3 ವರ್ಷ 5 ತಿಂಗಳ ಬಳಿಕ ನಿಲ್ದಾಣ ತಲುಪಿದ ಗೂಡ್ಸ್ ರೈಲು!

Update: 2018-07-28 09:35 GMT

ಹೊಸದಿಲ್ಲಿ, ಜು.28: ನಾಲ್ಕು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಬುಕ್ ಮಾಡಲ್ಪಟ್ಟ ಗೂಡ್ಸ್ ವ್ಯಾಗನ್ ಒಂದು  ಬರೋಬ್ಬರಿ 3 ವರ್ಷ 5 ತಿಂಗಳುಗಳ ನಂತರ 1,400 ಕಿಮೀ ದೂರ ಕ್ರಮಿಸಿ ಉತ್ತರ ಪ್ರದೇಶದ ಬಸ್ತಿ ತಲುಪಿದೆ.

ವಿಶಾಖಪಟ್ಣಂನಿಂದ ಉತ್ತರ ಪ್ರದೇಶದ ಬಸ್ತಿಗೆ ರಸಗೊಬ್ಬರ ಸಾಗಿಸಲೆಂದು ವ್ಯಾಪಾರಿಯೊಬ್ಬರು ಅದನ್ನು ಬುಕ್ ಮಾಡಿದ್ದರು. ಆದರೆ ಹಲವಾರು ತಿಂಗಳುಗಳ ನಂತರವೂ ವ್ಯಾಗನ್ ಪತ್ತೆಯಾಗಿಲ್ಲದೇ ಇರುವುದರಿಂದ ಆ ವ್ಯಾಪಾರಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಅಧಿಕಾರಿಗಳು ಯಾವುದೇ ವಿವರಣೆ ನೀಡುವ ಸ್ಥಿತಿಯಲ್ಲಿರಲಿಲ್ಲ. ವಿಶಾಖಪಟ್ಣಂನ ಸಾರ್ವಜನಿಕ ರಂಗದ ಸಂಸ್ಥೆ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಸಂಸ್ಥೆಯಿಂದ ಈ ರಸಗೊಬ್ಬರ ಕಳುಹಿಸಲಾಗಿತ್ತು.

ಅದೆಲ್ಲಿದೆ ಎಂದು ಅಧಿಕಾರಿಗಳಿಗೆ ತಿಳಿಯದೇ ಇದ್ದರೂ ಗುರುವಾರ ಅದು ತನ್ನ ನಿಗದಿತ ಬಸ್ತಿ ರೈಲ್ವೆ ನಿಲ್ದಾಣವನ್ನು ತಲುಪಿತ್ತು. ಆದರೆ ಅಷ್ಟರೊಳಗಾಗಿ ಅದರಲ್ಲಿದ್ದ ಎಲ್ಲಾ ರಸಗೊಬ್ಬರ ಹಾಳಾಗಿ ಹೋಗಿತ್ತು.

ಭಾರತೀಯ ರೈಲ್ವೆ ಈ ರೀತಿಯ ಪ್ರಮಾದಗೈದಿರುವುದು ಇದೇ ಮೊದಲ ಬಾರಿಯೇನಲ್ಲ. ಮಾರ್ಚ್ ತಿಂಗಳಲ್ಲಿ ಪಾಣಿಪತ್ ನಿಂದ ದಿಲ್ಲಿಗೆ ಹೊರಟಿದ್ದ ರೈಲು ಬೇರೆ ಹಾದಿಯಲ್ಲಿ ಚಲಿಸಿ ಕೊನೆಗೆ ಹೊಸದಿಲ್ಲಿ ರೈಲ್ವೆ ನಿಲ್ದಾಣದ ಬದಲು ಹಳೆದಿಲ್ಲಿ ರೈಲ್ವೆ ನಿಲ್ದಾಣ ತಲುಪಿತ್ತು. ಈ ಸಂಬಂಧ ಒಬ್ಬ ಉದ್ಯೋಗಿಯನ್ನು ವಜಾಗೊಳಿಸಲಾಗಿತ್ತು.

ಕಳೆದ ತಿಂಗಳು ಹೊಸದಿಲ್ಲಿ-ರಾಂಚಿ ನಡುವೆ ಸಂಚರಿಸುವ ರೈಲುಗಳ ಹೊಸ ಕೋಚುಗಳು ಕಾಣೆಯಾಗಿದ್ದವು. ಇವುಗಳು ರಾಜಧಾನಿ ಎಕ್ಸ್‍ಪ್ರೆಸ್ ಹಾಗೂ ಸಂಪರ್ಕ್ ಕ್ರಾಂತಿ ಎಕ್ಸ್‍ಪ್ರೆಸ್ ಗೆ ಸೇರಿದ್ದವು. ಈ ಕೋಚುಗಳ ಕಳ್ಳತನದ ಹಿಂದೆ ಕೆಲ ಗ್ಯಾಂಗುಗಳ ಕೈವಾಡವಿದೆಯೆಂದು ರೈಲ್ವೆ ಇಲಾಖೆ ಅಂದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News