ಫಾಸ್ಟ್ ಫುಡ್‍ಗಳಿಂದ ಸಾಂಪ್ರದಾಯಿಕ ಖಾದ್ಯಗಳಿಗೆ ಹಿನ್ನಡೆ: ಎಂಎಲ್‍ಸಿ ವೀಣಾಅಚ್ಚಯ್ಯ

Update: 2018-07-29 12:07 GMT

ಮಡಿಕೇರಿ ಜು.29: ಬಾಯಲ್ಲಿ ನೀರೂರಿಸುವ ಕೊಡಗಿನ ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳ ರುಚಿ ಸವಿಯುವ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ಭಾನುವಾರ ನಡೆಯಿತು. 

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕೊಡವ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು ಮೇಳೈಸಿದವು. 

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಫಾಸ್ಟ್ ಫುಡ್‍ಗಳ ಹವ್ಯಾಸದಿಂದಾಗಿ ಸಾಂಪ್ರದಾಯಿಕ ಖಾದ್ಯಗಳ ಮಹತ್ವ ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ಇಂದಿನ ಯುವ ಜನತೆಗೆ ಹಿಂದಿನ ಕಾಲದ ತಿನಿಸುಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಕಾಲ ಬದಲಾದಂತೆ ಫಾಸ್ಟ್ ಫುಡ್ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಅದರಂತೆಯೇ ಖಾಯಿಲೆಗಳು ಕೂಡ ಚಿಕ್ಕವಯಸ್ಸಿನಿಂದಲೇ ಆರಂಭವಾಗುತ್ತಿದೆ. ಹಾಗಾಗಿ ಮನೆಯ ಸುತ್ತಮುತ್ತ, ತೋಟಗಳಲ್ಲಿ ಸಿಗುವ ತರಕಾರಿ ಹಾಗೂ ಹಣ್ಣುಗಳಲ್ಲಿ ತಯಾರಿಸಿದ ಅಡುಗೆ ಸೇವಿಸಿದರೆ ಯಾವುದೇ ಖಾಯಿಲೆಗೆ ತುತ್ತಾಗುವುದಿಲ್ಲ ಎಂದರು.

ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಕೊಡವರು ಆಯಾ ಋತುವಿಗೆ ತಕ್ಕಂತೆ ಹಲವಾರು ತಿನಿಸುಗಳನ್ನು ತಯಾರಿಸುತ್ತಾರೆ. ಮರ, ಬಳ್ಳಿ, ನೀರು, ತೋಡು, ಗದ್ದೆ, ಬಾಣೆಗಳಲ್ಲಿ ವಿವಿಧ ರೀತಿಯ ಹಣ್ಣು-ತರಕಾರಿಗಳು ದೊರೆಯುತ್ತಿತ್ತು. ಆದರೆ ಇದೀಗ ಅವುಗಳೆಲ್ಲಾ ಕಣ್ಮರೆಯಾಗುತ್ತಾ ಹೋಗುತ್ತಿದೆ. ಅಂತಹ ಸ್ಥಳಗಳಲ್ಲಿ ಬೃಹತ್ ಕಟ್ಟಡಗಳು ತಲೆಎತ್ತಿವೆ. ಹಾಗಾಗಿ ಅಂದಿನ ಆಹಾರ ಪದ್ಧತಿ ಇಂದು ಕಡಿಮೆಯಾಗಿದೆ ಎಂದರು.

ಕೊಡವ ಅಕಾಡೆಮಿಯಿಂದ ಪೊಂಗುರಿ ಪುಸ್ತಕದ 3 ತಿಂಗಳ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕೊಡಗು ಕೃಷಿಗೆ ಹೆಸರುವಾಸಿಯಾದ ಜಿಲ್ಲೆಯಾಗಿದ್ದು, ಸಾಂಪ್ರದಾಯಿಕ ಖಾದ್ಯಗಳ ಬಗ್ಗೆ ಯುವ ಸಮೂಹ ಆಸಕ್ತಿ ವಹಿಸಬೇಕು. ಕೃಷಿಕರು ಮಳೆಗಾಲದಲ್ಲಿ ಗದ್ದೆಯನ್ನು ಉಳುಮೆ ಮಾಡಿ, ಭತ್ತ ಬೆಳೆಯುವಲ್ಲಿ ನಿರತರಾಗಿ ದಣಿದಿರುತ್ತಿದ್ದರು. ಅದರಿಂದ ಸುಧಾರಿಸಿಕೊಳ್ಳಲು ಕಕ್ಕಡ ಸಮಯದಲ್ಲಿ ಆಟಿ ಪಾಯಸ, ನಾಟಿ ಕೋಳಿ ಸಾರು ತಿಂದರೆ ಕುಗ್ಗಿ ಹೋದ ದೇಹ ಸರಿಯಾಗುತ್ತಿತ್ತು. ಅಂದಿನ ಪದ್ಧತಿಗಳನ್ನು ಮತ್ತೊಮ್ಮೆ ನೆನಪು ಮಾಡುವ ಹಾಗೂ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು ತಿಳಿಸಿದರು.

