ಟಿಪ್ಪು ಸುಲ್ತಾನ್ ಕಾಲದ 1,000ಕ್ಕೂ ಅಧಿಕ ರಾಕೆಟ್ ಗಳು ಪತ್ತೆ

Update: 2018-07-28 15:34 GMT

ಶಿವಮೊಗ್ಗ, ಜು. 28: ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಯುದ್ದಗಳಲ್ಲಿ ರಾಕೆಟ್ ಬಳಕೆ ಮಾಡಿದ ಕೀರ್ತಿಗೆ ಪಾತ್ರನಾದ ಕರ್ನಾಟಕ ರಾಜ್ಯದ ದೊರೆ, 'ಮೈಸೂರು ಹುಲಿ' ಖ್ಯಾತಿಯ ಟಿಪ್ಪು ಸುಲ್ತಾನ್ ಕಾಲದ ಸಾವಿರಕ್ಕೂ ಅಧಿಕ ಕಬ್ಬಿಣದ ರಾಕೆಟ್‍ಗಳು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ, ಈ ಹಿಂದೆ ಕೆಳದಿ ಅರಸರ ಮೂರನೇ ರಾಜಧಾನಿಯಾಗಿದ್ದ ಬಿದನೂರು ನಗರ ಗ್ರಾಮದ ತೋಟದ ಪಾಳು ಬಾವಿ ಹಾಗೂ ಈ ಹಿಂದೆ ಆ ಬಾವಿಯಿಂದ ತೆಗೆದು ಹಾಕಿದ್ದ ಮಣ್ಣಿನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. 

ನಿವೃತ್ತ ಪ್ರಾಂಶುಪಾಲ ನಾಗರಾಜ್‍ರಾವ್‍ರವರ ತೋಟದ ಬಾವಿಯ ಮಣ್ಣಿನಲ್ಲಿ ಈ ರಾಕೆಟ್‍ಗಳು ಪತ್ತೆಯಾಗಿವೆ. ಪುರಾತತ್ವ ಇಲಾಖೆಯ ಆಯುಕ್ತ ವೆಂಕಟೇಶ್ ಹಾಗೂ ಸಹಾಯಕ ನಿರ್ದೇಶಕ ಶ್ರೇಜೇಶ್ವರ್‍ರವರ ನೇತೃತ್ವದಲ್ಲಿ ನಡೆದ ಈ ಶೋಧದಲ್ಲಿ, ಸುಮಾರು 700 ಕ್ಕೂ ಹೆಚ್ಚು ರಾಕೆಟ್‍ಗಳನ್ನು ಪತ್ತೆ ಹಚ್ಚಿ ಸಂರಕ್ಷಿಸಲಾಗಿದೆ. 

ಜು. 25 ರಿಂದ ಆರಂಭವಾದ ಉತ್ಖನನ ಕಾರ್ಯವು ಜು. 27 ರವರೆಗೆ ಸತತ ಮೂರು ದಿನಗಳ ಕಾಲ ನಡೆದಿದೆ. ಈ ರಾಕೆಟ್‍ಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಅರಮನೆಯ ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಗಿದೆ. ಒಟ್ಟಾರೆ ಇಲ್ಲಿಯವರೆಗೂ ಬಿದನೂರಿನ ಈ ಬಾವಿಯಲ್ಲಿ ಸಿಕ್ಕ ಟಿಪ್ಪು ಕಾಲಕ್ಕೆ ಸೇರಿದ ರಾಕೆಟ್‍ಗಳ ಸಂಖ್ಯೆ 1200 ಕ್ಕೂ ಅಧಿಕವಾಗಿದೆ ಎಂದು ಪುರಾತತ್ವ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

ಮೊದಲೇ ಪತ್ತೆಯಾಗಿತ್ತು: ಹೊಸನಗರ ತಾಲೂಕಿನ ಬಿದನೂರು ನಗರದ ಬಾವಿಯಲ್ಲಿ 2002 ರಲ್ಲಿಯೇ ಟಿಪ್ಪು ಸುಲ್ತಾನ್ ಕಾಲದ ರಾಕೆಟ್‍ಗಳು ಪತ್ತೆಯಾಗಿದ್ದವು. ಆದರೆ ಇವುಗಳನ್ನು ಫಿರಂಗಿಗೆ ಬಳಸಲಾಗುವ ಮದ್ದುಗುಂಡುಗಳು ಎಂದು ಭಾವಿಸಲಾಗಿತ್ತು. ಈ ವೇಳೆ ಸುಮಾರು 160 ಕ್ಕೂ ಹೆಚ್ಚು ರಾಕೆಟ್‍ಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ ಕೊಂಡೊಯ್ದು, ಶಿವಮೊಗ್ಗ ನಗರದ ಶಿವಪ್ಪನಾಯಕ ಅರಮನೆ ಸಂಗ್ರಹಾಲಯದಲ್ಲಿಟ್ಟಿದ್ದರು. 

