್ರ ಜಯಂತ್ ಚೌಧುರಿ ವಿರುದ್ಧ ಭಾರೀ ಅಂತರದಿಂದ ಜಯ ಗಳಿಸಿದ್ದರು. ಮಥುರಾದ ಸಂಸದೆಯಾಗಿರುವ ಹೇಮಾ ಮಾಲಿನಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರಲ್ಲದೆ ದೇಶವಿದೇಶಗಳಲ್ಲಿ 1000ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News