ಕೊಡವ ಸಮಾಜ ಒಕ್ಕೂಟ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ ಮಾತನಾಡಿ, ಹಲವಾರು ಕಡೆಗಳಲ್ಲಿ ಈ ರೀತಿಯ ಆಚರಣೆಗಳು ನಡೆಯುತ್ತಿದೆ. ಆದರೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ತೋಟಗಳಲ್ಲಿ ಸಿಗುವ ತರಕಾರಿಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಮಾದೇಟಿರ ಪ್ರಮೀಳಾ ಜೀವನ್ ಹಾಗೂ ತಂಡದವರು ಪ್ರಾರ್ಥಿಸಿದರು. ಅಕಾಡೆಮಿ ರಿಜಿಸ್ಟ್ರರ್ ಉಮರಬ್ಬ ಸ್ವಾಗತಿಸಿದರು. ಸಬಿತಾ ವಂದಿಸಿ, ಆಂಗೀರ ಕುಸುಮ್ ಕಾರ್ಯಕ್ರಮ ನಿರೂಪಿಸಿದರು. 

ರುಚಿ ರುಚಿಯಾದ ಖಾದ್ಯ
ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಉದ್ದೇಶದಿಂದ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು. ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು ಪ್ರತ್ಯೇಕ ವಿಭಾಗದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪುಟ್ಟ್ (ಹಿಟ್ಟು), ಕರಿ (ಸಾರು), ಯರ್ಚಿ ಕರಿ (ಮಾಂಸದ ಸಾರು) ಪಜ್ಜಿ (ಚಟ್ನಿ) ಹಾಗೂ ಪಾರ (ಉಪ್ಪಿನಕಾಯಿ) ವನ್ನು ತಯಾರಿಸಿಟ್ಟು ತೀನಿ ಕಾರ್ಯಕ್ರಮಕ್ಕೆ ಮಹಿಳೆಯರು ರಂಗು ನೀಡಿದರು.  

ರಸಪ್ರಶ್ನೆ ಕಾರ್ಯಕ್ರಮ
ಇದೇ ಸಂದರ್ಭ ಕೊಡವ ಸಾಂಪ್ರದಾಯಿಕ ಅಡುಗೆ ಪದ್ಧತಿ, ಪದಾರ್ಥ, ಬಳಸುವ ಸಾಮಗ್ರಿ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ಪರ್ಧಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡರು. 

ಸ್ಪರ್ಧಾ ವಿಜೇತರು
ಮಾಂಸದ ಸಾರು ಸ್ಪರ್ಧೆ: ಬೊಳ್ಳಜೀರ ಯಮುನಾ ಅಯ್ಯಪ್ಪ (ಪ್ರ), ಬಿ.ಲತಾ ಕರುಂಬಯ್ಯ (ದ್ವಿ), ಬಾಳೆಯಡ ಸರಿತಾ (ತೃ). 
ತರಕಾರಿ ಸಾರು: ಮತ್ರಂಡ ತಾರಾ ಪೂಣಚ್ಚ (ಪ್ರ), ಮುಕ್ಕಾಟೀರ ವಿಮಲ ಮುದ್ದಪ್ಪ (ದ್ವಿ), ಮುಕ್ಕಾಟೀರ ಅಂಜು ಸುಬ್ರಮಣಿ (ತೃ).
ಉಪ್ಪಿನ ಕಾಯಿ ವಿಭಾಗ: ಸಬಿತಾ ಸುಬ್ರಮಣಿ (ಪ್ರ), ತೇಲಪಂಡ ಮೀನಾ ಮಾದಪ್ಪ (ದ್ವಿ), ಪಳಂಗಡ ಕಮಲ ಸುಬ್ರಯ್ಯ (ತೃ)
ಚಟ್ನಿ ವಿಭಾಗ: ಕಾಂಡೇರ ಲತಾ ಕುಟ್ಟಪ್ಪ (ಪ್ರ), ತೆನ್ನೀರ ರಾಧಾ ಪೊನ್ನಪ್ಪ (ದ್ವಿ) ಸರಿತಾ ಪಿ.ಎನ್ ತೃತೀಯ ಸ್ಥಾನ ಪಡೆದುಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News