ನಂತರದ ವರ್ಷಗಳಲ್ಲಿ ನಡೆದ ಪರಿಶೀಲನೆಯ ವೇಳೆ, ಬಾವಿಯಲ್ಲಿ ಪತ್ತೆಯಾದವು ಫಿರಂಗಿಗೆ ಬಳಸುವ ಮದ್ದು-ಗುಂಡಗಳಲ್ಲ ರಾಕೆಟ್‍ಗಳಾಗಿವೆ ಎಂಬುವುದು ಗೊತ್ತಾಗಿತ್ತು. ಬಾವಿಯಿಂದ ಎತ್ತಿ ಹಾಕಿದ್ದ ಮಣ್ಣಿನಲ್ಲಿದ್ದ ರಾಕೆಟ್‍ಗಳ ಪರಿಶೀಲನೆ ನಡೆಸುವ ಗೋಜಿಗೆ, ಅಂದಿನ ಅಧಿಕಾರಿಗಳು ಹೋಗಿರಲಿಲ್ಲ. ಇದರಿಂದ ನೂರಾರು ಸಂಖ್ಯೆಯ ರಾಕೆಟ್‍ಗಳು ಮಣ್ಣಿನಲ್ಲಿಯೇ ಉಳಿದುಕೊಂಡಿದ್ದವು. 

ಈ ಬಗ್ಗೆ ಮಾಹಿತಿ ಪಡೆದುಕೊಂಡ ಪುರಾತತ್ವ ಇಲಾಖೆಯ ಆಯುಕ್ತ ವೆಂಕಟೇಶ್ ಹಾಗೂ ಸಹಾಯಕ ನಿರ್ದೇಶಕ ಶ್ರೇಜೇಶ್ವರ್ ನೇತೃತ್ವದ ತಂಡವು, ಇತ್ತೀಚೆಗೆ ಸ್ಥಳಕ್ಕೆ ಆಗಮಿಸಿ ಕೂಲಂಕಷ ಪರಿಶೀಲನೆ ನಡೆಸಿತ್ತು. ಬಾವಿ ಹಾಗೂ ತೆಗೆದು ಹಾಕಿದ್ದ ಮಣ್ಣಿನಲ್ಲಿದ್ದ ಸುಮಾರು ಸಾವಿರಕ್ಕೂ ಅಧಿಕ ರಾಕೆಟ್‍ಗಳನ್ನು ಪತ್ತೆ ಹಚ್ಚಿತ್ತು. ಇದರಿಂದ ಇಲ್ಲಿಯವರೆಗೂ ಬಾವಿಯಲ್ಲಿ ಪತ್ತೆಯಾದ ರಾಕೆಟ್‍ಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. 

ಅಪರೂಪದ್ದು: ಬಿದನೂರಿನಲ್ಲಿ ಪತ್ತೆಯಾಗಿರುವ ರಾಕೆಟ್‍ಗಳು ಅತ್ಯಂತ ಅಪರೂಪದ, ಮಹತ್ವದ ಐತಿಹಾಸಿಕ ವಸ್ತುಗಳಾಗಿವೆ. 18 ನೇ ಶತಮಾನದಲ್ಲಿಯೇ ರಾಕೆಟ್ ತಂತ್ರಜ್ಞಾನ ಭಾರತೀಯರಿಗೆ ತಿಳಿದಿತ್ತು ಎಂಬುವುದು ಇದರಿಂದ ಸಾಬೀತಾಗುತ್ತದೆ. ಅದರಲ್ಲಿಯೂ ಕರ್ನಾಟಕದ ದೊರೆ ಟಿಪ್ಪು ಸುಲ್ತಾನ್ ಆಡಳಿತಾವಧಿಯಲ್ಲಿ ಈ ರಾಕೆಟ್ ತಯಾರಿಸಲಾಗಿತ್ತು ಎಂಬುವುದು ಮತ್ತೊಂದು ಮುಖ್ಯ ಸಂಗತಿಯಾಗಿದೆ. 

