ಮಡಿಕೇರಿ: ಚಲಿಸುತ್ತಿದ್ದ ರಿಕ್ಷಾದ ಮೇಲೆ ಕಾಡಾನೆ ದಾಳಿ; ಪ್ರಯಾಣಿಕರು ಅಪಾಯದಿಂದ ಪಾರು

Update: 2018-07-29 11:31 GMT

ಮಡಿಕೇರಿ, ಜು. 29: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾ ಮೇಲೆ ಕಾಡಾನೆ ಹಿಂಡು ದಾಳಿ ಮಾಡಿದ ಘಟನೆ ಸಿದ್ದಾಪುರ ಸಮೀಪದ ಬಜೆಕೊಲ್ಲಿಯಲ್ಲಿ ನಡೆದಿದೆ. 

ಕಾಡಾನೆ ದಾಳಿಯಿಂದ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮುಹಮ್ಮದ್ ಎಂಬುವವರು ತಮ್ಮ ಆಟೋದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಬಜೆಕೊಲ್ಲಿಯಿಂದ ಸಿದ್ದಾಪುರ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ಆಲತೋಪು ಎಂಬಲ್ಲಿ ರಸ್ತೆಯ ಮಧ್ಯೆ ಕಾಡಾನೆಯ ಹಿಂಡು ದಿಢೀರ್ ಪ್ರತ್ಯಕ್ಷವಾಗಿದೆ. ಈ ಸಂದರ್ಭ ಗಾಬರಿಗೊಂಡ ಚಾಲಕ ಹಾಗೂ ಪ್ರಯಾಣಿಕರು ಆಟೋವನ್ನು ರಸ್ತೆಯಲ್ಲೇ ಬಿಟ್ಟು ಜೀವಭಯದಿಂದ ಓಡಿ ಹೋಗಿದ್ದಾರೆ. 

ರೋಷಗೊಂಡ ಕಾಡಾನೆಯ ಹಿಂಡು ಆಟೋ ಮೇಲೆ ದಾಳಿ ಮಾಡಿ ಸೊಂಟಲಿನಿಂದ ಆಟೋವನ್ನು ಸಮೀಪದ ತೋಟಕ್ಕೆ ಎತ್ತಿ ಬಿಸಾಡಿದೆ. ದಾಳಿಗೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಮುಹಮ್ಮದ್ ಮತ್ತು ಪ್ರಯಾಣಿಕರಾದ ಬಾಲಕೃಷ್ಣ ಹಾಗೂ ಸೇತುರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸ್ಥಳಕ್ಕೆ ಅರಣ್ಯಾಧಿಕಾರಿ ದೇವಯ್ಯ, ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‍ಐ ಹೆಚ್.ಎಸ್.ಬೋಜಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮಾಹಿತಿ ನೀಡದೆ ಆನೆ ಓಡಿಸಿದ್ದೇ ದಾಳಿಗೆ ಕಾರಣ

ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಫಿ ತೋಟದಿಂದ ಓಡಿಸುತ್ತಿದ್ದ ಸಂದರ್ಭ ರಸ್ತೆ ಮಾರ್ಗವಾಗಿ ಬಂದ ಕಾಡಾನೆಯ ಹಿಂಡು ಎದುರಿಗೆ ಬಂದ ಆಟೋ ಮೇಲೆ ದಾಳಿ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಾಹಿತಿ ನೀಡದೆ ಕಾಡಾನೆಗಳನ್ನು ಓಡಿಸುತ್ತಿದ್ದ ಅರಣ್ಯ ಸಿಬ್ಬಂದಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಒತ್ತಾಯ
ಆಟೋ ಓಡಿಸಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಮುಹಮ್ಮದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡಬೇಕೆಂದು ಗ್ರಾ.ಪಂ ಸದಸ್ಯ ಎ.ಎಸ್.ಹುಸೈನ್ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News