ಈ ರಾಕೆಟ್‍ಗಳನ್ನು ಇಲ್ಲಿಯವರೆಗೂ ಒಟ್ಟಾರೆ ಎರಡು ಕಡೆ ಮಾತ್ರ ನೋಡಬಹುದಾಗಿತ್ತು. ಬೆಂಗಳೂರಿನ ಮ್ಯೂಸಿಯಂನಲ್ಲಿ ಮೂರು ರಾಕೆಟ್‍ಗಳಿವೆ. ಹಾಗೆಯೇ ಇಂಗ್ಲೆಂಡ್‍ನ ಲಂಡನ್ ಮ್ಯೂಸಿಯಂನಲ್ಲಿಯೂ ಒಂದು ರಾಕೆಟ್ ಇದ್ದು, ಅದನ್ನು ಬೆಂಗಳೂರಿನ ಮ್ಯೂಸಿಯಂನಿಂದ ಕೊಂಡೊಯ್ದು ಪ್ರದರ್ಶನಕ್ಕಿಟ್ಟಿರುವ ದಾಖಲೆಗಳಿವೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. 

ಪ್ರಸ್ತುತ ಬಿದನೂರಿನಲ್ಲಿ ಲಭ್ಯವಾಗಿರುವ ಸಾವಿರಕ್ಕೂ ಅಧಿಕ ರಾಕೆಟ್‍ಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಅರಮನೆ ವಸ್ತು ಸಂಗ್ರಹಾಲಯದಲ್ಲಿಡಲು ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದು, ಇದಕ್ಕಾಗಿ ಪ್ರತ್ಯೇಕ ಗ್ಯಾಲರಿ ಸ್ಥಾಪಿಸಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 

ರಾಕೆಟ್ ಗ್ಯಾಲರಿ ಸ್ಥಾಪನೆ : ಸಹಾಯಕ ನಿರ್ದೇಶಕ ಶ್ರೇಜೇಶ್ವರ್ ಮಾಹಿತಿ

'ಇಲಾಖೆಯ ಆಯುಕ್ತರಾದ ವೆಂಕಟೇಶ್‍ರವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸತತ ಮೂರು ದಿನಗಳ ಕಾಲ ಉತ್ಖನನ ಕಾರ್ಯ ನಡೆಸಲಾಯಿತು. ಈ ವೇಳೆ ಸಾವಿರಕ್ಕೂ ಅಧಿಕ ಕಬ್ಬಿಣದ ರಾಕೆಟ್‍ಗಳು ಪತ್ತೆಯಾಗಿವೆ. ಇವುಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಅರಮನೆಯಲ್ಲಿ ಬಿದನೂರು ರಾಕೆಟ್ ಗ್ಯಾಲರಿ ಸ್ಥಾಪಿಸಿ ಸಂಗ್ರಹಿಸಿಡಲು ನಿರ್ಧರಿಸಲಾಗಿದೆ' ಎಂದು  ಶಿವಮೊಗ್ಗ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಶ್ರೇಜೇಶ್ವರ್‍ರವರು ಮಾಹಿತಿ ನೀಡಿದ್ದಾರೆ. 

ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2002 ರಲ್ಲಿ ನಡೆದ ಉತ್ಖನನದ ವೇಳೆ ಸುಮಾರು 160 ರಾಕೆಟ್‍ಗಳು ಪತ್ತೆಯಾಗಿದ್ದವು. ಇವುಗಳನ್ನು ಮದ್ದು-ಗುಂಡುಗಳೆಂದು ಭಾವಿಸಲಾಗಿತ್ತು. 2007 ರಲ್ಲಿ ಇವು ಟಿಪ್ಪು ಸುಲ್ತಾನ್ ಕಾಲದ ರಾಕೆಟ್‍ಗಳಾಗಿವೆ ಎಂಬುವುದು ಗೊತ್ತಾಗಿತ್ತು. ಇದರ ಆಧಾರದ ಮೇಲೆ ಹೆಚ್ಚಿನ ಉತ್ಖನನ ನಡೆಸಿದಾಗ ಸಾವಿರಾರು ರಾಕೆಟ್‍ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

ಹೈದರ್ ಆಲಿ ಹಾಗೂ ಟಿಪ್ಪು ಸುಲ್ತಾನ್ ಕಾಲದಲ್ಲಿ ರಾಕೆಟ್ ತಂತ್ರಜ್ಞಾನ ಅಭಿವೃದ್ದಿಯಾಗಿತ್ತು. 2 ನೇ ಆಂಗ್ಲೋ ಮೈಸೂರು ಯುದ್ದದ ಕಾಲದಲ್ಲಿ ಕಬ್ಬಿಣದ ರಾಕೆಟ್‍ಗಳ ಬಳಕೆ ಮಾಡಲಾಗಿತ್ತು. ತದನಂತರದ ಯುದ್ದಗಳಲ್ಲಿಯೂ ಈ ರಾಕೆಟ್‍ಗಳ ಉಪಯೋಗವನ್ನು ಟಿಪ್ಪು ಸುಲ್ತಾನ್ ಮಾಡಿದ್ದರು ಎಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ ಎಂದು ಹೇಳುತ್ತಾರೆ. 

ಮಣ್ಣಿನಲ್ಲಿ ಹೂತ್ತಿದ್ದ ರಾಕೆಟ್ ಗಮನಿಸಿಯೇ ಇರಲಿಲ್ಲ!
2002 ರಲ್ಲಿ ಬಾವಿಯಲ್ಲಿದ್ದ ರಾಕೆಟ್‍ಗಳನ್ನು ಪತ್ತೆ ಹಚ್ಚಿ ಹೊರತೆಗೆದಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು, ಬಾವಿಯಿಂದ ತೆಗೆದು ಹಾಕಿದ್ದ ಮಣ್ಣಿನಲ್ಲಿದ್ದ ರಾಕೆಟ್‍ಗಳನ್ನು ಗಮನಿಸಿಯೇ ಇರಲಿಲ್ಲ. ಈ ರಾಕೆಟ್‍ಗಳು ಮಣ್ಣಿನಲ್ಲಿಯೇ ಹೂತು ಹೋಗಿದ್ದವು. ಇತ್ತೀಚೆಗೆ ಈ ಸ್ಥಳದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲನೆ ನಡೆಸಿದ ವೇಳೆ, 1000 ಕ್ಕೂ ಅಧಿಕ ರಾಕೆಟ್‍ಗಳು ಪತ್ತೆಯಾಗಿವೆ. ಇದು ಇತಿಹಾಸ ತಜ್ಞರನ್ನೇ ನಿಬ್ಬೆರಗಾಗುವಂತೆ ಮಾಡಿದೆ. 

ಕಳೆದಿ ಅರಸರ ರಾಜಧಾನಿಯಾಗಿದ್ದ ಬಿದನೂರು
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ, ಪ್ರಸ್ತುತ ಟಿಪ್ಪು ಸುಲ್ತಾನ್ ಕಾಲಕ್ಕೆ ಸೇರಿದ ಸಾವಿರಕ್ಕೂ ಅಧಿಕ ರಾಕೆಟ್‍ಗಳು ಪತ್ತೆಯಾಗಿರುವ ಬಿದನೂರು ನಗರ ಪ್ರದೇಶವು ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಹಿಂದೆ ಕೆಳದಿ ಅರಸರ ಮೂರನೇ ರಾಜಧಾನಿಯಾಗಿತ್ತು. ಬಿದನೂರನ್ನು ರಾಜಧಾನಿಯಾಗಿ ಮಾಡಿಕೊಂಡ ನಂತರ ಕೆಳದಿ ಸಾಮ್ರಾಜ್ಯ ಉತ್ತುಂಗ ಸ್ಥಿತಿಗೆ ತಲುಪಿತ್ತು. ಈ ಪ್ರದೇಶ ದಾಳಿಗೊಳಗಾಗಿ ಹೈದರ್ ನಗರವಾಗಿ ಹೆಸರು ಪರಿವರ್ತಿತವಾಗಿತ್ತು ಎಂದು ಕೆಲ ಇತಿಹಾಸ ತಜ್ಞರು ಹೇಳುತ್ತಾರೆ. 

ಸಾವಿರಾರು ರಾಕೆಟ್‍ಗಳು ಪತ್ತೆಯಾಗಿರುವುದನ್ನು ಗಮನಿಸಿದರೆ ಬಿದನೂರು ನಗರದಲ್ಲಿ ಮದ್ದು-ಗುಂಡುಗಳ ಗೋದಾಮು ಈ ಹಿಂದೆ ಇರುವಂತೆ ಕಂಡುಬರುತ್ತದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಈ ಹಿಂದೆ ರಾಕೆಟ್‍ಗಳು ಪತ್ತೆಯಾದ ವೇಳೆ ಪೂಜಾ ಸಾಮಗ್ರಿಗಳು, ನಾಲ್ಕೈದು ಅಡಿ ವಿಸ್ತೀರ್ಣದ ವೃತ್ತಾಕಾರದ ಕಬ್ಬಿಣದ ಮುಚ್ಚಳ, ಏತ ನೀರಾವರಿಗೆ ಬಳಸುವ ಕಬ್ಬಿಣದ ಹಿಡಿಗಳು, ಮರದ ವಸ್ತುಗಳು, ಅಡುಗೆ ಪರಿಕರಗಳು ಕೂಡ ಬಾವಿಯಲ್ಲಿ ಪತ್ತೆಯಾಗಿದ್ದವು. ಬಿದನೂರು ಪ್ರದೇಶವು ಟಿಪ್ಪು ಸುಲ್ತಾನ್‍ನ ಆಯುಧ ಶಾಲೆಯಾಗಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಪುರಾತತ್ವ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News